ಮೈಸೂರು: ಕರ್ನಾಟಕ ರಂಗಭೂಮಿಗೆ ಅಪಾರ ಕೊಡುಗೆ ನೀಡಿರುವ ಗುರು ಶ್ರೀ ಕೆ.ವಿ ಸುಬ್ಬಣ್ಣನವರ ನೆನಪಿನಲ್ಲಿ, ತಿಂಗಳಿಡೀ ನಟನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಇದೇ ಜುಲೈ 14 ಮತ್ತು 15ರಂದು ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ‘ಕೃಷ್ಣೇಗೌಡರ ಆನೆ’ ನಾಟಕವು ಶ್ರೀ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ರಂಗರೂಪ ಶ್ರೀ ಶಶಿಕಾಂತ ಯಡಹಳ್ಳಿ ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರದ್ದು.
ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು, ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು ಶ್ಲಾಘನೀಯ. ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು ಹಾಗೂ ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ಇದು ವಿಸ್ತರಿಸಿಕೊಂಡಿದೆ.
ನಟನ ರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ ಆಧುನಿಕ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಕರ್ನಾಟಕದ ಹಳ್ಳಿ ಹಳ್ಳಿಗೂ ನಾಟಕ ತಲುಪುವಂತೆ ಮಾಡಿ, ಮೂಲೆ ಮೂಲೆಯಲ್ಲಿಯೂ ರಂಗ ಚಟುವಟಿಕೆಗಳು ಚಿಗುರುವಂತಾಗಲು ಮೂಲ ಕಾರಣರಾದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ನಾಟಕಕಾರ, ಚಿಂತಕ, ರಂಗ ಸಂಘಟಕ ಹಾಗೂ ನೀನಾಸಂನ ನಿರ್ಮಾತೃ ಶ್ರೀ ಕೆ.ವಿ. ಸುಬ್ಬಣ್ಣ ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಜುಲೈ 14ರ ಇದೇ ಸಂದರ್ಭದಲ್ಲಿ ನಟನ ರಂಗಶಾಲೆಯ ರೂವಾರಿ ಮಂಡ್ಯ ರಮೇಶರ ಜನ್ಮದಿನವೂ ಬಂದಿರುವುದೂ ವಿಶೇಷವೆ. ಹುಟ್ಟಿದ ದಿನವನ್ನು ರಂಗ ಚಟುವಟಿಕೆ ಮತ್ತು ನಾಟಕ ಪ್ರದರ್ಶನದ ಮೂಲಕ ಆಚರಿಸಿಕೊಳ್ಳುವ ಒಂದು ಕೌಟುಂಬಿಕ ಸಂತೋಷವನ್ನು ಇಡೀ ಸಮಾಜಕ್ಕೆ ಹಂಚುವ ಮತ್ತು ರಂಗಕಾಯಕದ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿಸುವ ಆಸೆ ನಟನದ್ದು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಹಯೋಗದಲ್ಲಿ ನಾಟಕವು ಪ್ರದರ್ಶನಗೊಳ್ಳಲಿದೆ.