ನಟನ ರಂಗಶಾಲೆಯ 2022-23 ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೊದಲ ಅಭ್ಯಾಸಿ ಪ್ರಯೋಗ ‘ತ್ರಿಪುರಾಣ’. ಕನ್ನಡಕ್ಕೊಂದು ಹೊಸ ನಾಟಕ… ರಂಗ ಸಾಧ್ಯತೆಗಳ ಹೊಸ ಹುಡುಕಾಟ..
ಭಾರತದಲ್ಲಿ ನೂರೆಂಟಕ್ಕೂ ಹೆಚ್ಚು ಪುರಾಣಗಳಿವೆ. ಅಗಣಿತ ಅತಿಮಾನುಷ ದೇವ, ದಾನವ, ಯಕ್ಷ, ಗಂಧರ್ವ, ಕಿನ್ನರ, ಭೂತ, ಪ್ರೇತ, ಪಿಶಾಚಿ, ಅಪ್ಸರೆ, ಸುರ, ಅಸುರ, ಮಹಾಸುರ, ದೈವ… ಮುಂತಾದ ಶಕ್ತಿಗಳ ಕುರಿತ ನಂಬಿಕೆ, ಕಥೆ, ಐತಿಹ್ಯ, ಕಾರಣಿಕಗಳಿವೆ. ಆತ್ಮ, ಪರಮಾತ್ಮ, ಪ್ರಕೃತಿ, ಪುರುಷ… ಹೀಗೆ ವಿವಿಧ ವಿಂಗಡಣೆಗಳಿವೆ.ಆಸ್ತಿಕ, ನಾಸ್ತಿಕ, ಚಾರ್ವಾಕ, ಆಜೀವಿಕ, ಸಾಂಖ್ಯ, ಸಿದ್ಧ, ನಾಗ, ಲೋಕಾಯತ, ಅಘೋರಿ.. ಹೀಗೆ ನಂಬಿಕೆ, ಆಚರಣೆ, ಆಧ್ಯಾತ್ಮಕ್ಕೆ ಸಂಬಂಧಿಸಿದ ವಿಭಿನ್ನ ತತ್ವ ಪರಂಪರೆಗಳಿವೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗ, ಮಂತ್ರ ಮಾರ್ಗ, ತಂತ್ರ ಮಾರ್ಗ, ವಾಮ ಮಾರ್ಗ, ದಕ್ಷಿಣ ಮಾರ್ಗ ಮುಂತಾದ ಉಪಚಾರ, ಉಪಾಸನೆಯ ಪದ್ಧತಿಗಳಿವೆ. ಜನಪದ, ವೇದ, ಪುರಾಣ, ಮಹಾಕಾವ್ಯಗಳೇ ಮುಂತಾದ ಅನೇಕ ಆಖ್ಯಾನ, ವ್ಯಾಖ್ಯಾನಗಳಿವೆ. ಲೌಕಿಕ, ಅಲೌಕಿಕ, ಭೌತಿಕ, ಆದಿಭೌತಿಕ, ಆಧ್ಯಾತ್ಮಿಕ ಕಲ್ಪನೆಗಳಿವೆ. ಈ ಬಹುತ್ವದ ಬಹುಬಗೆಯ ವೈವಿಧ್ಯಗಳ ಫಲವಾಗಿ ಮೂಡಿದ ಹೊಸ ಆಧುನಿಕ ಪುರಾಣವೇ ʼತ್ರಿಪುರಾಣʼ.
ನಮ್ಮ ಸ್ಮೃತಿಯಲ್ಲಿ ಉಳಿದಿರುವ ಪುರಾಣದ ಕಥನಗಳು ಮತ್ತು ಪಾತ್ರಗಳನ್ನು ಇಟ್ಟುಕೊಂಡು ಸಮಕಾಲೀನ ಜಗತ್ತಿನ ಆಗುಹೋಗುಗಳಿಗೆ ಮುಖಾಮುಖಿಯಾಗಿ ಕಟ್ಟಿದ ನಾಟಕ ʼತ್ರಿಪುರಾಣʼ. ಹಾಗಾಗಿಯೇ ಈ ನಾಟಕಕ್ಕೆ ಸ್ಥಳ ಮತ್ತು ಕಾಲದ ಹಂಗಿಲ್ಲ. ಈ ಪ್ರಯೋಗದ ನಿರೂಪಣೆಯಲ್ಲಿಯೂ ಕಾಲದ ಏಕಮುಖ ಹರಿವಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಕಾಲವು ಭೂತಕ್ಕೂ, ಭವಿಷ್ಯಕ್ಕೂ, ವರ್ತಮಾನಕ್ಕೂ ಜಿಗಿಯುತ್ತಲೇ ಇರುತ್ತದೆ. ಕಾಲಚಕ್ರವು ಸುತ್ತುತ್ತಲೇ ಇರುತ್ತದೆ. ನಾಟಕದಲ್ಲಿನ ಘಟನೆಗಳು ಕೆಲವೊಮ್ಮೆ ಕನಸಿನಂತೆಯೂ, ಕೆಲವೊಮ್ಮೆ ಹಿಂದೆ ನೋಡಿದ ಘಟನೆಯ ಪುನರಾವರ್ತನೆಯಂತೆಯೂ, ಇನ್ನೊಮ್ಮೆ ವರ್ತಮಾನವೋ ಎಂಬಂತೆ ವಾಸ್ತವ ಮತ್ತು ಕಲ್ಪನೆಗಳ ಮಿಶ್ರಣದ ಭ್ರಮೆ ಹುಟ್ಟಿಸುತ್ತದೆ.
ಈ ನಾಟಕ ಪ್ರಾರಂಭವಾಗುವುದು ʼಜಗನ್ನಾಟಕʼವು ಅರ್ಥಾತ್ ಸೃಷ್ಟಿಯು ಅಂತ್ಯಕ್ಕೆ ಸಮೀಪಿಸಿರುವ ಹಂತದಲ್ಲಿ. ಜಗತ್ತೇ ಒಂದು ಲೀಲಾ ನಾಟಕ ರಂಗವಾಗಿರುವಾಗ ಸೃಷ್ಟಿಕರ್ತ ಬ್ರಹ್ಮನೇ ನಾಟಕಕಾರ, ಜಗನ್ನಾಟಕ ಸೂತ್ರಧಾರಿ ನಾರಾಯಣನೇ ನಿರ್ದೇಶಕ, ಸಕಲ ಚರಾಚರಗಳ ಸತ್ವ ರೂಪಿಯಾದ ಶಿವನೇ ಮಹಾನಟನ್ನಲ್ಲವೆ! ಇವರ ಲೀಲಾ ನಾಟಕ ನೋಡಲು ಬಯಸಿದ ಮೂವರು ಕಾಲಾತೀತ ಪ್ರೇಕ್ಷಕರ ಕಣ್ಣಲ್ಲಿ ಈ ನಾಟಕ ಅನಾವರಣಗೊಳ್ಳುತ್ತದೆ.
ಸೃಷ್ಟಿಯ ಅಂತ್ಯಕ್ಕೆ ಸುರ ಮತ್ತು ಅಸುರರಲ್ಲಿ ಈರ್ಷೆ, ಅಸೂಯೆ, ಕಲಹ ಬುದ್ಧಿ, ದ್ವೇಷ, ಮತ್ಸರ, ಅಂಧಾಭಿಮಾನ ತಾರಕಕ್ಕೇರಿದೆ. ʼಪ್ರಳಯʼದ ಭೀತಿ ಎಲ್ಲೆಡೆ ಹಬ್ಬಿದೆ. ಹಾಗಾಗಿ ಮಂತ್ರ-ತಂತ್ರಗಳ ಮೂಲಕ ಸುರ-ಅಸುರರು ತ್ರಿಮೂರ್ತಿಗಳನ್ನು ಒಲಿಸಿಕೊಳ್ಳಲು ಮತ್ತು ಒಬ್ಬರನ್ನೊಬ್ಬರು ನಾಶ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ, ತ್ರಿಮೂರ್ತಿಗಳ ಕಾರ್ಯಭಾರ ಊಹಿಸಲಾಗದ ರೂಪ ಪಡೆಯುತ್ತದೆ. ʼಪ್ರಳಯʼ ಎಂಬುದೇ ಒಂದು ರೂಪಕವಾಗಿ, ಸತ್ವ-ರಜ-ತಮೋಗುಣಗಳು ಶಿವನ ಆಟದಲ್ಲಿ ಕರಗಿ ನಿರ್ಗುಣವಾಗುವುದರೊಂದಿಗೆ ನಾಟಕ ಮುಗಿಯುತ್ತದೆ.
ಆಟದೊಳಗೊಂದು ಆಟ, ಕಾಲದ ತಿರುವು-ಮುರುವಿನ ನೋಟ, ಭ್ರಮೆ ಮತ್ತು ವಾಸ್ತವದ ಹೊಯ್ದಾಟಗಳ ವಿಶಿಷ್ಟ ನಿರೂಪಣಾ ಶೈಲಿಯನ್ನು ಮತ್ತು ಹೊಸ ಹುಡುಗರಿಗೆ ಕಲಿಕೆಯ ಕಾರಣಕ್ಕಾಗಿ ಅಭಿನಯ, ರಂಗಭೂಮಿಯ ವಿವಿಧ ಪಟ್ಟು-ಮಟ್ಟುಗಳನ್ನು, ಶಾಸ್ತ್ರ-ಸಿದ್ಧಾಂತಗಳನ್ನು ಅಡಕವಾಗಿಸಿರುವುದರಿಂದ ತುಸು ಗೊಂದಲವಾಗಬಹುದು, ಘಟನೆ ನಡೆಯುವ ಮುಂಚೆಯೆ ನಡೆದಿರುವಂತೆ ಭಾಸವಾಗಬಹುದು. ಆದ್ದರಿಂದ ಪ್ರೇಕ್ಷಕರೆ, ಜಾಗೃತರಾಗಿರಿ. ಜೋಪಾನ!
ರಚನೆ: ಮನೋಜ
ನೇಪಥ್ಯ: ಚೇತನ್ ಸಿಂಗಾನಲ್ಲೂರು
ಪ್ರಸಾಧನ: ವೀಣಾ ನಾಗಮಂಗಲ, ಶಶಿಕುಮಾರ್ ಮೈಸೂರು, ಶೇಖರ್ ಬೆಂಗಳೂರು
ಹಾಡುಗಾರಿಕೆ: ವಿಜಯ್ ನರಸಿಂಹನ್ ಮೈಸೂರು, ಇಂದೂಧರ ರಾಮನಗರ, ಪ್ರಣವ್ ಮೈಸೂರು
ಬೆಳಕು: ದಿಶಾ ರಮೇಶ್
ಸಹಾಯ: ವಿನಯ್ ಗಣೇಶ್ ಮೈಸೂರು
ಸಂಗೀತ, ವಿನ್ಯಾಸ, ನಿರ್ದೇಶನ: ಮೇಘ ಸಮೀರ
ಛಾಯಾಚಿತ್ರಗಳು: ಕ್ಲಿಕ್ ಅಸುರ(ಭಾಸ್ಕರ)