12 ಏಪ್ರಿಲ್ 2023, ಮೈಸೂರು: ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ
ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ
ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ
ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ
ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ
ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಏಪ್ರಿಲ್ 14 ಮತ್ತು 15ರಂದು ಸಂಜೆ 06-30ಕ್ಕೆ ಸರಿಯಾಗಿ ರಾಮಕೃಷ್ಣ
ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ ವಾರಾಂತ್ಯ ರಂಗಶಾಲೆಯ ಮಕ್ಕಳಿಂದ ಡಾ.ಸಿದ್ಧಲಿಂಗಯ್ಯ ಅವರ
‘ಏಕಲವ್ಯ’ ನಾಟಕವು ಶ್ರೀ ಚೇತನ್ ಸಿಂಗಾನಲ್ಲೂರು ಅವರ ಸಂಗೀತ, ವಿನ್ಯಾಸ ಮತ್ತು ನಿರ್ದೇಶನದಲ್ಲಿ
ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ನಿರ್ದೇಶನ ಸಹಾಯ ಶ್ರೀ ಶಶಿಕುಮಾರ್ ಮೈಸೂರು ಅವರದ್ದು.
ಹಾಗೂ ಏಪ್ರಿಲ್ 16ರಂದು ಸಂಜೆ 06-30ಕ್ಕೆ ಸರಿಯಾಗಿ ಪಾಂಡಿಚೇರಿಯ ಪ್ರಖ್ಯಾತ ತಂಡ ಆದಿಶಕ್ತಿ ಪ್ರಸ್ತುತ ಪಡಿಸುವ ನಾಟಕ ‘A Lullaby To Wake Up’ ಪ್ರದರ್ಶನಗೊಳ್ಳಲಿದೆ. ಮುಂಬೈಯ ಶ್ರೀ ಆದಿತ್ಯ ರಾವತ್ ಅವರು ಅಭಿನಯಿಸುವ ಈ ನಾಟಕವು ಆದಿಶಕ್ತಿಯ ನಿಮ್ಮಿ ರಾಫೇಲ್ ಮತ್ತು ಶ್ರೀ ವಿನಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ.
ರಂಗಾಸಕ್ತರಿಗೆ ಆತ್ಮೀಯ ಸ್ವಾಗತ.
ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ
ನಟನ ರಂಗಶಾಲೆ:
ನಟನದ ಅಂಗ ಸಂಸ್ಥೆಯಾದ ನಟನ ರಂಗಶಾಲೆಯು ಮೈಸೂರು ವಿಶ್ವವಿದ್ಯಾನಿಲಯದಿಂದ ಅಧಿಕೃತ ಮಾನ್ಯತೆಯನ್ನು ಪಡೆದಿದ್ದು, ಆಸಕ್ತ ಯುವಕ ಯುವತಿಯರಿಗಾಗಿ ಒಂದು ವರ್ಷದ ರಂಗಭೂಮಿ ಡಿಪ್ಲೊಮಾ ತರಗತಿಯನ್ನು ಮತ್ತು ಮೂರು ತಿಂಗಳ ತೀವೃತಮ ಅಭಿನಯ ತರಬೇತಿಯನ್ನು ನಡೆಸುತ್ತಿದೆ. ಪ್ರತಿನಿತ್ಯ ಸಂಜೆ 5.30ರಿಂದ 9ರವರೆಗೆ ಅಭಿನಯ, ರಂಗ ವಿನ್ಯಾಸ, ರಂಗ ಇತಿಹಾಸ, ನೇಪಥ್ಯ, ರಂಗ ಸಜ್ಜಿಕೆ, ರಂಗ ಸಂಗೀತ, ಬೆಳಕು, ರಂಗಾಟಗಳು, ಪ್ರಸಾಧನ, ನಾಟಕ ತಯಾರಿ, ರಂಗ ತಂತ್ರಗಳು, ಪರಿಕರ ವಿನ್ಯಾಸ.. ಹೀಗೆ ರಂಗಭೂಮಿಯ ವಿವಿಧ ಆಯಾಮಗಳನ್ನು ಪರಿಚಯಿಸುವ ಮತ್ತು ಗಂಭೀರವಾಗಿ ಅಭ್ಯಸಿಸುವಂತೆ ಮಾಡುವ ಶಾಸ್ತ್ರ ಮತ್ತು ಪ್ರಾಯೋಗಿಕ ತರಬೇತಿ ಪ್ರತಿನಿತ್ಯವೂ ನಡೆಯುತ್ತಿದೆ. ಮಕ್ಕಳಿಗಾಗಿ ವಾರಾಂತ್ಯದಲ್ಲಿ ನಟನೆ ಮತ್ತು ರಂಗಭೂಮಿಯ ತರಗತಿಗಳು ಜರಗುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿಗಳು, ನಿರ್ದೇಶಕರು, ನುರಿತ ರಂಗ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ನಿರಂತರವಾಗಿ ನಟನ ರಂಗಶಾಲೆಯಲ್ಲಿ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ.
ನಾಟಕದ ಕುರಿತು:
ಎಲ್ಲೆಲ್ಲೂ ಇರುವ ಅನ್ಯಾಯದ ವಿರುದ್ಧ, ಜ್ಞಾನದ ಗುತ್ತಿಗೆಯನ್ನು ಎತ್ತಿ ಹಿಡಿಯುವ ಶಾಸ್ತ್ರಗಳ ವಿರುದ್ಧ ಮೇಲು ಕೀಳೆಂಬ ವಂಚನೆಯ ವಿರುದ್ಧ ಹೋರಾಟದ ಕೆಚ್ಚನ್ನು ಪ್ರೇರೇಪಿಸಿದ ಬಂಡಾಯ ಆಶಯವನ್ನು ಅರ್ಥಪೂರ್ಣವಾಗಿ ಡಾ. ಸಿದ್ಧಲಿಂಗಯ್ಯನವರ ‘ಏಕಲವ್ಯ’ ನಾಟಕ ಮೈದುಂಬಿಕೊಂಡಿದೆ. ಏಕಲವ್ಯನ ಬದುಕನ್ನು ಕಾಡು ಮತ್ತು ನಾಡಿನ ನಡುವೆ ನಡೆದ ಸಂಘರ್ಷದ ಕಥೆಯಾಗಿ ಡಾ. ಸಿದ್ಧಲಿಂಗಯ್ಯನವರು ಗ್ರಹಿಸಿರುವುದರಿಂದ ಇದಕ್ಕೊಂದು ಪ್ರತ್ಯೇಕ ಆಯಾಮವೇ ಪ್ರಾಪ್ತವಾಗಿದೆ. ಮಹಾಭಾರತದ ಮಹಾಸಾಗರದಲ್ಲಿ ಒಂದು ಹನಿಯಾಗಿ ಕಾಣಿಸಿಕೊಳ್ಳುವ ಏಕಲವ್ಯನ ಪ್ರಸಂಗ ಸಮಕಾಲೀನ ಸಂವೇದನೆಗಳನ್ನು ಮಂಡಿಸುವುದಕ್ಕೆ ಇಂಬು ಕೊಡುತ್ತದೆ. ನಾಗರಿಕ – ಅನಾಗರಿಕ ಜಗತ್ತಿನ ಮೌಲ್ಯಗಳ ಹೋಲಿಕೆಯೇ ನಾಟಕದ ಮುಖ್ಯ ಗುರಿಯಾಗಿದೆ.
ರಚನೆ: ಡಾ. ಸಿದ್ಧಲಿಂಗಯ್ಯ
‘ಬಂಡಾಯ ಸಾಹಿತಿ’, ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಹೊಲೆ ಮಾದಿಗರ ಹಾಡು, ಕಪ್ಪು ಕಾಡಿನ ಹಾಡು, ಅಲ್ಲೆ ಕುಂತವರೆ ಕವನ ಸಂಕಲನಗಳು ಇವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿವೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಅಂತಹ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಂಗೀತ, ವಿನ್ಯಾಸ, ನಿರ್ದೇಶನ: ಚೇತನ್ ಸಿಂಗಾನಲ್ಲೂರು
ಬಿ.ಕಾಂ. ಪದವೀಧರರಾಗಿರುವ ಚೇತನ್ ಸಿಂಗಾನಲ್ಲೂರು ವಿದ್ಯಾರ್ಥಿಯಾಗಿ ನಟನ ರಂಗಶಾಲೆಯಲ್ಲಿ ಸೇರ್ಪಡೆಗೊಂಡು ಈಗ ರೆಪರ್ಟರಿ ಕಲಾವಿದನಾಗಿ, ತಂತ್ರಜ್ಞನಾಗಿ, ನೇಪಥ್ಯ ನಿರ್ವಾಹಕರಾಗಿ ನಟನದಲ್ಲಿ ತೊಡಗಿಸಿಕೊಂಡಿದ್ದಾರೆ. ತಬಲಾ ಜ್ಯೂನಿಯರ್ ಅನ್ನು ವಿಶಿಷ್ಟ ಶ್ರೇಣಿಯಲ್ಲಿ ಮುಗಿಸಿರುವ ಚೇತನ್ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದಾರೆ. ‘ದಿ ಆಕ್ಟರ್’ ಎನ್ನುವ ಶಾರ್ಟ್ ಫಿಲಂ ಅನ್ನು ನಿರ್ದೇಶನ ಮಾಡಿರುವ ಇವರು ಧಾರಾವಾಹಿ ಹಾಗೂ ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ.