ಜನಮನಕೆ ಹತ್ತಿರವಾಗುವ ವೈದ್ಯ, ಸಾಹಿತಿ, ಸಾಧಕ – ಡಾ. ಮುರಲೀಮೋಹನ್ ಚೂಂತಾರು
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ‘ಚೂಂತಾರು’ ಇಲ್ಲಿ ಜನಿಸಿದ ಮುರಳಿ ಮೋಹನ ಚೂಂತಾರು ಇವರು ಶ್ರೀಮತಿ ಸರೋಜಿನಿ ಭಟ್ ಮತ್ತು ಲಕ್ಷ್ಮೀನಾರಾಯಣ ಭಟ್ ದಂಪತಿಗಳ ಸುಪುತ್ರ. ಸರಕಾರಿ ಮೆರಿಟ್ ಕೋಟಾದಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ಉಚಿತ ಅರ್ಹತೆ ಪಡೆದು ಬಿ.ಡಿ.ಯಸ್. ಪದವಿ, ಯಮ್.ಡಿ.ಯಸ್. ಸೀಟನ್ನು ಕೂಡ ಸರಕಾರಿ ಕೋಟಾದಲ್ಲಿಯೇ ಪಡೆದ ಇವರು ದಂತ ವೈದ್ಯಕೀಯ ಶಾಸ್ತ್ರದಲ್ಲಿ ಡಿ.ಎನ್.ಬಿ. ಪದವಿಯನ್ನು ಪಡೆದಿದ್ದಾರೆ.
ಹೊಸಂಗಡಿ – ಮಂಜೇಶ್ವರ ಹೃದಯಭಾಗದಲ್ಲಿ ‘ಸುರಕ್ಷಾ ದಂತ ಚಿಕಿತ್ಸಾಲಯ’ವನ್ನು ತೆರೆದು ತಮ್ಮ ಧರ್ಮಪತ್ನಿ ಡಾ. ರಾಜಶ್ರೀ ಮೋಹನ್ ಇವರ ಜೊತೆಗೂಡಿ ದಂತ ಸಂಬಂಧಿ ತೊಂದರೆಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಚೂಂತಾರು ತಮ್ಮ ವಿಷಯ ತಜ್ಞತೆ ಮತ್ತು ಅನುಭವಗಳ ಮೂಲಕ ಮೌಲಿಕ ಹಾಗೂ ಜನಸಾಮಾನ್ಯರಿಗೆ ಮುಟ್ಟುವಂತೆ ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುವುದರ ಜೊತೆಗೆ, ವಿವಿಧ ಮಾಧ್ಯಮಗಳ ಮೂಲಕ ಎಲ್ಲರನ್ನೂ ಅತಿ ಸುಲಭವಾಗಿ ತಲುಪುವಂತೆ ಮಾಡುತ್ತಿರುವುದು ಶ್ಲಾಘನೀಯ.
‘ರಕ್ತದಾನ ಜೀವದಾನ’, ‘ಸುರಕ್ಷಾ ದಂತ ಆರೋಗ್ಯ ಮಾರ್ಗದರ್ಶಿ’, ‘ಕಚಗುಳಿ’ ದಂತ ಹನಿಗವನಗಳು, ‘ಚಿತ್ರಾನ್ನ 32 ನೈಜ ದಂತಕತೆಗಳು’, ‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ’, ‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2’, ‘ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ’, ‘ಸಂಗಾತಿ ಜ್ವರ ಸಂಹಿತೆ’, ‘ಧನ್ವಂತರಿ ವೈದ್ಯಕೀಯ ಲೇಖನಗಳು’, ‘ಸುಮುಖ ದಂತ ಆರೋಗ್ಯ ಮಾರ್ಗದರ್ಶಿ’, ‘ಸಂಕಲ್ಪ-2020 ಕೋವಿಡ್ -19 ಆರೋಗ್ಯ ಮಾರ್ಗದರ್ಶಿ’, ‘ಅಶೀತಿ ಮತ್ತು ಸ್ವಾದ ಆಹಾರ ಸಂಹಿತೆ’ ಎಂಬ 13 ಪುಸ್ತಕಗಳನ್ನು ಈವರೆಗೆ ಬರೆದು ಪ್ರಕಟಿಸಿದ್ದಾರೆ.
‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು 2017ರಲ್ಲಿ ಪ್ರತಿಷ್ಠಿತ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಸಾಹಿತ್ಯ ಪ್ರಶಸ್ತಿ. ‘ಸಂಜೀವಿನಿ ಆರೋಗ್ಯ ಮಾರ್ಗದರ್ಶಿ ಭಾಗ-2’ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ. ‘ಅರಿವು ಬಾಯಿ ಕ್ಯಾನ್ಸರ್ ಮಾರ್ಗದರ್ಶಿ’ ಕೃತಿಗೆ ಉತ್ತಮ ವೈದ್ಯಕೀಯ ಸಾಹಿತ್ಯ ಕೃತಿ ಪ್ರಶಸ್ತಿ. ‘ಸಂಗಾತಿ ಜ್ವರ ಸಂಹಿತೆ’ ಕೃತಿಗೆ ಬಿಸಲೇರಿ ಜಯಣ್ಣ ಮತ್ತು ಬಿಸಿಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.
ಈವರೆಗೂ ಸುಮಾರು 5000 ಆರೋಗ್ಯ ಜಾಗೃತಿ ಲೇಖನಗಳನ್ನು ಬರೆದು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಡಾ. ಮುರಲಿಯವರ ಅಪಾರ ಸೇವೆಯನ್ನು ಗುರುತಿಸಿ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ ಸರಕಾರ 2020ನೇ ಸಾಲಿನ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಕಲಬುರಗಿಯ ಶಂಕರ್ ಪ್ರತಿಷ್ಠಾನ 2000ನೇ ಇಸವಿಯ ‘ಶ್ರೀ ವೈದ್ಯಸಾಹಿತಿ ಪ್ರಶಸ್ತಿ’ ನೀಡಿ ಗೌರವಿಸಿದೆ.
ಭಾರತೀಯ ದಂತ ವೈದ್ಯಕೀಯ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುತ್ತಾರೆ. ಭಾರತೀಯ ರೆಡ್ಕ್ರಾೀಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ ಇದರ ಸಭಾಪತಿಯಾಗಿಯೂ, ನಿಟ್ಟೆ ವಿಶ್ವವಿದ್ಯಾಲಯ ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿಯಾಗಿ, ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಮಾದೇಷ್ಟರಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರಕ್ಷಣಾ ದಳದ ಚೀಫ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರು ಗೃಹರಕ್ಷಕ ದಳಕ್ಕೆ ನೀಡಿದ ಗಣನೀಯ ಸೇವೆಯನ್ನು ಗುರುತಿಸಿ, 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಇವರನ್ನು ಗೌರವಿಸಿದ್ದಾರೆ.
ತಮ್ಮ ತಾಯಿ ದಿವಂಗತ ಸರೋಜಿನಿ ಭಟ್ ಇವರ ಅಕಾಲಿಕ ಮರಣದ ನಂತರ ಅವರ ನೆನಪಿನಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆಶ್ರಯ, ಆಸರೆ, ಆರೋಗ್ಯ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುವ ಈ ಸಂಸ್ಥೆ ಬಡವರಿಗೆ ಉಚಿತ ವಸತಿ, ಉದ್ಯೋಗ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸೌಲಭ್ಯ ನೀಡುವಲ್ಲಿ ಕಾರ್ಯತತ್ಪರವಾಗಿದೆ.
ಕೋವಿಡ್ ಸಂದರ್ಭದಲ್ಲಿ ಓರ್ವ ವೈದ್ಯರಾಗಿ, ‘ಕೋವಿಡ್-19 ಆರೋಗ್ಯ ಮಾರ್ಗದರ್ಶಿ’ ಎಂಬ ಪುಸ್ತಕವನ್ನು ಬರೆದು ಸುಮಾರು 1000 ಪ್ರತಿಗಳನ್ನು ಹಂಚಿ ರೋಗದ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ ಮತ್ತು ಕೋವಿಡ್-19 ರೋಗದ ಬಗ್ಗೆ ಮಾಹಿತಿ ಶಿಬಿರ ನಡೆಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿಯಾಗಿದ್ದು ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಬಹುಮುಖದ ವ್ಯಕ್ತಿತ್ತ್ವ ನಮ್ಮ ಚೂಂತಾರು
ಸಮಾಜ ಹಿತದೃಷ್ಟಿಯಲಿ ಎದ್ದು ನಿಂತಾರು
ಬಿಡುವಿಲ್ಲ ದಣಿವಿಲ್ಲ ಶ್ರದ್ಧೆ ಆಸಕ್ತಿ
ಪರಹಿತದ ಸಂಕಲ್ಪ ನೀಡುವುದು ಶಕ್ತಿ !
ವೈದ್ಯರ ದಿನದಂದು ಇಂಥವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ ?
ಡಾ. ಚೂಂತಾರು ಇವರ ಲೇಖನಿಯಿಂದ ಇನಷ್ಟು ಪ್ರಬುದ್ಧ ಬರವಣಿಗೆಗಳು ಹೊರಬರಲಿ ಎಂಬ ಶುಭ ಹಾರೈಕೆ ರೂವಾರಿ ತಂಡದಿಂದ.
- ಎನ್. ಸುಬ್ರಾಯ ಭಟ್, ಮಂಗಳೂರು – ಹವ್ಯಾಸಿ ಬರೆಹಗಾರ
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕದ ಪದಾಧಿಕಾರಿ.