ಡಾ. ಸುಮಂತ ಶೆಣೈ ಇವರು ವೃತ್ತಿಯಲ್ಲಿ ಮೂಡಬಿದ್ರಿಯ ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯರು ಮತ್ತು ಉಪನ್ಯಾಸಕರು. ಮೂಲತಃ ಕಾರ್ಕಳ ತಾಲೂಕಿನ ಹೊಸ್ಮಾರಿನವರು. ಹೊಸ್ಮಾರಿನ ಶ್ರೀ ಸುದರ್ಶನ್ ಮತ್ತು ವಸುಧಾ ಶೆಣೈ ದಂಪತಿಗಳ ಸುಪುತ್ರರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಮಾರು ಮತ್ತು ನಾರಾವಿ ಪ್ರೌಢಶಾಲೆಯಲ್ಲಿ ಪಡೆದು, ಪ. ಪೂರ್ವ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪೂರೈಸಿ, ಆಯುರ್ವೇದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ಆಯುರ್ವೇದದಲ್ಲಿ ದ್ರವ್ಯಗುಣ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ರಾಜಸ್ಥಾನದ ಜೈಪುರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಇಲ್ಲಿ ಪೂರೈಸಿರುತ್ತಾರೆ.
ಬಾಲ್ಯದಿಂದಲೇ ಕಲೆ, ಸಾಹಿತ್ಯ, ಸಂಗೀತದ ಕಡೆಗೆ ಒಲವಿದ್ದ ಇವರು ಕವಿತೆ ರಚನೆ, ಸುಗಮ ಸಂಗೀತ, ಭಕ್ತಿ ಸಂಗೀತಗಳ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ಕಲಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ಸಂಗೀತ ಶಿಕ್ಷಣವನ್ನು ಶ್ರೀ ಯೋಗೀಶ್ ಬಾಳಿಗಾ, ವೆಂಕಟೇಶ ಚಿಪ್ಳೂಣ್ಕರ್ ಹಾಗೂ ಶ್ರೀ ಸಂತೋಷ್ ಕುಲಕರ್ಣಿ ಬೆಳಗಾವಿ ಹಾಗೂ ಎಂ.ಎಸ್. ಗಿರಿಧರ್ ಬೆಂಗಳೂರು ಇವರಲ್ಲಿ ಪಡೆದು ರಂಗ ತರಬೇತಿಯನ್ನು ಡಾ.ಜೀವನ್ ರಾಮ್ ಸುಳ್ಯ ಇವರಲ್ಲಿ ಪಡೆದಿರುತ್ತಾರೆ.
ತಮ್ಮ ಸ್ನಾತಕ ಮತ್ತು ಸ್ನಾತಕೋತ್ತರ ಶೈಕ್ಷಣಿಕ ವರ್ಷಗಳಲ್ಲಿ ಸುಗಮ ಸಂಗೀತ, ವಾದ್ಯ ಸಂಗೀತ, ಜನಪದ ವಾದ್ಯಮೇಳ, ಸಮೂಹಗಾನ, ಏಕಾಂಕ ನಾಟಕ, ಕಿರುಪ್ರಹಸನ, ಮೈಮ್ ಮುಂತಾದ ವಿಭಾಗಗಳಲ್ಲಿ ದಕ್ಷಿಣ ಭಾರತ ಮತ್ತು ರಾಷ್ಟ್ರಮಟ್ಟದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕವನ್ನು 9 ಬಾರಿ ಪ್ರತಿನಿಧಿಸಿದ ದಾಖಲೆ ಮತ್ತು ಗಳಿಸಿದ ಹಲವಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದ ಗೌರವ.
ಪ್ರಸಕ್ತ ಇವರು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ವೈದ್ಯ ವೃತ್ತಿ ಹಾಗೂ ಬೋಧನೆಯ ಜೊತೆಗೆ ಕಲ್ಚರಲ್ ಕೋಆರ್ಡಿನೇಟರ್ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದು, ವೈದ್ಯ ವಿದ್ಯಾರ್ಥಿಗಳಿಗೆ ಕಲೆ-ಸಂಗೀತ ಹಾಗೂ ಸಾಂಸ್ಕ್ರೃತಿಕ ಕಾರ್ಯಕ್ರಮಗಳ ತರಬೇತಿಯನ್ನು ನೀಡುತ್ತಿದ್ದಾರೆ. ಡಾ. ಸುಮಂತ ಶೆಣೈಯವರ ಪ್ರತಿಭೆಗೆ ಇನ್ನಷ್ಟು ವೇದಿಕೆ ದೊರೆಯಲಿ, ವೃತ್ತಿ ಜೀವನದೊಂದಿಗೆ ಕಲಾಮಾತೆಯ ಸೇವೆ ಮಾಡುತ್ತಿರುವ ನಿಮಗೆ ರೂವಾರಿ ಬಳಗದ ಶುಭಾಶಯಗಳು.