ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಇದರ ಸಹಯೋಗದೊಂದಿಗೆ ‘ಬಸವಣ್ಣ ಮತ್ತು ಕನಕದಾಸರ ಇಹ ಪರ ಲೋಕದೃಷ್ಟಿ’ ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 08-11-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ್ ಇವರು ಮಾತನಾಡುತ್ತಾ “ಬಸವಣ್ಣ ಮತ್ತು ಕನಕದಾಸರು ನಡೆನುಡಿಯ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರು ಇಹಪರ ಚಿಂತನೆಗಳಲ್ಲಿ ಸಹಜತೆಯನ್ನು ಪುರಸ್ಕರಿಸಿದ್ದರು. ಡಾಂಭಿಕತೆಯನ್ನು ಸದಾ ವಿರೋಧಿಸಿದವರು. ನಾನು ಎಂಬುದು ಹೋಗಿ ನಾವು ಎಂಬ ಸಮಷ್ಟಿ ಭಾವ ಬರಬೇಕಾದರೆ ಆತ್ಮವಿಮರ್ಶೆಯ ಗುಣ ನಮ್ಮಲ್ಲಿರಬೇಕು. ಇವರಿಬ್ಬರ ಲೋಕದೃಷ್ಟಿ ಸತ್ಯದ ಹುಡುಕಾಟವೇ ಆಗಿದೆ. ಮನುಷ್ಯರಿಗೆ ಛಲಬೇಕು ಎಂಬ ಅಂಶವನ್ನು ಪ್ರತಿಪಾದಿಸಿದ ಶರಣ ಮತ್ತು ದಾಸ ಪರಂಪರೆಗಳ ನಾಮರೂಪಗಳು ಭಿನ್ನವಾಗಿದ್ದರೂ ದೃಷ್ಟಿ ಮಾತ್ರ ಒಂದೇ ಆಗಿತ್ತು. ಅದು ಜೀವ ಪರವೂ, ಜೀವ ವಿಕಾಸ ಪರವೂ ಆಗಿತ್ತು” ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ. ಮಲ್ಲಿಕಾರ್ಜುನ ಮೊರಬದ ಇವರು ವಿಚಾರಸಂಕಿರಣವನ್ನು ಉದ್ಘಾಟಿಸಿ “ಲೋಕಕ್ಕೆ ಒಳಿತನ್ನು ಬಯಸಿದ ದಾರ್ಶನಿಕರನ್ನು ನಮ್ಮ ಒಳಗು ಮಾಡಿಕೊಳ್ಳಬೇಕು. ಯಾರ್ಯಾರನ್ನೋ, ಯಾವುದೋ ದುಷ್ಟ ಚಿಂತನೆಗಳು ಒಳಬರದಂತೆ ತಡೆದು ಇಹ ಪರದಲ್ಲಿ ಸಮಾನತೆ, ಮಾನವೀಯತೆ ವಿವೇಕವನ್ನು ಬಿತ್ತಿದ ಬಸವಣ್ಣ ಕನಕದಾಸರನ್ನು ನಮ್ಮ ಅಂತಶ್ಶಕ್ತಿಯಾಗಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ “ಭಾರತೀಯ ದಾರ್ಶನಿಕ ಪರಂಪರೆಯನ್ನು ಹೊಸಕಾಲದ ಪರಿಕಲ್ಪನೆಗೆ ಅನ್ವಯವಾಗುವಂತೆ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ನಡೆಯಬೇಕು” ಎಂದರು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಮನ್ವಿ ರೈ ಕೀರ್ತನೆ ಹಾಡಿದರು. ಪ್ರಾಧ್ಯಾಪಕಿ ಶ್ರೀಮತಿ ಮಂಗಳದೇವಿ ಪಿ. ನಿರೂಪಿಸಿ, ಕನಕದಾಸ ಕೇಂದ್ರದ ಸಂಶೋಧನ ಕೇಂದ್ರದ ಸಂಶೋಧಕ ಆನಂದ ಎಂ. ಕಿದೂರು ವಂದಿಸಿದರು. ಪುತ್ತೂರಿನ ನೆಹರುನಗರ ಗಾನ ಸರಸ್ವತಿ ಸಂಗೀತ ಕಲಾಶಾಲೆಯ ವಿದುಷಿ ವೀಣಾ ರಾಘವೇಂದ್ರ ತಂಡದವರಿಂದ ವಚನ ಕೀರ್ತನ ಪ್ರಸ್ತುತಿ ನಡೆಯಿತು.