ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಕೇಂದ್ರ, ಯಕ್ಷರಂಜಿನಿ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ‘ಯಕ್ಷಗಾನ ಪ್ರಸಂಗ : ಸ್ವರೂಪ, ವಿಕಾಸ ಮತ್ತು ಅನನ್ಯತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ದಿನಾಂಕ 31 ಜನವರಿ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳ ಕಾವ್ಯಾಂಶದ ಕುರಿತು ಮಾತನಾಡಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ “ಯಕ್ಷಗಾನದ ಹುಟ್ಟು ಅಸ್ಪಷ್ಟ. ಆದರೆ ಬೆಳವಣಿಗೆಯ ಸಂದರ್ಭದಲ್ಲಿ ಪಾರ್ತಿಸುಬ್ಬ ದೇವಿದಾಸರಿಂದ ತೊಡಗಿ ಅಗರಿ, ಬಲಿಪ, ಅಮೃತ ಸೋಮೇಶ್ವರ, ಪುರುಷೋತ್ತಮ ಪೂಂಜ ಹೀಗೆ ಸಾವಿರಾರು ಕವಿಗಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ವಿಮರ್ಶಕರು ಕಾವ್ಯ ಪ್ರಕಾರವೆಂದು ಪರಿಗಣಿಸುತ್ತಿಲ್ಲ. ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲೂ ಕವಿಗಳ ಹೆಸರನ್ನು ಹೇಳುವುದಿಲ್ಲ. ಈ ನಿರ್ಲಕ್ಷ್ಯ ಸರಿಯಲ್ಲ” ಎಂದು ಹೇಳಿದರು.
ಯಕ್ಷಗಾನ ಪ್ರಸಂಗ ಸಾಹಿತ್ಯ ಬೆಳೆದು ಬಂದ ಬಗೆಯ ಕುರಿತು ಮಾತನಾಡಿದ ಡಾ. ಪಾದೇಕಲ್ಲು ವಿಷ್ಣು ಭಟ್ “ವಸ್ತು ಮತ್ತು ಭಾಷೆಯ ನೆಲೆಯಿಂದ ವೈವಿಧ್ಯಪೂರ್ಣವಾದ ಪ್ರಸಂಗಗಳು ರಚನೆಗೊಂಡಿವೆ. ಯಕ್ಷಗಾನ ಕವಿಗಳು ಹಳೆಗನ್ನಡ ಕಾವ್ಯವನ್ನು ಹೆಚ್ಚು ಓದಿಲ್ಲ. ನಡುಗನ್ನಡ ಕಾಲದ ಕಾವ್ಯಗಳೆ ಅವರಿಗೆ ಮಾರ್ಗದರ್ಶಿ. ಸ್ಥಳೀಯ ಭಾಷೆಗಳ ಬಳಕೆ, ಕ್ಷೇತ್ರ ಮಹಾತ್ಮೆಗಳು, ವಿದೇಶಿ ಕಥೆಗಳಲ್ಲಿ ಕೂಡ ಪ್ರಸಂಗ ರಚನೆಗಳಾಗಿವೆ” ಎಂದರು.
ಅರ್ಥ ವಿಸ್ತರಣೆ ಸಾಧ್ಯತೆಯ ಕುರಿತು ಮಾತನಾಡಿದ ಹಿರಿಯ ಕಲಾವಿದ ಉಜಿರೆ ಅಶೋಕ ಭಟ್ “ಕ್ಷೇತ್ರ ಮಹಾತ್ಮೆಗಳು ಕಾಲ್ಪನಿಕ. ಶ್ರದ್ಧೆ ಹೆಚ್ಚಿಸುವುದು ಈ ಪ್ರಸಂಗಗಳ ಲಕ್ಷ್ಯ. ಯಕ್ಷಗಾನದಲ್ಲಿ ದೇವರು ಬಂದರೆ ಪುರಾಣ ಎಂಬಂತಾಗಿದೆ. ಭಾಗವತರಿಗೆ ಅರ್ಥಪ್ರಜ್ಞೆ ಇರಬೇಕು. ಆಗ ಪ್ರದರ್ಶನ ಉತ್ತಮವಾಗುತ್ತದೆ. ಹಿಂದೆ ಊರೂರ ಸಂಘಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥಧಾರಿಗಳು ತಯಾರಾಗುತ್ತಿದ್ದರು. ಈಗ ಶಿಕ್ಷಣ ಸಂಸ್ಥೆಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಯಕ್ಷಗಾನ ಪ್ರಸಂಗಗಳ ಕೊಡುಗೆಯೂ ಗಮನಾರ್ಹವಾದುದು. ಅವುಗಳ ಆಳವನ್ನು ಅಧ್ಯಯನ ಮಾಡಿಕೊಂಡು ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾಗಿದೆ” ಎಂದು ತಿಳಿಸಿದರು.
ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ‘ಯಕ್ಷರಂಜಿನಿ’ಯ ವಿದ್ಯಾರ್ಥಿಗಳಿಂದ ವಿವಿಧ ಕವಿಗಳ ಪ್ರಸಂಗಗಳ ಆಯ್ದ ಪದ್ಯಗಳ ಯಕ್ಷಗಾನ ಗಾನ ಪ್ರಸ್ತುತಿ ಜರುಗಿತು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ ಎಂ. ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ. ಆರ್ ನಿಡ್ಪಳ್ಳಿ ವಂದಿಸಿ, ತೃತೀಯ ಕಲಾ ವಿಭಾಗ ವಿದ್ಯಾರ್ಥಿನಿ ಶ್ರೇಯಾ ಆಚಾರ್ಯ, ಭೂಮಿಕಾ ಜಿ. ಆಚಾರ್ಯ ನಿರೂಪಿಸಿದರು.