ಮಂಗಳೂರು: ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರು ಮಂಗಳೂರಿನ ಕೊಡಿಯಾಲಗುತ್ತು ಸಂಸ್ಕೃತಿ ಕೇಂದ್ರದಲ್ಲಿ (ಇಂಟ್ಯಾಕ್) ಭರತನಾಟ್ಯದ ಆಂಗಿಕದ ಚಾರಿಗೆ ಸಂಬಂಧಿಸಿದ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದನ್ನು ದಿನಾಂಕ 04 ಏಪ್ರಿಲ್ 2025ರ ಶುಕ್ರವಾರ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಹಿರಿಯ ಉದ್ಯಮಿ ಎಂ. ಮುರಳೀಧರ ಶೆಟ್ಟಿ ಮಾತನಾಡಿ “ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಭರತನಾಟ್ಯವು ಹಾಡು, ವೇಷಭೂಷಣ, ನರ್ತನ, ಅಭಿನಯ ಮುಂತಾದ ಎಲ್ಲ ಅಂಗಗಳನ್ನೂ ಹೊಂದಿರುವ ಒಂದು ಪರಿಪೂರ್ಣ ಕಲೆ. ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಭರತನಾಟ್ಯವು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಅಷ್ಟೊಂದು ಪ್ರಚಾರದಲ್ಲಿ ಇರದಿದ್ದ ಭರತನಾಟ್ಯವು ಇಂದು ಪ್ರಸಿದ್ಧಿ ಗಳಿಸಿರುವುದು ಸಂತೋಷದ ವಿಷಯ. ಈ ಶ್ರೀಮಂತ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ಗುರು ವಿದುಷಿ ಶಾರದಾಮಣಿ ಶೇಖರ್ ಮಾತನಾಡಿ “ಇಂದು ಭರತನಾಟ್ಯ ಕಲಿಯುವವರ ಮತ್ತು ಆಸ್ವಾದಿಸುವವರ ಸಂಖ್ಯೆ ಹೆಚ್ಚಾಗಿದೆ. ವಿದುಷಿ ಅಯನಾ ಪೆರ್ಲ ಈ ಕ್ಷೇತ್ರದಲ್ಲಿ ಬೆಳೆದು ನಿಂತಿರುವುದು ನಮಗೆಲ್ಲ ಹೆಮ್ಮೆಯ ವಿಷಯ” ಎಂದರು.ವಿದುಷಿ ಅಯನಾ ಪೆರ್ಲ ಅವರು ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡುತ್ತ ಭರತನಾಟ್ಯದಲ್ಲಿ ವಾಚಿಕದ ಅಥವಾ ಹಾಡಿನ ಅರ್ಥ ಮತ್ತು ಭಾವಕ್ಕೆ ಪೂರಕವಾಗಿ ಅಭಿನಯದಲ್ಲಿ ಸೇರಿಕೊಂಡಿರುವ ಅರ್ಥಪೂರ್ಣವಾದ ಅಂಗಚಲನೆಗಳನ್ನು ಚಾರಿ ಅನ್ನುತ್ತಾರೆ. ಚಾರಿಯು ನಾಟ್ಯವನ್ನು ಸುಂದರವಾಗಿ ಪರಿಪೂರ್ಣಗೊಳಿಸುವ ಅಂಶ ಎಂದು ಹೇಳಿದರು. ಚಾರಿಯ ವಿವಿಧ ಆಯಾಮಗಳನ್ನು ಅವರು ನರ್ತಿಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೊತೆಗೆ ಭರತನಾಟ್ಯದ ಕರಣಗಳನ್ನೂ ತಿಳಿಸಿಕೊಟ್ಟರು.
ಇಂಟ್ಯಾಕ್ ಮಂಗಳೂರು ಘಟಕದ ನಿರ್ದೇಶಕ ಸುಭಾಷ್ ಬಸು ಸ್ವಾಗತಿಸಿದರು. ಕಲಾವಿದರಾದ ರಾಜೇಂದ್ರ ಕೇದಿಗೆ, ನೇಮಿರಾಜ ಶೆಟ್ಟಿ, ಮಧುಸೂದನ ಕುಮಾರ್, ಹರೀಶ್ ಕೊಡಿಯಾಲಬೈಲ್, ಪ್ರಸನ್ನ ರೈ ಪುತ್ತೂರು, ಲೇಖಕಿಯರಾದ ಡಾ. ಮೀನಾಕ್ಷಿ ರಾಮಚಂದ್ರ, ರತ್ನಾವತಿ ಜೆ. ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು. ಡಾ. ವಸಂತಕುಮಾರ ಪೆರ್ಲ ಕಾರ್ಯಕ್ರಮ ನಿರೂಪಿಸಿ, ಕೆ. ಶೈಲಾಕುಮಾರಿ ವಂದಿಸಿದರು. ಬಹುಸಂಖ್ಯೆಯಲ್ಲಿ ಆಗಮಿಸಿದ ಪ್ರೇಕ್ಷಕರು ಮತ್ತು ನೃತ್ಯಾಸಕ್ತರು ಕಾರ್ಯಕ್ರಮವನ್ನು ಆಸ್ವಾದಿಸಿದರು.