ಮಂಗಳೂರು : ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು ವಿ.ವಿ. ಮತ್ತು ಕೆನರಾ ಕಾಲೇಜು ಜಂಟಿಯಾಗಿ ಆಯೋಜಿಸಿದ ಅಂತರ ಕಾಲೇಜು ಜಾನಪದ ಬುಡಕಟ್ಟು ಮತ್ತು ಶಾಸ್ತ್ರೀಯ ಏಕವ್ಯಕ್ತಿ ನೃತ್ಯ ಸ್ಪರ್ಧಾವಳಿ ‘ನಾಟ್ಯ ಸಂಭ್ರಮ -2023’ವು ಕೆನರಾ ಕಾಲೇಜಿನಲ್ಲಿ ದಿನಾಂಕ 18-12-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕಿ ಡಾ. ಆರತಿ ಹೆಚ್. ಶೆಟ್ಟಿ ಮಾತನಾಡಿ “ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಅದಕ್ಕೆ ಹೆತ್ತವರ ಪ್ರೋತ್ಸಾಹ ಬಹಳ ಮುಖ್ಯ. ನಮ್ಮ ಶಾಲಾ-ಕಾಲೇಜು ದಿನಗಳಲ್ಲಿ ಇಂತಹ ಚಟುವಟಿಕೆಗಳು ಇರಲಿಲ್ಲ” ಎಂದು ಹೇಳಿದರು. ಯಾವುದೇ ತಂತ್ರಜ್ಞಾನವಿಲ್ಲದ ಆ ದಿನಗಳಲ್ಲಿ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ನೆನಪಿಸಿಕೊಂಡರು.
ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯ ಮಂಗಳೂರು ವಿ.ವಿ. ಇದರ ನಿರ್ದೇಶಕರಾದ ಡಾ. ಗಣೇಶ್ ಸಂಜೀವ್ ಮುಖ್ಯ ಅತಿಥಿಯಾಗಿದ್ದು “ಕಾಲೇಜುಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಅವಕಾಶ ಕಲ್ಪಿಸಿ ಕೊಡಬೇಕಾಗುತ್ತದೆ. ಸ್ಪರ್ಧೆಯಲ್ಲಿ ಸೋತು ಹೋಗುವರು ಯಾರು ಇಲ್ಲ ಎಲ್ಲರೂ ನಮ್ಮ ಹೃದಯವನ್ನು ಗೆಲ್ಲುತ್ತಾರೆ. ಸೋತವರಿಗೆ ಅವಕಾಶ ಇದೆ” ಎಂದು ಶುಭ ಹಾರೈಸಿದರು.
ಕಾಲೇಜು ಸಂಚಾಲಕರಾದ ಸಿ.ಎ. ಎಂ. ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದು, “ಇಂದು ವಿದ್ಯಾರ್ಥಿಗಳಿಗೆ ಹೆತ್ತವರು ಶಿಕ್ಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಇಂದಿನ ಪೋಷಕರು ಹಿಂದಿನಂತಲ್ಲ. ಸಹಪಠ್ಯ ಚಟುವಟಿಕೆಗಳು ಹೆಚ್ಚಾಗಲು ಪೋಷಕರು ಕಾರಣರಾಗಿದ್ದಾರೆ” ಎಂದು ನುಡಿದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಸ್ವಾಗತಿಸಿ, ಕಲಾ ಸಂಘದ ಸಂಯೋಜಕಿ ವಾಣಿ ಯು.ಎಸ್. ವಂದಿಸಿ, ಅಮೃತಾ ನಿರೂಪಿಸಿದರು. ವ್ಯವಸ್ಥಾಪಕರಾದ ಶ್ರೀ ಕೆ. ಶಿವಾನಂದ ಶೆಣೈ, ಡಾ.ದೀಪ್ತಿ ನಾಯಕ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯ ಮಂಗಳೂರು ವಿಶ್ವವಿದ್ಯಾಲಯ ನಿರ್ದೇಶಕರಾಗಿರುವ ಡಾ. ಗಣೇಶ್ ಸಂಜೀವ್ ಮುಖ್ಯ ಅತಿಥಿಯಾಗಿದ್ದು “ಭಾರತೀಯತೆ ಎಂಬ ಏಕತೆಯನ್ನು ಎತ್ತಿ ಹಿಡಿಯಲು ಎಲ್ಲರೂ ಇಂತಹ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಈ ಮೂಲಕ ಒಳ್ಳೆಯ ಮನುಷ್ಯರಾಗಬೇಕು. ಇಲ್ಲಿ ಗೆದ್ದವರು ಮುಂದಿನ ಹಂತಕ್ಕೆ ಹೋಗಲು ಅವಕಾಶವಿದೆ. ತೀರ್ಪುಗಾರರು ನೀಡಿದ ಸಲಹೆಯನ್ನು ಅರ್ಥೈಸಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಬೇಕು” ಎಂದರು. ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ “ಸೋಲು ಗೆಲುವುಗಳನ್ನು ಧನಾತ್ಮಕವಾಗಿ ಪರಿಗಣಿಸಬೇಕು” ಎಂದರು. ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಸ್ವಾಗತಿಸಿ, ಸೌಜನ್ಯಾ ವಂದಿಸಿ, ಶ್ರೀಮತಿ ಲಕ್ಷ್ಮಿಹೆಗ್ಡೆ ಸ್ಪರ್ಧೆಯ ವರದಿಯನ್ನು ವಾಚಿಸಿದರು. ಶ್ರೀಮತಿ ಕೀರ್ತಿ ಕೆ., ಶ್ರೀಮತಿ ರಕ್ಷಿತಾ, ಶ್ರೀಮತಿ ಶ್ರುತಿ ಉಪಸ್ಥಿತರಿದ್ದರು. ಭಾರ್ಗವಿ ನಾಯಕ್ ನಿರೂಪಿಸಿದರು.
ಫಲಿತಾಂಶ : ಶಾಸ್ತ್ರೀಯ ಏಕವ್ಯಕ್ತಿ ನೃತ್ಯಸ್ಪರ್ಧೆಯಲ್ಲಿ 16 ವಿವಿಧ ಕಾಲೇಜುಗಳು ಭಾಗವಹಿಸಿದ್ದು, ಕೆನರಾ ಕಾಲೇಜು ಮಂಗಳೂರು ಪ್ರಥಮ, ಯೂನಿವರ್ಸಿಟಿ ಕಾಲೇಜ್ ಕೊಣಾಜೆ ದ್ವಿತೀಯ ಹಾಗೂ ಆಳ್ವಾಸ್ ಮೂಡಬಿದ್ರೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಸಾಮೂಹಿಕ ಜನಪದ ನೃತ್ಯ ಸ್ಪರ್ಧೆಯಲ್ಲಿ ವಿವಿಧ 9 ತಂಡಗಳು ಭಾಗವಹಿಸಿದ್ದು ಕೆನರಾ ಕಾಲೇಜು ಪ್ರಥಮ ಸ್ಥಾನ ಗೆದ್ದುಕೊಂಡಿತು. ಆಳ್ವಾಸ್ ಕಾಲೇಜ್ ಮೂಡಬಿದ್ರೆ ದ್ವಿತೀಯ ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ತೃತೀಯ ಸ್ಥಾನ ಪಡೆಯಿತು.