14-03-2023,ಪುತ್ತೂರು: ಮಹಿಳಾ ಮಣಿಗಳಿಂದ ಅಂತ:ಪುರ ಗೀತೆಗಳ ಅಭಿನಯ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 11-03-2023ರಂದು “ನಾಟ್ಯ ರಂಗ” ಪುತ್ತೂರು, ಇಲ್ಲಿ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ ವಿಶೇಷವಾಗಿ ಆಚರಿಸಲಾಯಿತು. ನಾಟ್ಯರಂಗದ ಮಹಿಳಾ ವಿದ್ಯಾರ್ಥಿಗಳು ಅಂತ:ಪುರ ಗೀತೆಗಳ ಅಭಿನಯ ಪ್ರದರ್ಶಿಸಿದರು. ಜೊತೆಗೆ ಅತಿಥಿಗಳಾಗಿ ಯುವ ಸಾಧಕ ಕಲಾವಿದೆಯರಾದ ಶ್ರೇಯಾ ಆಚಾರ್ಯ ಹಾಗೂ ಹೇಮ ಸ್ವಾತಿ ತಮ್ಮ ಕಲಾ ಪಯಣದ ಹಾದಿಯನ್ನು ತಮ್ಮದೇ ಪದಗಳಲ್ಲಿ ವರ್ಣಿಸುತ್ತಾ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದ ನಾಟ್ಯರಂಗದ ನಿರ್ದೇಶಕಿ ವಿದುಷಿ ಮಂಜುಳ ಸುಬ್ರಹ್ಮಣ್ಯ ಮಾತಾಡುತ್ತಾ, “ನಮ್ಮ ನಾಟ್ಯರಂಗ ನೃತ್ಯ, ರಂಗಭೂಮಿ ಚಟುವಟಿಕೆಗಳಿಗೆ ಮೀಸಲು. ಇಲ್ಲಿನ ಕಲಿಕೆ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ,ಇಲ್ಲಿ ಮಹಿಳೆಯರೂ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೆಲ್ಲಾ ನೃತ್ಯ ಅಥವಾ ಇನ್ಯಾವುದೇ ಕಲಾಪ್ರಕಾರಗಳನ್ನು ಎಳವೆಯಲ್ಲೇ ಕಲಿತು ರೂಢಿಸಬೇಕೆಂಬ ಚಿಂತನೆ ಇತ್ತು. ಆದರೆ, ಕಲಿಕೆಗೆ ವಯಸ್ಸಿನ ಹಂಗು ಇಲ್ಲ ಎಂಬುದನ್ನು ಇಂದು ನಾಟ್ಯರಂಗದ ಈ ಮಹಿಳೆಯರು ಅದನ್ನು ನಿಜವಾಗಿಸಿದ್ದಾರೆ.
ಇವರು ಛಲ ಬಿಡದೆ ಕಲಿತಿದ್ದಾರೆ. ಪ್ರದರ್ಶನ ಕೊಡುವುದು ಅಥವಾ ತಂಡ ಕಟ್ಟಿಕೊಳ್ಳುವ ಉದ್ದೇಶ ಇವರದ್ದಲ್ಲ. ಮೈಮನ ಹಗುರಾಗಿ, ಪ್ರತಿಭೆಯೊಂದು ನರ್ತನದ ಪ್ರಸವವಾಗಿ ಮತ್ತೊಮ್ಮೆ ತಮ್ಮೊಳಗೆ ತಮ್ಮನ್ನು ತಾವು ಕಂಡುಕೊಳ್ಳುವುದಕ್ಕೆ ಇವರೆಲ್ಲ ಪ್ರೌಢ ವಯಸ್ಸಿನಲ್ಲೂ ಗೆಜ್ಜೆ ಕಟ್ಟಿದ್ದಾರೆ.
ತಮ್ಮದೇ ಸ್ವಂತ ಸ್ಪೇಸ್ ಅವರಿಗೆ ಈ ಮೂಲಕ ಸಿಕ್ಕಿದೆ. ಮಹಿಳಾ ದಿನದ ನೆಪದಲ್ಲಿ, ತಮ್ಮ ಕಲಿಕೆಯನ್ನು ಇವರೆಲ್ಲ ವೇದಿಕೆಯಲ್ಲಿ ಪ್ರದರ್ಶಿಸಿದ್ದಾರೆ ಎಂದರು.” ಈ ಕಾರ್ಯಕ್ರಮದಲ್ಲಿ ನಾಟ್ಯರಂಗದ ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಪೋಷಕರಾದ ಆಶಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
 
 
									 
					