ಉಡುಪಿ : ಭರತನಾಟ್ಯ, ಸಂಗೀತ, ಸಂಸ್ಕೃತಿ, ನಾಟಕ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿ ಹೆಸರು ಮಾಡಿರುವ ‘ನಾಟ್ಯಾಯನ’ ಯುಗಳ ನೃತ್ಯ ಕಾರ್ಯಕ್ರಮ ಉಡುಪಿಯ ಅಮೃತ್ ಗಾರ್ಡನಿನಲ್ಲಿ ದಿನಾಂಕ 04-11-2023 ರಂದು ಪ್ರದರ್ಶನಗೊಂಡಿತು.
ಗೌಡ ಸಾರಸ್ವತ ಸಾಮಾಜದ ಪುರೋಹಿತ ಪ್ರಮುಖರಲ್ಲಿ ಒಬ್ಬರಾದ ವೇ.ಮೂ. ಚೇಂಪಿ ರಾಮಚಂದ್ರ ಅನಂತ ಭಟ್ ಅವರ ಷಷ್ಠಿ ಪೂರ್ತಿ ಸಂಭ್ರಮದ ಪ್ರಯುಕ್ತ ಆಯೋಜನೆಗೊಂಡ ಈ ಕಾರ್ಯಕ್ರಮ ವಿದ್ವಜ್ಜನ ಸಹಿತ ಸರ್ವರ ಮನಸೂರೆಗೊಂಡು ಎಲ್ಲರ ಪ್ರಸಂಶೆಗೆ ಪಾತ್ರವಾಯಿತು. ವಿದುಷಿ ಅಯನಾ.ವಿ. ರಮಣ್ ಪ್ರಸ್ತುತ ಪಡಿಸಿದ ಸನ್ಯಾಸ ಸೂಕ್ತ, ಅದ್ಭುತ ಸ್ಮರಣಶಕ್ತಿಯ ಕವಿನಾಮಾವಳಿ, ವಿದ್ವಾನ್ ಮಂಜುನಾಥ್. ಎನ್. ಪುತ್ತೂರು ಅವರೊಂದಿಗೆ ಅಭಿನಯಿಸಿದ ಅವರದೇ ರಚನೆಯ ಮೇಳಪ್ರಾಪ್ತಿ, ವಿಭಿನ್ನವಾಗಿ ಯುಗಳ ನೃತ್ಯಕ್ಕೆ ಅಳವಟ್ಟ ಪುರಂದರ ದಾಸರ ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ಮುಂತಾದವು ವಿಶೇಷ ಮೆಚ್ಚುಗೆ ಗಳಿಸಿದವು.
ಕಾರ್ಯಕ್ರಮದ ಬಳಿಕ ನಾಟ್ಯಾಯನದ ನಿರ್ದೇಶಕ ಕೆ.ವಿ. ರಮಣ್ ಮಂಗಳೂರು – ಡಾ. ಮೂಕಾಂಬಿಕ ಜಿ.ಎಸ್. ದಂಪತಿ ಸಹಿತ ಕಲಾವಿದರನ್ನು ಗೌರವಿಸಲಾಯಿತು. ಉಪನ್ಯಾಸಕ ರಾಮಚಂದ್ರ ನಿರೂಪಿಸಿ ಚೇಂಪಿ ಕುಟುಂಬಿಕರು ಸನ್ಮಾನಿಸಿದರು.