ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಐದನೇ ದೀಪಾವಳಿ ಸಂಗೀತೋತ್ಸವದ ಎರಡನೇ ದಿನ ದಿನಾಂಕ 21 ಅಕ್ಟೋಬರ್ 2025ರಂದು ಗೋಶಾಲೆಯ ಸಂಸ್ಥಾಪಕರೂ ಜ್ಯೋತಿಷ್ಯ ಪಂಡಿತರೂ ಆದ ವಿಷ್ಣುಪ್ರಸಾದ್ ಹೆಬ್ಬಾರ್ ರಚಿಸಿದ ನವಗ್ರಹ ಕುರಿತ ಸಂಗೀತ ಕೀರ್ತನೆಗಳನ್ನು ಕಾಸರಗೋಡು ಜಿಲ್ಲೆಯ ಸುಪ್ರಸಿದ್ಧ ಕರ್ನಾಟಕ ಸಂಗೀತ ತಜ್ಞ ವೆಳ್ಳಿಕೋತ್ ವಿಷ್ಣುಭಟ್ ಬಿಡುಗಡೆ ಮಾಡಿ ಹಾಡಿದರು.
ವಿಷ್ಣು ಭಟ್ ಇವರು ಒಂಬತ್ತು ಗ್ರಹಗಳ ಮೇಲೆ ಲಾವಂಗಿ, ಚಕ್ರವಾಕಂ, ಆನಂದ ಭೈರವಿ, ಧನ್ಯಾಸಿ, ಆರಾಭಿ, ಹಂಸಧ್ವನಿ, ವಸಂತ, ಶ್ರೀ ರಾಗಂ ಮತ್ತು ಹಂಸನಾದಂಗಳಲ್ಲಿ ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಪಕ್ಕ ವಾದ್ಯದಲ್ಲಿ ವೀಣೆಯಲ್ಲಿ ವೈ.ಜಿ. ಶ್ರೀಲತಾ ನಿಕ್ಷಿತ್, ಪಿಟೀಲಿನಲ್ಲಿ ಸುನೀತಾ ಹರಿಶಂಕರ್, ಮೃದಂಗದಲ್ಲಿ ತ್ರಿಪುಣಿತುರ ರಾಜ್ ನಾರಾಯಣನ್, ಘಟಂನಲ್ಲಿ ರೋಹಿತ್ ಪ್ರಸಾದ್, ಮೋರ್ಸಿಂಗ್ ನಲ್ಲಿ ಗೋಪಿ ನಾದಾಲಯ ಸಹಕರಿಸಿದರು.
ಎರಡನೇ ದಿನ ಚೆನ್ನೈನಲ್ಲಿ ಅನಸೂಯಾ ಪಾಠಕ್, ಸರ್ವೇಶ್ ದೇವಸ್ಥಲಿ, ಅದಿತಿ ಪ್ರಹ್ಲಾದ್, ಅಭಿಜ್ಞಾ ರಾವ್, ಶಿಲ್ಪಾ ಪಂಚ ಮತ್ತು ಅಜಯ್ ಮುಕ್ಕು ಚೆನ್ನೈ, ಸ್ನೇಹಾ ಗೋಮತಿ, ವಿಭಾಶ್ರೀ ಬೆಳ್ಳಾರೆ, ಶೃತಿ ವಾರಿಜಾಕ್ಷನ್, ಶ್ರೇಯಾ ಕೊಳತ್ತಾಯ, ಕಾಂಚನ ಸಹೋದರಿಯರು ಮುಂತಾದವರು ನಂದಿ ಮಂಟಪದಲ್ಲಿ ಗಾನಾರ್ಚನೆ ಮಾಡಿದ್ದಾರೆ.
ಕೀರ್ತನೆಗಳು ಈ ಕೆಳಗಿನ ರಾಗಗಳಲ್ಲಿ ರಚಿಸಲ್ಪಟ್ಟಿದೆ:
ಸಹಸ್ರಕಿರಣಂ (ಸೂರ್ಯ) – ಲಾವಂಗಿ ರಾಗ
ಮನಸಾ ಸ್ಮರಾಮಿ ಸೋಮಂ (ಚಂದ್ರ) – ಚಕ್ರವಾಕಂ ರಾಗ
ಮಂಗಳ ದಾಯಕಂ ಮಂಗಳರೂಪಂ (ಕುಜ) – ಆನಂದಭೈರವೀ ರಾಗ
ಭಾವಯಾಮಿ ಸೋಮಸೂನಂ (ಬುಧ) – ಧ್ಯನಾಸಿ ರಾಗ
ಶ್ರೀದೇವ ಗುರುಂ (ಗುರು) – ಆರಾಭಿ ರಾಗ
ಪ್ರಣಮಾಮಿ ಶುಕ್ರಾಚಾರ್ಯಂ (ಶುಕ್ರ) – ಹಂಸಧ್ವನಿ ರಾಗ
ಶರಣಂ ದಿವಾಕರಸುತಂ (ಶನಿ) – ವಸಂತ ರಾಗ
ಛಾಯಾ ಪುತ್ರಂ ಭಜಾಮ್ಯಹಂ (ರಾಹು) – ಶ್ರೀ ರಾಗ
ಕೇತುಂ ಸಂತತಮಹಂ ಚಿಂತಯೇ (ಕೇತು) – ಹಂಸನಾದಂ ರಾಗ
ಭಜನೆಗಳೂ ಸೇರಿದಂತೆ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಗೀತ ಕೀರ್ತನೆಗಳನ್ನು ವಿಷ್ಣುಪ್ರಸಾದ್ ಹೆಬ್ಬಾರ್ ಅವರು ರಚಿಸಿದ್ದಾರೆ.