ಉಡುಪಿ : ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಮಣಿಪಾಲ ಮತ್ತು ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಣಿಪಾಲದ ರತ್ನ ಸಂಜೀವ ಕಲಾ ಮಂಡಲ ವೇದಿಕೆಯಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಂದು ನಡೆದ ನವರಸಗಳಲ್ಲಿ ನವರಾತ್ರಿ ಎಂಬ ಕವಿಗೋಷ್ಠಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಧ್ಯಕ್ಷರಾದ ಮಹೇಶ್ ಠಾಕೂರ್ ಮಾತನಾಡಿ “ತೆರೆಮರೆಯಲ್ಲಿರುವ ಹೂವನ್ನು ಶಿವನ ಮುಕುಟಕ್ಕೆ ಅರ್ಪಿಸಿದಾಗ ಅದು ಶ್ರೇಷ್ಠವಾಗುತ್ತದೆ. ಅದೇ ರೀತಿ ನಾವು ರತ್ನ ಸಂಜೀವ ಕಲಾಮಂಡಲದ ವತಿಯಿಂದ ತೆರೆಮರೆಯ ಸಾಹಿತಿಗಳನ್ನು ಮುನ್ನೆಲೆಗೆ ತರುವ ಪ್ರಯತ್ನಕ್ಕೆ ಮುಂದಡಿ ಇಡುತ್ತಿದ್ದೇವೆ. ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕಲ್ಲಚ್ಚು ಪ್ರಕಾಶನ ಹಾಗೂ ರತ್ನ ಸಂಜೀವ ಕಲಾಮಂಡಲದ ಸಹಯೋಗದೊಂದಿಗೆ ಕಲೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಲು ಹಾಗೂ ಹೊಸ ಸಾಹಿತಿಗಳಿಗೆ ವೇದಿಕೆ ಸೃಷ್ಟಿಸಲು ಈ ಪ್ರಬುದ್ಧರ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ನಾವು ತಬಲಾ, ಹಾರ್ಮೋನಿಯಂ, ಕರ್ಣಾಟಕ ಸಂಗೀತ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಯೋಗವನ್ನು ಪ್ರತಿದಿನ ಬೆಳಗ್ಗೆ ಉಚಿತವಾಗಿ ಹೇಳಿ ಕೊಡುತ್ತಿದ್ದೇವೆ. ಇದೇ ರೀತಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಣ್ಣಮಟ್ಟದಲ್ಲಿ ಗುರುತಿಸಿಕೊಂಡ ಬರಹಗಾರರನ್ನು ಗುರುತಿಸಲಾಗುವುದು” ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ನಿತ್ಯಾನಂದ ಪಡ್ರೆ, ನಟರಾಜ ಪರ್ಕಳ, ಜ್ಯೋತಿಮಹಾದೇವಿ, ಸುಮಾ ಕಿರಣ್, ಸ್ಮಿತಾ ಕಾಮತ್, ಸುನೀಲ್ ಪಣಪ್ಪಿಲ ಹಾಗೂ ಕರವೀರಯ್ಯ ಇವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ನ ಮನೆ ಮನೆ ಗ್ರಂಥಾಲಯ ಯೋಜನೆಗಾಗಿ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ಅಧ್ಯಕ್ಷ ರವಿರಾಜ್ ಎಚ್.ಪಿ., ಕಲ್ಲಚ್ಚು ಪ್ರಕಾಶನದ ಮಹೇಶ್ ಆರ್. ನಾಯಕ್, ಪ್ರಮುಖರಾದ ದಿನೇಶ್ ಕುಮಾರ್. ಸತೀಶ ಪಾಟೀಲ್, ಉಷಾ ಹೆಬ್ಬಾರ್, ಸುಕನ್ಯ ಕಳಸ ಉಪಸ್ಥಿತರಿದ್ದರು.