ಬೆಳಗಾವಿ : ರಂಗಸಂಪದದವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಮೂರು ದಿನ ಬೇರೆ ಬೇರೆ ನಾಟಕಗಳ ‘ರಂಗ ಕಾರ್ತಿಕ ನಾಟಕೋತ್ಸವ’ವನ್ನು ಹಮ್ಮಿಕೊಂಡಿದ್ದರು. ಉತ್ಸವದ ಮೊದಲ ದಿನವಾದ ದಿನಾಂಕ 16 ನವೆಂಬರ್ 2024ರಂದು ರಾಜೇಂದ್ರ ಕಾರಂತ ರಚನೆಯ ಡಾ. ಅರವಿಂದ ಕುಲಕರ್ಣಿ ನಿರ್ದೇಶನದ ‘ನಾಯಿ ಕಳೆದಿದೆ’ ನಾಟಕ ಪ್ರದರ್ಶನಗೊಂಡಿತು.
ಈ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಎಲ್ಲ ಪ್ರೇಕ್ಷಕರ ಪರವಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ವಾಗ್ಮಿ ಡಾ. ಬಸವರಾಜ ಜಗಜಂಪಿಯವರು “ನಾಯಿ ಕಳೆದಿದೆ ಎಂಬ ನಾಟಕವು ಸಮಕಾಲೀನ ವಿಷಯವನ್ನು ಅತ್ಯಂತ ಪ್ರಭಾವಿಯಾಗಿ ಬಿಂಬಿಸಿದೆ. ಎಲ್ಲ ಪಾತ್ರಧಾರಿಗಳು ಅಷ್ಟೇ ಪರಿಣಾಮಕಾರಿಯಾಗಿ ಪ್ರೇಕ್ಷಕರ ಮನಮುಟ್ಟುವಂತೆ ಅಭಿನಯಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಬೆಳಗಾವಿಯ ಜನರಲ್ಲಿ ರಂಗಾಸಕ್ತಿಯನ್ನು ಹೆಚ್ಚಿಸುವಲ್ಲಿ ರಂಗಸಂಪದ ತಂಡ ಯಶಸ್ವಿಯಾಗಿದೆ. ಜನರಲ್ಲಿ ರಂಗಭೂಮಿಯ ಒಲವನ್ನು ಮೂಡಿಸುವಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರ ಶ್ರಮದ ಪಾಲು ದೊಡ್ಡದಿದೆ” ಎಂದು ಹೇಳಿದರು.
“ನಾಯಿ ಕಳೆದಿದೆ” ನಾಟಕದ ನಿರ್ದೇಶಕ ಡಾ. ಅರವಿಂದ ಕುಲಕರ್ಣಿಯವರು ಮಾತನಾಡಿ “ಕರ್ನಾಟಕದ ಭಾಷೆ ಕನ್ನಡವಾದರೂ ಬೆಂಗಳೂರು, ಬೆಳಗಾವಿ, ಉಡುಪಿ ಹೀಗೆ ಬೇರೆ ಬೇರೆ ಪ್ರದೇಶದ ಕನ್ನಡ ಬೇರೆ ಬೇರೆಯಾಗಿದೆ. ನಾಟಕದ ಭಾಷೆಯನ್ನು ನಾವು ಬದಲಾಯಿಸುವುದಿಲ್ಲ, ಬೇರೆ ಬೇರೆ ಪ್ರದೇಶ ಭಾಷೆಯನ್ನು ಪರಿಚಯಿಸಿದ ಹಾಗೆ ಆಗುತ್ತದೆ. ಈಗ ನಮ್ಮ ನಾಟಕಗಳು ಮುಂಬೈ, ಬೆಂಗಳೂರು ಹೀಗೆ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶನಗೊಳ್ಳಲಿವೆ. ನಾಟಕ ರಚನಾಕಾರರ ಭಾಷೆಯನ್ನೇ ಎಲ್ಲಡೆ ನಾವು ಬಳಿಸಿಕೊಳ್ಳುತ್ತೇವೆ” ಎಂದು ಹೇಳಿದರು.
ನಾಟಕದ ಕುರಿತು ಡಾ. ಸರಜೂ ಕಾಟ್ಕರ್ ಮಾತನಾಡಿದರು. ವಿದೇಶಗಳನ್ನು ಸೇರಿಕೊಳ್ಳುತ್ತಿರುವ ಮಕ್ಕಳು, ಮಕ್ಕಳ ಪ್ರೀತಿಯಿಂದ ವಂಚಿತರಾಗುತ್ತಿರುವ ತಂದೆ ತಾಯಿ, ಅತ್ತೆ ಮಾವನಿಗಿಂತ ನಾಯಿಯ ಮೇಲೆಯೇ ಹೆಚ್ಚು ಹೆಚ್ಚು ಪ್ರೀತಿಯನ್ನು ತೋರಿಸುವ ಸೊಸೆ. ಮೊಮ್ಮಗನ ಕುಡಿ ಮೂಡುವುದರೊಂದಿಗೆ ಸುಖಾಂತ್ಯವನ್ನು ಕಾಣುವ ಕಥೆಯೇ ‘ನಾಯಿ ಕಳೆದಿದೆ’ ನಾಟಕ. ಈ ನಾಟಕದ ವಸ್ತು ತುಂಬ ಗಂಭೀರವಾಗಿದ್ದರೂ ಪ್ರೇಕ್ಷಕರನ್ನು ಸೆರೆಹಿಡಿದು ಕೂಡಿಸುವ ಕೆಲಸವನ್ನು ನಾಟಕದಲ್ಲಿಯ ಹಾಸ್ಯ ಸಂಭಾಷಣೆ ಅಭಿನಯದಿಂದ ಅಪ್ಪ (ಅರವಿಂದ ಪಾಟೀಲ) ಮತ್ತು ಅವ್ವನ (ಪದ್ಮಾ ಕುಲಕರ್ಣಿ) ಪಾತ್ರಗಳು ಮಾಡುತ್ತವೆ.
ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನ ಚೆನ್ನಾಗಿದೆ. ಕಲಾವಿದರಾದ ಡಾ. ನಿರ್ಮಲಾ ಬಟ್ಟಲ, ಆರ್.ವಿ. ಭಟ್, ಎ.ಎಮ್. ಕುಲಕರ್ಣಿ, ಸಮೀರ ಜೋಶಿ, ಯೋಗೇಶ ದೇಶಪಾಂಡೆ, ವಿನೋದ ಸಪ್ಪಣ್ಣವರ, ಸ್ನೇಹಾ ಜೋಶಿ, ಸ್ನೇಹಾ ಕುಲಕರ್ಣಿ, ಮಂಜುನಾಥ ಕಲಾಲ ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿದ್ದಾರೆ. ಅನಂತ ಪಪ್ಪು, ಪ್ರಸಾದ ಕಾರಜೋಳ, ಚಿದಾನಂದ ವಾಳ್ಕೆ, ರಾಮಚಂದ್ರ ಕಟ್ಟಿ ಉಪಸ್ಥಿತರಿದ್ದರು. ಗುರುನಾಥ ಕುಲಕರ್ಣಿ ವಂದಿಸಿ, ವೀಣಾ ಹೆಗಡೆ ನಿರೂಪಿಸಿದರು.