ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಬೈಕಾಡಿ ಪ್ರತಿಷ್ಠಾನ (ರಿ.) ಮಂಗಳೂರು ಇವರ ವತಿಯಿಂದ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದೊಂದಿಗೆ ಬೈಕಾಡಿ ಜನಾರ್ದನ ಆಚಾರ್ ಸ್ಮರಣಾರ್ಥ ಮಕ್ಕಳ ನಾಟಕೋತ್ಸವವನ್ನು ದಿನಾಂಕ 3 ಆಗಸ್ಟ್ 2024ರಂದು ಸಂಜೆ ಗಂಟೆ 6-00ಕ್ಕೆ ಮಂಗಳೂರು ಡೊಂಗರಗೇರಿ ಕೆನರಾ ಹೆಮ್ಮಕ್ಕಳ ಪ್ರೌಢ ಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೈದೇಹಿ ರಚನೆಯ ಹಾಗೂ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನ ಮತ್ತು ರಂಗವಿನ್ಯಾಸದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ‘ನಾಯಿ ಮರಿ’ ನಾಟಕ ಪ್ರದರ್ಶನ ನಡೆಯಲಿದೆ. ಆಸಕ್ತರಿಗೆ ಉಚಿತ ಪ್ರವೇಶವಿದೆ.
ಓರ್ವ ಶಿಕ್ಷಕರಾಗಿ, ಕಲಾರಾಧಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಬಹುಮುಖ ವ್ಯಕ್ತಿತ್ವದ ಶ್ರೀ ಬೈಕಾಡಿ ಜನಾರ್ದನ ಆಚಾರ್ ಇವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಪ್ರಬುದ್ಧ ಶಿಕ್ಷಕರಾಗಿದ್ದ ಶ್ರೀಯುತರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಿ, ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಲ್ಲಿ ಪ್ರೇರಣೆ ಮತ್ತು ಬೆಂಬಲ ನೀಡುತ್ತಿದ್ದರು. ಹಲವಾರು ನಾಟಕಗಳನ್ನು ನಿರ್ದೇಶಿಸಿ ವಿದ್ಯಾರ್ಥಿಗಳಲ್ಲಿ ನಾಟಕ ಆಸಕ್ತಿಯನ್ನು ಬಿತ್ತಿ ರಂಗಭೂಮಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುವಲ್ಲಿ ಹುರಿದುಂಬಿಸಿದರು.