ಬೆಳಗಾವಿ : ರಂಗಸಂಪದವರು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 09-12-2023ರಂದು ಹಮ್ಮಿಕೊಂಡಿದ್ದ ನಿನಾಸಂ ತಂಡದವರ ‘ನಿನಾಸಂ ತಿರುಗಾಟ’ದಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಖ್ಯಾತ ನ್ಯಾಯವಾದಿ, ರಂಗಸಂಪದದ ಪೋಷಕ ಎಸ್.ಎಂ. ಕುಲಕರ್ಣಿಯವರು ಜಾಗಟೆಯನ್ನು ಬಾರಿಸುವದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ “ಸುಮಾರು 45 ವರ್ಷಗಳ ಇತಿಹಾಸವನ್ನು ರಂಗಸಂಪದ ಹೊಂದಿದೆ. ಪ್ರೇಕ್ಷಕರಲ್ಲಿ ನಾಟಕ ನೋಡುವ ಹೆಚ್ಚಿನ ಅಭಿರುಚಿಯನ್ನು ಮೂಡಿಸಿದ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಹಲವಾರು ಕಷ್ಟನಷ್ಟಗಳಿಂದ ನಡೆದು ಬಂದಿರುವ ರಂಗಸಂಪದ ತಂಡ ಇಂದು ಕರ್ನಾಟಕದಾದ್ಯಂತ ರಂಗಾಸಕ್ತರ ಪ್ರೀತಿಗೆ ಪಾತ್ರವಾಗಿದೆ. ಪ್ರೇಕ್ಷಕರು ನಾಟಕ ನೋಡುವುದರೊಂದಿಗೆ ಧನಸಹಾಯವನ್ನು ನೀಡುವುದು ಅಷ್ಟೇ ಅತ್ಯವಶ್ಯವಾಗಿದೆ. ಜನರು ಎಲ್ಲಾ ರೀತಿಯ ಸಹಾಯ ಹಸ್ತ ನೀಡಿದಲ್ಲಿ ರಂಗಸಂಪದವು ಇನ್ನೂ ಒಳ್ಳೊಳ್ಳೆ ನಾಟಕಗಳನ್ನು ತಮ್ಮ ಮುಂದಿಡುತ್ತದೆ” ಎಂದು ಹೇಳಿದರು.
ನಿನಾಸಂ ತಂಡದವರಿಂದ ಜಾನಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ರಚನೆಯ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ‘ಹುಲಿ ನೆರಳು’ ನಾಟಕ ಪ್ರದರ್ಶನಗೊಂಡಿತು. ರಂಗಸಂಪದಕ್ಕೆ ಧನಸಹಾಯ ನೀಡಿ ಪ್ರೋತ್ಸಾಹಿಸಿದ ಮಹನೀಯರನ್ನು ಗೌರವಿಸಲಾಯಿತು. ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಸ್ವಾಗತಿಸಿದರು. ನಿನಾಸಂ ವ್ಯವಸ್ಥಾಪಕ ಮಂಜುನಾಥ ಹಿರೇಮಠ, ಉಪಾಧ್ಯಕ್ಷ ಗುರುನಾಥ ಕುಲಕರ್ಣಿ, ರಾಮಚಂದ್ರ ಕಟ್ಟಿ, ಕಾರ್ಯದರ್ಶಿ ಪ್ರಸಾದ ಕಾರಜೋಶ, ಸಹಕಾರ್ಯದರ್ಶಿ ಯೋಗೇಶ ದೇಶಪಾಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.