ಉಜಿರೆ : ಶಿಕ್ಷಕ ರಾಮಕುಂಜದ ಟಿ. ನಾರಾಯಣ ಭಟ್ ರಚಿಸಿದ ‘ನೆನಪುಗಳ ನೇವರಿಕೆ’ ಕೃತಿಯನ್ನು ದಿನಾಂಕ 12 ಅಕ್ಟೋಬರ್ 2024ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಕೃತಿ ಲೋಕಾರ್ಪಣೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ತಮ್ಮ ಬದುಕಿನ ಜೊತೆಗೆ ಸುತ್ತಲ ಬದುಕಿಗೂ ಒಂದಲ್ಲ ಒಂದು ರೀತಿ ಆಸರೆಯಾಗಿ ನಡೆದುಕೊಂಡವರನ್ನು ಗುರುತಿಸಿ, ನೆನವರಿಕೆ ಮಾಡಿರುವ ಕೃತಿ ನೆನಪುಗಳ ನೇವರಿಕೆ. ಇದು ಪ್ರಸ್ತುತ ಜನಾಂಗಕ್ಕೆ ಹಾಗೂ ಮುಂದಿನವರಿಗೆ ವಿಶೇಷ ಪ್ರೇರಣೆ ನೀಡುವಂತಹದು. ಇದು ಕೇವಲ ವ್ಯಕ್ತಿಚಿತ್ರಣವಲ್ಲ ಈ ಕಾಲದ ಜೀವನ ವಿಧಾನವನ್ನು ನೆನಪಿಸುವಂತಿರುವ ಕೃತಿ” ಎಂದು ನುಡಿದರು.
ಈ ಕೃತಿಯಲ್ಲಿ ದಕ್ಷಿಣ ಭಾರತದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ 55 ಸಾಧಕರ ಚಿತ್ರಣವಿದೆ. ಇದಕ್ಕಿಂತ ಮೊದಲು 46 ವ್ಯಕ್ತಿ ಚಿತ್ರಣ ಚಿತ್ರಿಸಿರುವ ಕೃತಿ ‘ಬೆಳಕು ಬೆಳದಿಂಗಳು’ ಈಗಾಗಲೇ ಜನಪ್ರಿಯವಾಗಿದೆ. ವಿಶ್ವೇಶ ತೀರ್ಥರ ಬದುಕಿನ ಚಿತ್ರಣದ ನಾಲ್ಕಾರು ಕೃತಿಗಳು, ಮಕ್ಕಳ ವ್ಯಕ್ತಿತ್ವ ವಿಕಸನ, ಪರಿಸರ ಪ್ರೇಮ, ಪೋಷಕರಿಗೆ ಮಾರ್ಗದರ್ಶನ, ಸಾಮಾಜಿಕ ಜಾಗೃತಿ ಮುಂತಾದ 45 ಕೃತಿಗಳನ್ನು ರಚಿಸಿ ಹಲವಾರು ಮುದ್ರಣ ಕಂಡು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಟಿ. ನಾರಾಯಣ ಭಟ್.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಟಿ. ರವೀಂದ್ರ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸರೋಜಾ ಕುಮಾರಿ, ನಿವೃತ್ತ ಶಿಕ್ಷಕಿ ಶ್ರೀಮತಿ ಎಂ. ಸಂಧ್ಯಾ, ವೈದ್ಯೆ ಡಾ. ಟಿ. ಮೌಲಿಕಾ ಎಂ.ಎಸ್. ಹಾಗೂ ಇನ್ನಿತರರು ಉಪಸ್ಥಿತರಿದ್ದರು.