28 ಮಾರ್ಚ್ 2023, ಹೊಸಕೋಟೆ: ಹೊಸಕೋಟೆಯ “ಜನಪದರು” ಸಾಂಸ್ಕೃತಿಕ ವೇದಿಕೆ (ರಿ.) ಇವರು ನಿಂಬೆಕಾಯಿಪುರದ “ಜನಪದರು ರಂಗಮಂದಿರ”ದಲ್ಲಿ ದಿನಾಂಕ 27-03-2023ರಂದು ಆಯೋಜಿಸಿದ್ದ “ವಿಶ್ವರಂಗ ಭೂಮಿ” ದಿನಾಚರಣೆ ಹಾಗೂ ರಂಗಮಾಲೆ ವಾರ್ಷಿಕೋತ್ಸವವನ್ನು ಅಧ್ಯಕ್ಷ ಶ್ರೀ ಕೆ.ವಿ. ವೆಂಕಟರಮಣಪ್ಪ ಉದ್ಘಾಟಿಸಿ, “ರಂಗಭೂಮಿ ಮಾನವನ ಅಂತ:ಕರಣ ಕಲಕಿ ಅಂತರಂಗ ಅವಿರ್ಭಾವಗೊಳಿಸಿ ವೈಚಾರಿಕತೆ ಮೂಡಿಸಲು ಸಶಕ್ತ ಮಾಧ್ಯಮ. ಸಮುದಾಯದ ಮುಖವಾಣಿ ನಮ್ಮ ತಂಡ ಕೇವಲ ಒಂದು ರಂಗ ತಂಡವಾಗದೆ, ಸಾರ್ವಜನಿಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮತ್ತು ದಾನಿಗಳ ಸಹಕಾರದಿಂದಲೇ ಆಧುನಿಕ ತಂತ್ರಜ್ಞಾನದ ರಂಗ ಮಂದಿರ ನಿರ್ಮಾಣ ನಮ್ಮ ಹೆಮ್ಮೆಯ ರಂಗ ಸೇವೆ ಗ್ರೇಟರ್ ಬೆಂಗಳೂರು ಭಾಗದಲ್ಲಿ ಹೊಸ ಪ್ರೇಕ್ಷಕರನ್ನು ಹುಟ್ಟುಹಾಕಿ ರಂಗಭೂಮಿಗೆ ಕೊಡುಗೆ ನೀಡಿದೆ” ಎಂದರು.
ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದ ಸಾಹಿತಿ, ಕಲಾವಿದ ಬಾಗೆಪಲ್ಲಿ ಕೃಷ್ಣಮೂರ್ತಿ ಕೈಲಾಸಂ ಅವರ ಹಾಡು ಹಾಡಿದ್ದು ಔಚಿತ್ಯ ಪೂರ್ಣವಾಗಿತ್ತು. ವೇದಿಕೆಯಲ್ಲಿ ಸಮಾಜ ಸೇವಕ ಶ್ರೀ ನಟರಾಜ್ ಉಪಸ್ಥಿತರಿದ್ದರು. ಈ ಬಾರಿ ತಂಡದ ಕಲಾವಿದರ ಪ್ರತಿಭೆ ಸೆಳೆಯುವ ಉದ್ದೇಶದಿಂದ ರಂಗಗೀತೆ, ಹಾಸ್ಯ, ಮೈಮ್, ಅಣಕು, ರಂಗದೃಶ್ಯ, ನೃತ್ಯ, ಮಿಮಿಕ್ರಿಗಳು ನೆರೆದ ಪ್ರೇಕ್ಷಕರನ್ನು ರಂಜಿಸಿದವು. ಪದಾಧಿಕಾರಿಗಳಾದ ಶ್ರೀ ಜಗದೀಶ ಕೆಂಗನಾಳ್, ಶ್ರೀ ಸಿದ್ದೇಶ್ವರ, ಶ್ರೀ ಸುರೇಶ್ ಎಂ., ಶ್ರೀ ಶಿವಕುಮಾರ್, ಶ್ರೀ ಮುನಿರಾಜ್ ಹಾಜರಿದ್ದರು.