ಮಂಗಳೂರು : ಮಾಂಡ್ ಸೊಭಾಣ್ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಸುತ್ತಿರುವ ಮ್ಹಯ್ನ್ಯಾಳಿ ಮಾಂಚಿ (ಮಾಸಿಕ ರಂಗಭೂಮಿ) ಸರಣಿಯ 261ನೇ ಕಾರ್ಯಕ್ರಮದ ಅಂಗವಾಗಿ ‘ಅಸ್ಮಿ ತಾಯ್’ ಚಿತ್ರದ ಹಾಡುಗಳ ಲೋಕಾರ್ಪಣೆ ಮತ್ತು ‘ನಿಮ್ಣೆಂ ಉತರ್’ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03-09-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.
ಗೋವಾದ ಕೊಂಕಣಿ ಮುಖಂಡ ಗೌರೀಶ್ ವೆರ್ಣೇಕರ್ ಅವರು ಘಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾಂಗಣ್ ಪಿರ‍್ಜೆಂತ್ ಉದ್ಯಮಿ ರೊಯ್ ಕ್ಯಾಸ್ಟಲಿನೊ ಮತ್ತು ಕಸ್ಟಮ್ಸ್ ಅಧಿಕಾರಿ ಸ್ಟೀವನ್ ಡಯಾಸ್ ಗ್ರಾಮಾಫೋನ್ ಮುಳ್ಳನ್ನು ತಟ್ಟೆಯ ಮೇಲಿರಿಸುವ ಮೂಲಕ ಗೀತೆಗಳನ್ನು ಬಿಡುಗಡೆ ಮಾಡಿದರು. ನಂತರ ಮಾಂಡ್ ತಂಡದವರಿಂದ ವಿದ್ದು ಉಚ್ಚಿಲ್ ನಿರ್ದೇಶನದ ಕೊಂಕಣಿ ನಾಟಕ “ನಿಮ್ಣೆಂ ಉತರ್” ಪ್ರದರ್ಶನಗೊಂಡಿತು.
ಮೂಲತಃ ಜಿ.ಶಂಕರ್ ಪಿಳ್ಳೆ ಅವರು ರಚಿಸಿದ ‘ಭರತ ವಾಕ್ಯಂ’ ಎಂಬ ಈ ನಾಟಕವನ್ನು ಕನ್ನಡಕ್ಕೆ ನಾ.ದಾಮೋದರ ಶೆಟ್ಟಿ ಮತ್ತು ಕೊಂಕಣಿಗೆ ವಿತೊರಿ ಕಾರ್ಕಳ್ ಮತ್ತು ರೊನಿ ಕ್ರಾಸ್ತಾ ಕೆಲರಾಯ್ ಅನುವಾದಿಸಿದ್ದಾರೆ.
ಒಂದಾನೊಂದು ಕಾಲದಲ್ಲಿ ಯಶಸ್ಸಿನ ಶಿಖರವನ್ನೇರಿ ಅಟ್ಟಹಾಸ ಮೆರೆದ, ಈಗ ಒಬ್ಬಂಟಿಯಾಗಿ ಮತ್ತು ಕುಡುಕನಾಗಿ ತನ್ನ ಕೊನೆಯ ದಿನಗಳಲ್ಲಿ ನರಕಸ್ಥಿತಿ ಅನುಭವಿಸುತ್ತಿರುವ ಓರ್ವ ರಂಗ ನಟನ ಸುತ್ತ ಸುತ್ತುತ್ತದೆ. ಆತನ ಜೊತೆಗೆ ಇರುವ ‘ಗೆಳಯ’ನ ಪಾತ್ರವು, ಆತನ ಬಾಲ್ಯದ ಸ್ನೇಹಿತನಾಗಿಯೂ, ಅಂತರಾತ್ಮವಾಗಿಯೂ ಮತ್ತು ಕೆಲವೊಮ್ಮೆ ಮೃತ್ಯುವಾಗಿಯೂ ಗೋಚರಿಸುತ್ತದೆ. ಅಷ್ಟೇ ಅಲ್ಲದೆ, ಇಲ್ಲಿ ಕಾಣಿಸಿಕೊಳ್ಳುವ ಮೂರು ಪಾತ್ರಗಳಾದ ನಟ, ನಟಿ ಮತ್ತು ಗೆಳೆಯ, ನಟನ ಜೀವನದುದ್ದಕ್ಕೂ ಮುಖಾಮುಖಿಯಾದ ವಿಭಿನ್ನ ವ್ಯಕ್ತಿತ್ವಗಳಾಗಿ ಹತ್ತಾರು ರೂಪ ಪಡೆದು ದೃಶ್ಯಾತ್ಮಕವಾಗಿ ಕಾಣಿಸಿಕೊಳ್ಳುತ್ತವೆ. ನಿರ್ದೇಶಕರಿಗೂ, ಕಲಾವಿದರಿಗೂ, ಈ ನಾಟಕ ನಿಜವಾಗಿಯೂ ಒಂದು ದೊಡ್ಡ ಸವಾಲು. ಕಣ್ಣುಮುಚ್ಚಿ ತೆರೆಯುವುದರ ಒಳಗೆ ನಟ ಗಂಡನಾಗುತ್ತಾನೆ, ದುರ್ಯೋಧನನಾಗುತ್ತಾನೆ, ಪ್ರಿಯಕರನಾಗುತ್ತಾನೆ, ಧರ್ಮರಾಯನಾಗುತ್ತಾನೆ. ಅಂತೆಯೇ ನಟಿ, ಅಂತೆಯೇ ಗೆಳೆಯ. ಮೂರೇ ಕಲಾವಿದರು ಅಷ್ಟೊಂದು ಪಾತ್ರಗಳನ್ನು ನಿರ್ವಹಿಸಿದ ರೀತಿ ಮತ್ತು ಅದನ್ನು ಪ್ರೇಕ್ಷಕರಿಗೆ ತಲುಪಿಸಿದ ನಟರ ಹಾಗೂ ನಿರ್ದೇಶಕರ ರಂಗ ಕೌಶಲ್ಯ ಪ್ರಶಂಸೆಗೆ ಪಾತ್ರವಾಯಿತು. ಪಾತ್ರವರ್ಗದಲ್ಲಿ ಸವಿತಾ ಕಲಾಕುಲ್, ಅಮ್ರಿನ್ ಕ್ರಿಸ್ಟನ್ ಕಲಾಕುಲ್ ಮತ್ತು ವಿಕಾಸ್ ಕಲಾಕುಲ್ ನಟಿಸಿರುವ ಈ ನಾಟಕಕ್ಕೆ ಎಲ್ರೊನ್ ರೊಡ್ರಿಗಸ್ ಕಲಾಕುಲ್ ಹಿನ್ನಲೆ ಸಂಗೀತ ನೀಡಿ, ಕಿಂಗ್‌ಸ್ಲಿ ನಜ್ರೆತ್ ಬೆಳಕು ಸಂಯೋಜಿಸಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕ ವಿದ್ದು ಉಚ್ಚಿಲ್ ಇವರನ್ನು ಸನ್ಮಾನಿಸಲಾಯಿತು.
ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್, ಸಂಘಟಕ ಸ್ಟ್ಯಾನಿ ಅಲ್ವಾರಿಸ್, ಚಲನಚಿತ್ರದ ಪ್ರಮುಖ ಪಾತ್ರಧಾರಿಗಳಾದ ಡೆನಿಸ್ ಮೊಂತೆರೊ, ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ನೆಲ್ಲು ಪೆರ್ಮನ್ನೂರ್, ಸಂಗೀತ ನಿರ್ದೇಶಕರಾದ ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.