ಪುತ್ತೂರು : ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ,ವಾಣಿಜ್ಯ ಕಾಲೇಜು (ಸ್ವಾಯತ್ತ) ಇಲ್ಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ದಿನಾಂಕ 29 ಏಪ್ರಿಲ್ 2025ರಂದು ವಿವೇಕಾನಂದ ಸಂಶೋಧನಾ ಕೇಂದ್ರ, ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ‘ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ “ಹಿರಿಯರಾದರೂ ಸಕ್ರಿಯರಾಗಿರುವ ಅನೇಕರ ಉತ್ಸಾಹ ನಮಗೆ ಪ್ರೇರಣೆ. ಸದಾಶಿವ ಭಟ್ ಪಳ್ಳು ಅವರಂತಹಾ ಸಾಧಕರು ಹತ್ತು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಾರೆ ಎಂದಾದರೆ ಅವರ ಸಂಪರ್ಕಕ್ಕೆ ಬಂದವರೂ ಒಳ್ಳೆಯ ಭಾಷಾ ಜ್ಞಾನವನ್ನು ಹೊಂದಬಹುದು. ಅರ್ಹ ವ್ಯಕ್ತಿಗಳಿಗೆ ಸನ್ಮಾನ ಮಾಡಿದರೆ ಸನ್ಮಾನಿಸಿದವರಿಗೂ ಅದು ಹೆಮ್ಮೆಯ ಕ್ಷಣ” ಎಂದು ನುಡಿದರು.
ಖ್ಯಾತ ಬರಹಗಾರ ಹಾಗೂ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿಯವರಿಗೆ ‘ನಿರಂಜನ ಪ್ರಶಸ್ತಿ’ ಹಾಗೂ ಬಹುಭಾಷಾ ವಿದ್ವಾಂಸ ಡಾ. ಡಿ ಸದಾಶಿವ ಭಟ್ ಪಳ್ಳು ಇವರಿಗೆ ಶಂಕರ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಇವರು ಪ್ರಶಸ್ತಿ ಪುರಸ್ಕೃತರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಬು ಕೃಷ್ಣಮೂರ್ತಿಯವರು “ಸದಭಿರುಚಿಯ ಕ್ಷೇತ್ರಗಳಲ್ಲಿ ಸೈದ್ಧಾಂತಿಕವಾಗಿ ಹಾಗೂ ಇತರ ವಿಷಯಗಳಲ್ಲಿ ಭೇಧಗಳಿದ್ದರೂ ಒಳ್ಳೆಯ ಗೆಳೆತನವನ್ನು ಬೆಳೆಸಿಕೊಳ್ಳಬೇಕು. ಕೃತಿಕಾರನು ಹೊಸತೊಂದು ಕೃತಿ ರಚಿಸುವ ಸಿದ್ಧತೆಯಲ್ಲಿರುವುದು ಹಾಗೂ ಓದುಗರು ಕೃತಿಯೊಂದನ್ನು ಓದಲು ಕಾತರಿಸುವ ಸನ್ನಿವೇಶ ಪ್ರೇರಣಾತ್ಮಕವಾದುದು” ಎಂದರು.
ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಡಾ. ಡಿ. ಸದಾಶಿವ ಭಟ್ ಪಳ್ಳು ಇವರು “ಅಕ್ಷರ ಕಲಿಸಿ ಪ್ರೋತ್ಸಾಹಿಸಿದ ಗುರುವನ್ನು ಎಂದೂ ಮರೆಯಕೂಡದು. ಭಾಷೆಯೊಂದರಲ್ಲಿರುವ ಎಲ್ಲಾ ವ್ಯಾಕರಣಾಂಶಗಳನ್ನು ಸರಿಯಾಗಿ ಅರಿತು ಒಳ್ಳೆಯ ರೀತಿಯಲ್ಲಿ ಭಾಷೆಯನ್ನು ಬಳಸಿ ಬೆಳೆಸಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್., ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಪ್ರಮೋದ್ ಎಂ.ಜಿ. ಸ್ವಾಗತಿಸಿ, ಉಪಪ್ರಾಂಶುಪಾಲ ಪ್ರೊ. ಶಿವಪ್ರಸಾದ್ ಕೆ.ಎಸ್. ವಂದಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ನಿರ್ವಹಿಸಿದರು.