ಮೈಸೂರು : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಕಾರದೊಂದಿಗೆ ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ನಿರಂತರ ರಂಗ ಉತ್ಸವ – 2025’ವು ದಿನಾಂಕ 17ರಿಂದ 21 ಡಿಸೆಂಬರ್ 2025 ರವರೆಗೆ ಮೈಸೂರಿನ ಕಿರು ರಂಗಮಂದಿರದಲ್ಲಿ ಪ್ರಸ್ತುತಗೊಳ್ಳಲಿದೆ.
ವೇದಿಕೆ ಕಾರ್ಯಕ್ರಮಗಳ ವಿವರ : ದಿನಾಂಕ 17 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ಹಾಸನದ ಮಾನವ ತಂಡದಿಂದ ‘ಜಡೆ ಕೋಲಾಟ’, ಸಂಜೆ ಗಂಟೆ 6-15ಕ್ಕೆ ಉದ್ಘಾಟನಾ ಸಮಾರಂಭ ನಮ್ಮೊಂದಿಗೆ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಎಸ್.ಜಿ. ಸಿದ್ದರಾಮಯ್ಯ, ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಮತ್ತು ನಿರಂತರದ ಪ್ರಸಾದ್ ಕುಂದೂರು ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ರಾಜೇಶ್ವರಿ ತೇಜಸ್ವಿಯವರ ಆತ್ಮಕಥೆ ಆಧಾರಿತ ನಾಟಕ ‘ನನ್ನ ತೇಜಸ್ವಿ’ ನಾಟಕವನ್ನು ಬೆಂಗಳೂರಿನ ಕಲಾಮಾಧ್ಯಮ ತಂಡ ಪ್ರಸ್ತುತಪಡಿಸಲಿದೆ. ಸಂಗೀತ : ಭರತ್ ಬಿ.ಜೆ. ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ : ಬಿ.ಎಂ. ಗಿರಿರಾಜ.
ದಿನಾಂಕ 18 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ್ ವರಪ್ರಸಾದ್ ಮತ್ತು ನಿರಂತರ ಗೆಳೆಯರಿಂದ ಬಿ.ವಿ. ಕಾರಂತರ ರಂಗ ಗೀತೆಗಳು, ಸಂಜೆ ಗಂಟೆ 6-15ಕ್ಕೆ ಸಭಾ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕವಿ, ಹಿರಿಯ ಪತ್ರಕರ್ತರಾದ ಜಿ.ಪಿ. ಬಸವರಾಜು, ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುದರ್ಶನ ಎಂ.ಡಿ. ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ಜುಗಲ್ ಬಂದಿ – ‘ನಾದ ಸಂಜೆ’ ಕೊಳಲು : ರವಿ ಶಂಕರ್ ಮಿಶ್ರಾ, ಸಿತಾರ್ : ಜುನೈನ್ ಖಾನ್, ತಬಲ : ರಿಷಿ ಪ್ರಸಾದ್ (ಆಸ್ಟೀನ್ ಟೆಕ್ಸಾಸ್ ಯು.ಎಸ್.ಎ)
ದಿನಾಂಕ 19 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ್ ವರಪ್ರಸಾದ್ ಮತ್ತು ನಿರಂತರ ಗೆಳೆಯರಿಂದ ಶ್ರೀನಿವಾಸ್ ಭಟ್ (ಚೀನಿ) ಅವರ ರಂಗ ಗೀತೆಗಳು, ಸಂಜೆ ಗಂಟೆ 6-15ಕ್ಕೆ ಸಭಾ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ನಾಟಕಕಾರರಾದ ರಾಜಪ್ಪ ದಳವಾಯಿ, ನಿರಂತರದ ಶ್ರೀನಿವಾಸು ಪಾಲಹಳ್ಳಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ನಾಟಕ ‘ಪ್ರತಿ ಗಂಧರ್ವ’ ಪ್ರಸ್ತುತಿ : ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ರಚನೆ : ರಾಜಪ್ಪ ದಳವಾಯಿ, ಸಂಗೀತ : ರವಿ ಮುರೂರು ನಿರ್ದೇಶನ : ಮಾಲತೇಶ್ ಬಡಿಗೇರ,
ದಿನಾಂಕ 20 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ದೇವಾನಂದ್ ವರಪ್ರಸಾದ್ ಮತ್ತು ನಿರಂತರ ಗೆಳೆಯರಿಂದ ಜನಪದ ಮತ್ತು ತತ್ವಪದ ಗಾಯನ, ಸಭಾ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಡಿ. ವಿಜಯಲಕ್ಷ್ಮಿ, ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ “ನಮ್ಮ ಊರಿನ ರಸಿಕರು’ ಮತ್ತು ಇತರ ಕೃತಿಗಳ ಆಧಾರಿತ ನಾಟಕ ‘ಗೊರೂರು’ ಪ್ರಸ್ತುತಿ : ನಿರಂತರ ರಂಗ ತಂಡ ಮೈಸೂರು, ಸಂಗೀತ : ದಿಗ್ವಿಜಯ ಹೆಗ್ಗೋಡು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ : ಮಂಜುನಾಥ್ ಎಲ್. ಬಡಿಗೇರ,
ದಿನಾಂಕ 21 ಡಿಸೆಂಬರ್ 2025ರಂದು ಸಂಜೆ ಗಂಟೆ 5-30ಕ್ಕೆ ಕಡೂರು ನವೀನ್ ಕುಮಾರ್ ಮತ್ತು ತಂಡದಿಂದ ವೀರಗಾಸೆ, ಸಂಜೆ ಗಂಟೆ 6-15ಕ್ಕೆ ಸಮಾರೋಪ ಸಮಾರಂಭದಲ್ಲಿ ನಮ್ಮೊಂದಿಗೆ ಮೈಸೂರು ಜಿಲ್ಲೆ ಮಾನ್ಯ ಜಿಲ್ಲಾಧಿಕಾರಿಗಳಾದ ಜಿ. ಲಕ್ಷಿಕಾಂತ ರೆಡ್ಡಿ ಐ.ಎ.ಎಸ್., ಹಿರಿಯ ರಂಗ ನಿರ್ದೇಶಕರಾದ ಚಿದಂಬರರಾವ್ ಜಂಬೆ, ಸಂಸ್ಕೃತಿ ಚಿಂತಕರಾದ ದೇವನೂರ ಬಸವರಾಜು, ನಿರಂತರದ ಸುಗುಣ ಎಂ.ಎಂ. ಭಾಗವಹಿಸಲಿದ್ದಾರೆ. ಸಂಜೆ ಗಂಟೆ 7-00ಕ್ಕೆ ದಾರಿಯೋ ಫೋ ಅವರ ‘ಕಾಂಟ್ ಪೇ ವೊಂಟ್ ಪೇ’ ಆಧಾರಿತ ನಾಟಕ ‘ಕೊಡಲ್ಲ ಅಂದ್ರೆ ಕೊಡಲ್ಲ’ ಪ್ರಸ್ತುತಿ : ನಿರ್ದಿಂಗತ ಶ್ರೀರಂಗಪಟ್ಟಣ, ಸಂಗೀತ : ಅನುಷ್ ಶೆಟ್ಟಿ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ : ಶಕೀಲ್ ಅಹ್ಮದ್.

ನಿರಂತರ, ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳೊಟ್ಟಿಗೆ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಮನುಷ್ಯನ ಇರುವಿಕೆಯ ಅನೇಕ ರಂಗಗಳು ಜಡತ್ವದ ಮೋರೆ ಹೋಗುವ ಸಂದರ್ಭಗಳು ಎದುರಾದಗಲೆಲ್ಲ ರಂಗಭೂಮಿಯು ಮನುಷ್ಯನ ನೆರವಿಗೆ ಬಂದಿದೆ. ಈ ಕಾರ್ಯಗಳಿಗಾಗಿ ರಂಗಭೂಮಿಯನ್ನು ನಿರಂತರ ಪರಿಣಾಮಕಾರಿಯಾಗಿ ಬಳಸಿಕೊಂಡು ಬರುತ್ತಿದೆ. ಸ್ಪಷ್ಟವಾದ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಪರಿಸರ ಮುಂತಾದ ಎಲ್ಲಾ ರಂಗಗಳಲ್ಲೂ ಕೆಲಸ ಮಾಡಿರುವ ನಿರಂತರ ಫೌಂಡೇಶನ್, ಜನಪರ ಹೋರಾಟಗಳಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥ ಹಾಗೂ ಕರ್ನಾಟಕದಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ದೃಶ್ಯರೂಪಕದ 150ಕ್ಕೂ ಹೆಚ್ಚು ಪ್ರದರ್ಶನಗಳು ಸೇರಿದಂತೆ ಪ್ರತಿವರ್ಷ ನಿರಂತರ ರಂಗ ಉತ್ಸವವನ್ನು ಹಮ್ಮಿಕೊಂಡು ಬರುತ್ತಿದೆ. ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ, ಡಾ. ಚಂದ್ರಶೇಖರ ಕಂಬಾರರ “ಶಿವರಾತ್ರಿ” ನಾಟಕವನ್ನು ಮುಂಬೈನ ಮೈಸೂರು ಅಸೋಸಿಯೇಶನ್, ಭೂಪಾಲದ “ಭಾರತ ರಂಗ ಮಂಡಲ” ಹಾಗೂ ದೆಹಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ್ದ “15ನೇ ಭಾರತ ರಂಗ ಮಹೋತ್ಸವ”ದಲ್ಲಿ ಹಾಗೂ 2015ರ ಸಂಗೀತ ನಾಟಕ ಅಕಾಡೆಮಿಯ ಉತ್ಸವದಲ್ಲಿ ಪ್ರದರ್ಶನ ನೀಡಿದೆ. ಟಿ.ಕೆ. ದಯಾನಂದ್ ಪುಸ್ತಕ ಆಧಾರಿತ “ರಸ್ತೆ ನಕ್ಷತ್ರ” ನಾಟಕವನ್ನು ರಂಗಾಯಣ ಆಯೋಜಿಸಿದ್ದ “ಬಹುರೂಪಿ ಬಹುಭಾಷಾ ಅಂತ ರಾಷ್ಟ್ರೀಯ ರಂಗೋತ್ಸವ 2017”ರಲ್ಲಿ ಪ್ರರ್ದಶನ ನೀಡಿದೆ. ಜಯರಾಮ ರಾಯಪುರ ರಚನೆಯ ನಾಟಕ ‘ವಾರಸುದಾರಾ’ವನ್ನು ನಿರಂತರದ ಪ್ರಸಾದ್ ಕುಂದೂರುರವರ ನಿರ್ದೇಶನದಲ್ಲಿ ಅಭಿನಯಿಸಿದರೆ, ಸಹಜ ರಂಗ ಶಿಬಿರದ ಭಾಗವಾಗಿ 2022ರಲ್ಲಿ ಸಾಯೋ ಆಟ, 2023ರಲ್ಲಿ ‘ಗಾಂಧಿ ಆಲ್ಬಮ್’, 2024ರಲ್ಲಿ ‘ಕೃಷ್ಣೇಗೌಡರ ಆನೆ’ ಹಾಗೂ 2025ರಲ್ಲಿ ‘ಜನ ಗಣ ಮನ’ ನಾಟಕವನ್ನು ಶಿಬಿರಾರ್ಥಿಗಳಿಂದ ಹಲವು ಕಾಲೇಜಿನಲಿ ಪ್ರರ್ದಶಿಸಲ್ಪಟ್ಟಿದೆ. ನಿರಂತರ ಫೌಂಡೇಶನ್ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರ ಬಹುಮುಖ್ಯ ಕೃತಿಯಾಗಿರುವ ‘ನಮ್ಮ ಊರಿನ ರಸಿಕರು’ ಪುಸ್ತಕ ಆಧರಿಸಿದ ‘ಗೊರೂರು’ ನಾಟಕವನ್ನು ಇದುವರೆಗೂ ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಹಲವು ದಿಗ್ಗಜರ ಎದುರು ಪ್ರದರ್ಶಿಸಿ ಪ್ರಶಂಶೆಯನ್ನು ಗಳಿಸಿದೆ. ನಿರಂತರ ರಂಗತಂಡವು 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದೆ, ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಿದೆ ಮತ್ತು ರಂಗಭೂಮಿಯನ್ನು ಜನರಿಗೆ ತಲುಪಿಸಲು ಅಸಂಖ್ಯಾತ ವಿಚಾರ ಸಂಕೀರ್ಣಗಳು, ಕಾರ್ಯಾಗಾರಗಳು ಮತ್ತು ಶಿಬಿರಗಳನ್ನು ನಡೆಸಿದೆ
ನಿರಂತರ ರಂಗ ಉತ್ಸವ – 2025 ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ಸಂಸ್ಕೃತಿ ಸಚಿವಾಲಯ ನವದೆಹಲಿ ಇವರ ಸಹಯೋಗದಲ್ಲಿ, ನಿರಂತರ ಫೌಂಡೇಶನ್ ಮೈಸೂರು ಆಯೋಜಿಸಿರುವ ನಿರಂತರ ರಂಗ ಉತ್ಸವ – 2025ರ ಡಿಸೆಂಬರ್ 17ರಿಂದ 21ರವರಗೆ, ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ನಡಯಲಿದೆ. ರಂಗಭೂಮಿಯನ್ನು ಹಲವು ಆಯಾಮಗಳಲ್ಲಿ, ಸ್ತರಗಳಲ್ಲಿ ಅನ್ವಯಿಸುತ್ತಾ, ನಿತ್ಯಹರಿದ್ವರ್ಣದಂತೆ ಸದಾ ಹಸಿರಾಗಿರಿಸುವ ಪ್ರಯತ್ನ ಮಾಡುತ್ತಿರುವ ನಿರಂತರ ಕಳೆದ 25 ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ-ರಂಗ ತರಬೇತಿ ಶಿಬಿರ’, ವರ್ಷಾಂತ್ಯದಲ್ಲಿ ‘ನಿರಂತರ ರಂಗೋತ್ಸವ’, ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ತಯಾರಿಕೆ, ಪ್ರಕಾಶನ, ಹೊಸ ರಂಗಪ್ರಯೋಗಗಳು ಹಾಗೂ ಪ್ರದರ್ಶನ, ಕಾವ್ಯಕಮ್ಮಟ, ಮಕ್ಕಳ ಶಿಬಿರ, ಸಂವಾದ, ಜಾಥಗಳು, ಖಾದಿ ಮಳಿಗೆ, ಸ್ತಬ್ಧಚಿತ್ರ ನಿರ್ಮಾಣ, ವಸ್ತುಪ್ರದರ್ಶನ ಹೀಗೆ ಹತ್ತು ಹಲವು ಕೆಲಸಗಳನ್ನು ಯುವ ಮನಸ್ಸುಗಳೊಟ್ಟಿಗೆ ಸೇರಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ರಂಗಭೂಮಿಯನ್ನು ಮಾದ್ಯಮವನ್ನಾಗಿಸಿಕೊಂಡು ನಿರಂತರ ಕೆಲಸ ಮಾಡುತ್ತಿದೆ. ಮುಂದೆಯೂ ಮಾಡುತ್ತದೆ. ನಾಡಿನ ರಂಗಭೂಮಿಗೆ ಪ್ರಮುಖ ಕೊಡುಗೆ ನೀಡುತ್ತಿರುವ ನಿರಂತರ ಫೌಂಡೇಶನ್, ಮೈಸೂರು. ನೂರಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ರಂಗ ಉತ್ಸವಗಳನ್ನ ಯಶಸ್ವಿಯಾಗಿ ಮಾಡಿ ಪ್ರಸ್ತುತ 17ನೇ ವರ್ಷದ ಉತ್ಸವದ ಹೊಸ್ತಿಲಿಗೆ ಬಂದಿದ್ದೇವೆ. ಬದುಕು ಕಲೆಯೂ ಹೌದು, ವಿಜ್ಞಾನವೂ ಹೌದು. ಹಾಗೆಯೇ ರಂಗಭೂಮಿಯೂ ಕೂಡ. ‘ರಂಗಭೂಮಿ’ ಈ ರೂಪದಲ್ಲಿ ಅಲ್ಲದಿದ್ದರೂ ನೇರವಾಗಿ ಮನುಷ್ಯನ ನಾಗರೀಕತೆಯ ಆರಂಭದ ಕೇಂದ್ರಬಿಂದುವೆಂದೇ ಹೇಳಬಹುದು. ಚಿತ್ರಕಲೆ, ಕುಣಿತ, ಹಾಡು ಎಲ್ಲವೂ ಮನುಷ್ಯ ಪೂರ್ವದ್ದು. ನಂತರದಲ್ಲಿ ಇವು ಒಂದು ಕಲಾ ಪ್ರಕಾರವಾಗಿ ಉಳಿದುಕೊಂಡವು. ಆದರೆ ಇವೆಲ್ಲದರ ಕ್ರೂಢಿಕೃತ ರೂಪವೊಂದು ರಂಗಭೂಮಿಯಾಗಿ ಬೆಳೆದು ಕಲೆಯ ಆಚೆಗೆ ತನ್ನ ಕಾರ್ಯವನ್ನು ವಿಸ್ತರಿಸಿಕೊಂಡಿದೆ. ಇಂದಿನ ಪರಿಸ್ಥಿತಿಯಲ್ಲಿ ಕಲೆಯ ಅಥವಾ ಪ್ರದರ್ಶನ ಕಲೆಯ ವಿಸ್ತ್ರತವಷ್ಟೇ ಅಲ್ಲದೆ, ಜಾಗೃತಿಗಾಗಿ ರಂಗಭೂಮಿ, ಮಾಹಿತಿಗಾಗಿ ರಂಗಭೂಮಿ, ಸಾಮರಸ್ಯಕ್ಕಾಗಿ ರಂಗಭೂಮಿ, ಸಮಗ್ರತೆಗಾಗಿ ರಂಗಭೂಮಿ, ಕೊನೆಯದಾಗಿ ಮನುಷ್ಯನ ಉಳಿವಿಗಾಗಿ ರಂಗಭೂಮಿ ಎಂದರೂ ತಪ್ಪಾಗಲಾರದು. ಸಮಾಜವನ್ನು ಎಚ್ಚರಿಸುವ ಮನುಷ್ಯನ ಸರ್ವತೋಮುಖ ಪ್ರಕ್ರಿಯೆಗಳಲ್ಲಿ ರಂಗಭೂಮಿ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಕಾಣಬಹುದು.
