ಬೆಂಗಳೂರು : ಹೊಸವರ್ಷದ ಹೊಸ್ತಿಲಲ್ಲಿ ನಾದ-ನೃತ್ಯಗಳ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಂಜಿಸಲಿರುವ ‘ಸಂಗೀತ ಸಂಭ್ರಮ’ದ ವರ್ಣರಂಜಿತ ಕಾರ್ಯಕ್ರಮಗಳು ಬೆಂಗಳೂರಿನ ಜನತೆಗೆ ಚಿರಪರಿಚಿತ. ಮನಕಾನಂದ ನೀಡುವ ಹೊಸ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ‘ಸಂಗೀತ ಸಂಭ್ರಮ’ ಸಂಸ್ಥೆಯ ನೇತೃತ್ವ ವಹಿಸಿರುವವರು ಪ್ರಖ್ಯಾತ ಸಂಗೀತ ವಿದುಷಿ ಡಾ. ಪುಸ್ತಕಂ ರಮಾ. ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಕರ್ನಾಟಕ ಕಲಾಶ್ರೀ ಡಾ. ರಮಾ ಸ್ಥಾಪಿಸಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ‘ಸಂಗೀತ ಸಂಭ್ರಮ’ ಸಂಸ್ಥೆಯು ಸಾರ್ಥಕ ಮೂರುದಶಕಗಳನ್ನು ಮೀರಿ ಕ್ರಮಿಸಿದೆ. ಕಳೆದ ಹದಿನೈದು ವರ್ಷಗಳಿಂದ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೆ ನಿರಂತರವಾಗಿ ವೇದಿಕೆಯನ್ನು ಒದಗಿಸುತ್ತ ಬಂದಿರುವುದು ಸಂಗೀತ ಕಲಾವಿದೆ ರಮಾ ಅವರ ಅಸ್ಮಿತೆ. ಪ್ರತಿವರ್ಷ ತಪ್ಪದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ‘ನಿರಂತರಂ’ ಸಂಗೀತ ಮತ್ತು ನೃತ್ಯೋತ್ಸವವು ದಿನೇ ದಿನೇ ಜನಪ್ರಿಯತೆಯನ್ನು ಪಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ಜನವರಿಯ ಮೊದಲ ವಾರದಲ್ಲಿ ದಿನಾಂಕ 02 ಜನವರಿ 2024ರಿಂದ 05 ಜನವರಿ 2024ರವರೆಗೆ ನಾಲ್ಕು ದಿನಗಳ ವಿಶಿಷ್ಟ ಕಾರ್ಯಕ್ರಮಗಳನ್ನು ಬೆಂಗಳೂರಿನ ಮಲ್ಲೇಶ್ವರ ಸೇವಾಸದನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 02 ಜನವರಿ 2024ರ ಗುರುವಾರ ಸಂಜೆ 5-00 ಗಂಟೆಗೆ ಉದ್ಘಾಟನೆ ಪೋಲಿಸ್ ಅಧಿಕಾರಿ, ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಬಿ.ಕೆ. ಶಿವರಾಂ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭಾ ಧನಂಜಯ. ಅನಂತರ ಸಂಗೀತ ಸಂಭ್ರಮದ ಶಿಷ್ಯರಿಂದ ಭಕ್ತಿ ಗೀತೆಗಳು, ಮಾಸ್ಟರ್ ಜಿ. ಶ್ರೀಕಿರಣ್ ಮತ್ತು ಜಿ. ಶ್ರೀನಂದನ್ ಇವರಿಂದ ದ್ವಂದ್ವ ಗಾಯನ, ವಿ. ಅಂಜಲಿ ಶ್ರೀರಾಮ್ ಇವರಿಂದ ಗಾಯನ, ನಾಟ್ಯಾಲಯ ಸ್ಕೂಲ್ ಆಫ್ ಡ್ಯಾನ್ಸ್ ಇದರ ವಿ. ಯೋಗೇಶ್ ಕುಮಾರ್ ಮತ್ತು ವಿ. ಸ್ನೇಹಾ ನಾರಾಯಣ್ ಇವರಿಂದ ‘ನೃತ್ಯ ಪ್ರವೇಶಂ’ ಹಾಗೂ ಶ್ರೀ ಲಲಿತಾ ಕಲಾನಿಕೇತನ ಪ್ರಸ್ತುತಪಡಿಸುವ ಭರತನಾಟ್ಯ ಕಾರ್ಯಕ್ರಮ.
ದಿನಾಂಕ 03 ಜನವರಿ 2024ರ ಶುಕ್ರವಾರ ಸಂಜೆ 5-00 ಗಂಟೆಗೆ ಸಂಗೀತ ಸಂಭ್ರಮದ ಶಿಷ್ಯರು ಹಾಗೂ ಪೂರ್ವೀ ಸಂಗೀತ ಅಕಾಡೆಮಿಯವರಿಂದ ಭಕ್ತಿ ಗೀತೆಗಳು, ವಿ. ಲಾವಣ್ಯ ಕೃಷ್ಣಮೂರ್ತಿಯವರಿಂದ ಗಾಯನ, ಅಮೇರಿಕಾದ ಢಲ್ಲಾಸ್ ನ ಶಶಾಂಕ್ ಈಶ್ವರ, ಆಸ್ಟಿನ್ ನ ಅಕ್ಷೈನೇನಿ ಕಮ್ಮ ಮತ್ತು ಚಿಕಾಗೋನ ಅದಿತಿ ರಾಮ್ ಇವರಿಂದ ಭರತನಾಟ್ಯ ಕಾರ್ಯಕ್ರಮ. ಮುಖ್ಯ ಅತಿಥಿಗಳು ಖ್ಯಾತ ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಮತ್ತು ಅನನ್ಯ ಸಂಸ್ಥೆಯ ಶ್ರೀ ಆರ್.ವಿ. ರಾಘವೇಂದ್ರ.
ದಿನಾಂಕ 04 ಜನವರಿ 2024ರ ಶನಿವಾರ ಸಂಜೆ 5-00 ಗಂಟೆಗೆ ಕು. ಸ್ವರ ಕೃಷ್ಣರಾವ್, ಅಕ್ಷ್ಯ ಶ್ರೀವತ್ಸನ್, ರವಳಿ ಮೈಲವರಪು ಮತ್ತು ಸ್ನೇಹ ಭಾಗವತ್ ಇವರಿಂದ ಭರತನಾಟ್ಯ. ಗುರು ಕೌಸಲ್ಯ ನಿವಾಸ್ ಮತ್ತು ತಂಡದವರಿಂದ ‘ರಾಮಪ್ರಿಯ ತುಳಸೀದಾಸ್’ ನೃತ್ಯರೂಪಕ. 6-00 ಗಂಟೆಗೆ ‘ಎಂದರೋ ಮಹಾನುಭಾವುಲು’ ವಿಶ್ವ ವಾಗ್ಗೇಯಕಾರರಿಗೆ ಅರ್ಪಣೆಯ ವಿಶಿಷ್ಟ ಸಂಗೀತ ಕಾರ್ಯಕ್ರಮ ‘ವೇಣುವಾದನ’. ಇದರ ಪರಿಕಲ್ಪನೆ ರಘುನಂದನ್ ರಾಮಕೃಷ್ಣ ಮತ್ತು ತಂಡ.
ದಿನಾಂಕ 05 ಜನವರಿ 2024ರ ಭಾನುವಾರ ಸಂಜೆ 5-30 ಗಂಟೆಗೆ ‘ನಾದ ಚಂದ್ರಿಕಾ’ ವಿದುಷಿ ಆರ್. ಚಂದ್ರಿಕಾಗೆ ಅರ್ಪಣೆ. ‘ಸಂಭ್ರಮ ಪುರಸ್ಕಾರ’, ಪ್ರಶಸ್ತಿ ಪುರಸ್ಕೃತರು : ಡಾ. ಲಲಿತಾ ಶ್ರೀನಿವಾಸನ್, ವಿದುಷಿ ಎಂ.ಎಸ್. ಶೀಲಾ, ಡಾ. ಟಿ.ಎಸ್. ಸತ್ಯವತಿ, ಡಾ. ಎಂ.ಕೆ. ಜಯಶ್ರೀ ಪ್ರಸಾದ್, ಡಾ. ಎಂ.ಆರ್.ವಿ. ಪ್ರಸಾದ್, ಡಾ. ಟಿ.ಎಸ್. ನಾಗಾಭರಣ, ಡಾ. ಸೂರ್ಯಪ್ರಸಾದ್, ವಿದ್ವಾನ್ ಬಿ.ಕೆ. ಅನಂತರಾಂ, ನಂದೀಶ್ ಎಸ್. ಮರಿಯಪ್ಪ, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ, ವಾಣಿ ಈಶ್ವರ, ಸುಧಾ ಶೇಖರ್ ದೇವುಲಪಲ್ಲಿ, ದೇವಿಕಾ ರಾವ್ ಮತ್ತು ನಾಗವೇಣಿ ರಂಗನ್. ಮುಖ್ಯ ಅತಿಥಿಗಳು : ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿ, ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್, ಈ ಟಿವಿಯ ಪವನ್ ಕುಮಾರ್ ಮಾನ್ವಿ ಮತ್ತು ಗುರು ಡಾ. ನಾಗಮಣಿ ಶ್ರೀನಾಥ್ ಮೈಸೂರು.
ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.