ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇದರ 133ನೇ ಸರಣಿ ಕಾರ್ಯಕ್ರಮ ‘ನೃತ್ಯಾಂತರಂಗ’ ಕಾರ್ಯಕ್ರಮ ದಿನಾಂಕ 29 ಜುಲೈ 2025 ರಂದು ಪುತ್ತೂರಿನ ಶಶಿಶಂಕರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದುಬೈಯ ಬಾಲಪ್ರತಿಭೆ ಕು. ನಿತಾರಾ ನಾಯರ್ ಇವರ ಭರತನಾಟ್ಯ ಕಾರ್ಯಕ್ರಮ ಪುತ್ತೂರಿನ ಜನರ ಮನಗೆದ್ದಿತು. ಭರತನಾಟ್ಯ ಕಾರ್ಯಕ್ರಮದುದ್ದಕ್ಕೂ ತನ್ನ ಹಿತಮಿತವಾದ ಸಹಜ ಅಭಿನಯ, ಕರಾರುವಕ್ಕಾದ ಅಡವು ಹಾಗೂ ತನ್ನ ಮಾಧುರ್ಯಭರಿತ ನಿರೂಪಣೆಯಿಂದ ಸೇರಿದ ಸಭಿಕರ ಮನಗೆದ್ದ ನಿತಾರಾ, ತನ್ನ ನೃತ್ಯ ಜೀವನದ ಅನುಭವಗಳನ್ನು ಹಂಚಿಕೊಂಡರು. ಅಭ್ಯಾಗತರಾದ ಎಸ್. ಡಿ. ಪಿ. ರೆಮೆಡೀಸ್ ಇದರ ಸಹ ಪಾಲುದಾರರಾದ ಶ್ರೀಮತಿ ರೂಪಲೇಖಾ ಇವರು ಕಲಾವಿದೆ ನಿತಾರಾಳ ಶ್ರದ್ಧೆ, ಪರಿಶ್ರಮ ಹಾಗೂ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಇವರ ಕಲಾಪರಿಶ್ರಮದ ಬಗ್ಗೆ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು.
ಊತುಕ್ಕಾಡು ವೆಂಕಟಸುಬ್ಬ ಅಯ್ಯರ್ ರಚನೆಯ, ಜಯಂತಶ್ರೀ ರಾಗ ಹಾಗೂ ಆದಿತಾಳದಲ್ಲಿರುವ ಕೃಷ್ಣ ಕೃತಿಯೊಂದಿಗೆ ತನ್ನ ನೃತ್ಯ ಪ್ರಸ್ತುತಿಯನ್ನು ಪ್ರಾರಂಭಿಸಿದ ನಿತಾರಾ ಮುಂದೆ ಸುಮಾರು 30 ನಿಮಿಷಗಳ ಕಾಲ ರಾಗಮಾಲಿಕೆ, ಆದಿತಾಳದಲ್ಲಿರುವ ದಶಾವತಾರ ಕೃತಿಯನ್ನು ಪ್ರಸ್ತುತಪಡಿಸಿ, ರಾಗ – ಮಿಶ್ರ ಕಾಂಭೋಜಿ ಹಾಗೂ ತ್ರಿಶ್ರನಡೆ ಆದಿತಾಳದಲ್ಲಿರುವ ಮಲಯಾಳಂ ಪದಂ ಕೃತಿ ಮೂಲಕ ತನ್ನ ನೃತ್ಯ ಪ್ರಸ್ತುತಿ ಸಮಾಪನಗೊಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶೌರೀಕೃಷ್ಣ ಶಂಖನಾದ ಮೊಳಗಿಸಿ, ವಿದುಷಿ ಪ್ರೀತಿಕಲಾ ಪ್ರಾರ್ಥನೆಗೈದು, ಕು. ಪೂರ್ವಿ ಬಿ. ಸಿ. ನಿರೂಪಣೆಗೈದರು.