ಅದೊಂದು ಅನಿರ್ವಚನೀಯ ವೈಭವಪೂರ್ಣ ಕಲಾತ್ಮಕ ರಂಗಸಜ್ಜಿಕೆ. ಗಂಧರ್ವ ಲೋಕವೇ ಧರೆಗಿಳಿದಂಥ ಕುಸುರಿಗೆಲಸದ ದ್ವಾರಗಳು, ಮಂಗಳ ಕಲಶಗಳು, ತೂಗುದೀಪಗಳ ಗೊಂಚಲು. ಪುಷ್ಪಾಲಂಕಾರಗೊಂಡ ಕಣ್ಮನ ಸೂರೆಗೊಂಡ ಭವ್ಯವಾದ ವಾತಾವರಣ. ದೇವಲೋಕದ ಚೆಲುವ ನರ್ತಕಿಯ ನಾಟ್ಯವಿಲಾಸಕ್ಕೆ ಹೇಳಿಮಾಡಿಸಿದಂಥ ವೇದಿಕೆಯ ಮೇಲೆ ಶಿಲಾಬಾಲಿಕೆಯಂಥ ಮಾಟವಾದ ಅಂಗಸೌಷ್ಟವವುಳ್ಳ ಸುಂದರ ಕಲಾವಿದೆ ನಿತ್ಯಾ ರಮೇಶ್ ದೈವೀಕವಾಗಿ ನರ್ತಿಸುತ್ತಿದ್ದಳು. ಅಂದವಳ ಮೊದಲ ಹೆಜ್ಜೆ-ಗೆಜ್ಜೆಗಳ ಸಂಭ್ರಮದ ದಿನ. ಗುರು ಮಂಜುಳಾ ಪರಮೇಶ್ ಬಳಿ ನುರಿತ ನಾಟ್ಯ ತರಬೇತಿ ಪಡೆದ ಅವಳು ಇಡೀ ರಂಗವನ್ನು ಆಕ್ರಮಿಸಿಕೊಂಡು ಲೀಲಾಜಾಲವಾಗಿ ಚಲಿಸುತ್ತ ತನ್ನ ಮನಮೋಹಕ ನೃತ್ಯಾಭಿನಯದ ಚೆಲುವನ್ನು ಚೆಲ್ಲಿದಳು.
ಅದು ನಿತ್ಯಾಳ ‘ರಂಗಪ್ರವೇಶ’ವೆನಿಸಲಿಲ್ಲ. ನಿರ್ಭಿಡೆಯಾಗಿ, ಮೈಮರೆತು ದೈವಾರಾಧನೆಯಲ್ಲಿ ತೊಡಗಿದ ನಾಟ್ಯ ಸೇವೆ ಅದಾಗಿತ್ತು. ಆಕೆಯ ವೇಷ-ಭೂಷಣಗಳ ಸೊಗಸು, ವಿಶೇಷಾಲಂಕಾರ-ಅಂದದ ಪ್ರಸಾಧನ ನೋಡುಗರನ್ನು ಚುಂಬಕದಂತೆ ಸೆಳೆದಿತ್ತು. ಮಂಟಪದಲ್ಲಿ ದೇವಿಯ ಭಂಗಿಯಲ್ಲಿ ವಿರಾಜಮಾನಳಾಗಿದ್ದ ನಿತ್ಯಾ, ಬೆಳಕಿನ ವಿಶೇಷ ವಿನ್ಯಾಸದ ಬೆಳ್ಳಿಕಿರಣಗಳ ಮಧ್ಯೆ ರಜತ ಪುತ್ಥಳಿಯಂತೆ ಕಂಗೊಳಿಸುತ್ತಿದ್ದಳು.
ಸಾಂಪ್ರದಾಯಕ ‘ಪುಷ್ಪಾಂಜಲಿ’ಯಿಂದ ನರ್ತನ ಶುಭಾರಂಭವಾಯಿತು. ‘ಯಾಕುಂದೆಂದು ಹಾರ ಧವಳ…’ ಯಶೋ ಸರಸ್ವತಿ, ಲಕ್ಷ್ಮೀ, ಪಾರ್ವತಿ ತ್ರಿಮಾತೆಯರ ಸ್ತೋತ್ರದೊಂದಿಗೆ, ಗುರು ಬ್ರಹ್ಮನ ಕೀರ್ತನೆ ನಡೆದು, ಶಿವನ ಆನಂದ ನರ್ತನದ ಸೊಬಗನ್ನು ಬೀರಿದಳು. ನಗುಮುಖದ ಅಂಗಶುದ್ಧ ನೃತ್ಯ ‘ಶಂಕರ ಶ್ರೀಗಿರಿ ನಾದಪ್ರಭು…’ ವಿನ ಅರ್ಚನೆಯಲ್ಲಿ ಶಿವನ ಸಮಸ್ತ ಆಭರಣಗಳ ವೈಶಿಷ್ಟ್ಯ, ಅಪೂರ್ವ ಭಂಗಿಗಳ ಮಹೋನ್ನತಿಯನ್ನು ಅನಾವರಣಗೊಳಿಸಿದಳು ಕಲಾವಿದೆ. ಡಮರು ಹಸ್ತದಲ್ಲಿ ತೋರಿದ ಮುದ್ರೆಗಳು, ನೃತ್ತಗಳು, ರಂಗಾಕ್ರಮಣದ ವೈಖರಿ, ಆಕಾಶಚರಿಗಳ ಸ್ಫುಟತೆ ಮನೋಹರವಾಗಿದ್ದವು.
ಕಲಾವಿದೆ ನಿತ್ಯಾ ತನ್ನ ರಂಗಪ್ರವೇಶಕ್ಕೆ ಆಯ್ಕೆ ಮಾಡಿಕೊಂಡ ಕೃತಿಗಳು ವೈವಿಧ್ಯಪೂರ್ಣವಾಗಿದ್ದವು. ಹಾಗೆಯೇ ಅವುಗಳ ನೃತ್ಯ ಸಂಯೋಜನೆಗಳೂ ಸುಮನೋಹರವಾಗಿದ್ದು ಗುರು ಮಂಜುಳಾ ಪರಮೇಶ್ ಅವರ ಸೃಜನಾತ್ಮಕತೆಗೆ ಕನ್ನಡಿ ಹಿಡಿದಿದ್ದವು. ಮುಂದೆ- ರಾಮಾಯಣದ ವಿಭಿನ್ನ ಕಥೆಯನ್ನು ನಾಟಕೀಯ ಆಯಾಮದಲ್ಲಿ ಅನಾವರಣಗೊಳಿಸಿದ ‘ರಾಮಾಯ ತುಭ್ಯಂ ನಮಃ‘ -ನವಪ್ರಯೋಗವನ್ನು ಕಲಾವಿದೆ ತನ್ನ ಸೊಗಸಾದ ಅಭಿನಯ-ನೃತ್ತ ಮಾಧುರ್ಯದ ಸೊಗಡಿನಲ್ಲಿ ವರ್ಣರಂಜಿತವಾಗಿ ತೆರೆದಿಟ್ಟಳು. ‘ಜಯತು ಜಯತು ರಾಮಚಂದ್ರ…’ ಎಂಬ ಭಕ್ತಿಭಾವದಲ್ಲಿ ನಿತ್ಯಾ, ಶ್ರೀರಾಮನ ದಿವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುವ ರಾಮಾಯಣದ ಪ್ರಮುಖ ಘಟನೆಗಳನ್ನು ಚಿತ್ರಿಸುತ್ತ ಹೋದಳು. ಯಾಗ ರಕ್ಷಣೆಗಾಗಿ ವಿಶ್ವಾಮಿತ್ರ ಮಹರ್ಷಿ ರಾಮ-ಲಕ್ಷ್ಮಣರನ್ನು ಕರೆದೊಯ್ಯುವ ಮಾರ್ಗದಲ್ಲಿ ಶಾಪಗ್ರಸ್ತ ಅಹಲ್ಯೆಗೆ ವಿಮೋಚನೆ ದೊರೆಯುವ ಪುಲಕಿತ ಪ್ರಸಂಗ, ರಕ್ಕಸರ ಸಂಹಾರ, ಸೀತಾ ಸ್ವಯಂವರಕ್ಕೆ ಮುನ್ನ ಉದ್ಯಾನವನದಲ್ಲಿ ರಾಮ-ಸೀತೆಯರ ಭೇಟಿಯ ಅಪರೂಪದ ಪ್ರಸಂಗ- ಶಿವಧನಸ್ಸು ಛೇದನ, ಸೀತಾ ಕಲ್ಯಾಣ ಮುಂತಾದ ಪ್ರಸಂಗಗಳನ್ನು ಕಲಾವಿದೆ ತನ್ನ ಭಾವಪೂರ್ಣ ಅಭಿನಯದೊಂದಿಗೆ-ವಿವಿಧ ವಿನ್ಯಾಸದ ನೃತ್ತಗಳನ್ನು ಅಲೆ ಅಲೆಯಾಗಿ ಹರಿಸಿದಳು.
ಮಂಥರೆಯ ದುರ್ಬೋಧನೆಯಿಂದ ಕೈಕೇಯಿ ಹಠ ಹಿಡಿದು, ರಾಮನಿಗೆ ವನವಾಸ ಪ್ರಾಪ್ತಿ, ಶೂರ್ಪನಖ ಪ್ರಸಂಗ, ಮಾಯಾಜಿಂಕೆ- ಸೀತಾಪಹರಣ, ಅಶೋಕವನದಲ್ಲಿ ಸೀತೆಯನ್ನು ಆಂಜನೇಯ ಭೇಟಿ ಮಾಡುವುದು ಮುಂತಾದ ಅನೇಕ ಘಟನೆಗಳನ್ನು ನಿತ್ಯಾ ಹೃದ್ಯವಾಗಿ ಅಭಿನಯಿಸಿ ಕಲಾರಸಿಕರ ಮೆಚ್ಚುಗೆ ಪಡೆದಳು. ರಕ್ಕಸಿ ಶೂರ್ಪನಖಿ ರಾಮ-ಲಕ್ಷ್ಮಣರನ್ನು ಒಲಿಸಿಕೊಳ್ಳಲು ಸುಂದರಿಯ ರೂಪ ತೊಟ್ಟು ವಯ್ಯಾರದ ನಡೆಯಿಂದ ಅವರನ್ನು ಸಮೀಪಿಸುವ, ಮೂಗು-ಕಿವಿಗಳನ್ನು ಕೊಯ್ಯಿಸಿಕೊಂಡು ರೋಧಿಸುವ ದೃಶ್ಯ ಹಾಸ್ಯರಸದಿಂದ ರಂಜಿಸಿತು. ಕಷ್ಟತಮವಾದ ‘ವರ್ಣ’ಕ್ಕೆ ಸಮನಾಗಿದ್ದ ಈ ಕೃತಿ ಕಲಾವಿದೆಯ ನೃತ್ಯಾಭಿನಯದ ಸಾಮರ್ಥ್ಯಕ್ಕೆ ಸಾಕ್ಷೀಭೂತವಾಯಿತು.
ಪ್ರಸ್ತುತಿಯ ಪ್ರಮುಖ ಭಾಗ ‘ವರ್ಣ’-ಸುದೀರ್ಘ ಬಂಧ. ‘ಮಾತೆ ಮಲಯಧ್ವಜ ಪಾಂಡ್ಯ ಸಂಜಾತೆ’- ಮುತ್ತಯ್ಯ ಭಾಗವತರ್ ರಚಿಸಿದ ‘ಧರು ವರ್ಣ’ – ದೈವೀಕ ಆಯಾಮದಲ್ಲಿ ಪ್ರಸ್ತುತಗೊಂಡಿತು. ಗುರು ಮಂಜುಳಾ ಮತ್ತು ಗುರುಪುತ್ರಿ ಶಾಲಿನಿ ಅವರ ಸ್ಫುಟವಾದ ನಟುವಾಂಗದ ಲಯಕ್ಕೆ ಶಕ್ತಿಶಾಲಿಯಾದ ಹೆಜ್ಜೆ-ಗೆಜ್ಜೆಗಳ ಪರಿಪೂರ್ಣತೆಯಲ್ಲಿ ಕಲಾವಿದೆ ಚೈತನ್ಯಪೂರ್ಣವಾಗಿ ನರ್ತಿಸಿದಳು. ಆಕೆ ತೋರಿದ ವಿವಿಧ ವಿನ್ಯಾಸದ ಆಕರ್ಷಕ ಯೋಗದ ಭಂಗಿಗಳು ಅಚ್ಚರಿಯನ್ನುಂಟು ಮಾಡಿದವು. ಮಿಂಚಿನ ಸಂಚಾರದ ನೃತ್ತ ಹಾಗೂ ಪ್ರಬುದ್ಧ ಅಭಿನಯ ಎರಡರಲ್ಲೂ ನಿತ್ಯಾ, ಗುರುಗಳು ಕಾಳಜಿ-ಪರಿಶ್ರಮಗಳಿಂದ ನೀಡಿದ ತರಬೇತಿ ಹಾಗೂ ಅವರ ಪ್ರತಿಭೆಯ ಪ್ರತಿಬಿಂಬವಾಗಿದ್ದಳು.
ಮುಂದೆ ಪುರಂದರದಾಸರ ‘ಜಗನ್ಮೋಹನನೆ ಕೃಷ್ಣ’ನನ್ನು ಕಲಾವಿದೆ, ತನ್ನ ಭಕ್ತಿ ತಲ್ಲೀನತೆಯ ರಮ್ಯಾಭಿನಯದಿಂದ ಸಾಕ್ಷಾತ್ಕಾರಗೊಳಿಸಿದ್ದಳು. ಪಾತ್ರವೇ ತಾನಾಗಿ ಆಕೆ ಶ್ರೀಕೃಷ್ಣನ ಮೋಡಿಗೆ ಪರವಶಗೊಂಡಿದ್ದಳು. ಚೈತನ್ಯದಾಯಕ ‘ದಶಾವತಾರ’ಗಳ ನಿರೂಪಣೆ, ತಿಲ್ಲಾನ’ದಲ್ಲಿ ಅಭಿವ್ಯಕ್ತಗೊಂಡ ಅಂಗಶುದ್ಧ ಜತಿಗಳ ಝೇಂಕಾರ, ಭಂಗಿಗಳ ಭವ್ಯತೆ, ಸವಾಲ್-ಜವಾಬ್ ಮಾದರಿಯಲ್ಲಿದ್ದ ‘ಗೆತ್ತು’ ನಿರ್ವಹಣೆ, ಕಲಾವಿದೆಯ ಸಾಮರ್ಥ್ಯವನ್ನು ಸಶಕ್ತವಾಗಿ ಬಿಂಬಿಸಿತು.
ನಿತ್ಯಾಳ ಸೊಗಸಾದ ನೃತ್ಯಾರ್ಪಣೆಗೆ ಪ್ರಭಾವಳಿ ನೀಡಿದ ಗುರು ಮಂಜುಳಾ ಪರಮೇಶ್ ಗಾನ ಮಾಧುರ್ಯ, ಶಾಲಿನಿ ಪರಮೇಶ್ ನಟುವಾಂಗದ ಸಾಹಚರ್ಯ, ಮೃದಂಗ ವಾದನದಲ್ಲಿ ಶ್ರೀಹರಿ ರಂಗಸ್ವಾಮಿ, ಮುರಳೀಗಾನದಲ್ಲಿ ನರಸಿಂಹಮೂರ್ತಿ, ವಯೊಲಿನ್ ಮೋಡಿಯಲ್ಲಿ ಹೇಮಂತ್ ಕುಮಾರ್, ವೀಣಾ ನಾದದಲ್ಲಿ ಗೋಪಾಲ್ ಮತ್ತು ರಿದಂ ಪ್ಯಾಡ್ ನಲ್ಲಿ ಕಾರ್ತೀಕ್ ವೈಧಾತ್ರಿ ಅವರ ಸಹಕಾರ ಅನನ್ಯವಾಗಿತ್ತು. ಕಾರ್ಯಕ್ರಮದ ಸ್ಫುಟವಾದ ನಿರೂಪಣೆಯನ್ನು ಮಾಡಿದವರು ಸುಗ್ಗನಹಳ್ಳಿ ಷಡಕ್ಷರಿ.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ‘ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡ’ದ ಅಧ್ಯಕ್ಷೆ.