ಸ್ಟಾಕ್ ಹೋಂ : ಈ ಬಾರಿಯ ‘ಸಾಹಿತ್ಯದ ನೊಬೆಲ್’ ಪಾರಿತೋಷಕಕ್ಕೆ ಭಾಜನರಾಗಿರುವ ಕಾದಂಬರಿ, ಕವಿತೆ, ಪ್ರಬಂಧ, ಮಕ್ಕಳ ಸಾಹಿತ್ಯದಲ್ಲಿ ಶ್ರೇಷ್ಟ ಕೃತಿಗಳನ್ನು ಬರೆದಿರುವ ನಾರ್ವೆಯ ಖ್ಯಾತ ಲೇಖಕ ಜಾನ್ ಫೋಸ್ಸೆ ಅವರು ಸೃಜನಶೀಲ ಲೇಖಕರೆನ್ನಿಸಿಕೊಂಡಿದ್ದಾರೆ. ಫೋಸ್ಸೆ ಬಳಸುವ ನ್ಯೂ ನಾರ್ವೆ ಭಾಷೆಯನ್ನು ದೇಶದ ಕೇವಲ ಶೇ.10 ಜನ ಮಾತ್ರ ಬಳಸುತ್ತಾರೆ. ಈ ಭಾಷೆಯನ್ನು 19ನೇ ಶತಮಾನದಲ್ಲಿ ಗ್ರಾಮೀಣ ಆಡುಭಾಷೆಯೊಂದಿಗೆ ರೂಪಿಸಲಾಗಿದೆ. ಅಲ್ಲಿ ಹೆಚ್ಚಾಗಿ ಮಾತನಾಡುವ ಡ್ಯಾನಿಶ್ ಭಾಷೆಗೆ ಪರ್ಯಾಯವಾಗಿ ಸ್ಥಳೀಯ ಭಾಷೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ನಾರ್ವೆಯ ಅಧಿಕೃತ ಭಾಷೆಯಾದ ‘ನಾರ್ವೇಜಿಯನ್ ನೈನೋರ್‌ಸ್ಟ್’ ನಲ್ಲಿ ಅವರು ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಾದೇಶಿಕ ಅಸ್ಮಿತೆ ಮತ್ತು ಭಾಷೆಯ ಜತೆ ಅವರು ಆಧುನಿಕ ಕಲಾತ್ಮಕ ತಂತ್ರಗಳನ್ನು ಬೆಸೆದಿರುವುದು ವಿಶೇಷ. ಖ್ಯಾತ ಸಾಹಿತಿಗಳಾದ ಸ್ಯಾಮ್ಯೂಯಲ್ ಬೆಕೆಟ್, ಥಾಮಸ್ ಬೆರ್ನಾರ್ಡ್ ಅವರನ್ನು ಫೋಸ್ಸೆ ಅವರ ಬರಹಗಳು ನೆನಪಿಸುತ್ತವೆ. ಹೊಸ ನಮೂನೆಯ ನಾಟಕಗಳು ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾದ ಗದ್ಯಕ್ಕಾಗಿ ಜಾನ್ ಫೋಸ್ಸೆ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನೊಬೆಲ್ ಆಯ್ಕೆಯ ಸ್ವೀಡಿಶ್ ಅಕಾಡೆಮಿಯು ತಿಳಿಸಿದೆ. ಇಡೀ ವಿಶ್ವದಲ್ಲಿ ವ್ಯಾಪಕವಾಗಿ ಪ್ರದರ್ಶನಗೊಂಡ ನಾಟಕಗಳ ಕರ್ತೃ ಫೋಸ್ಸೆಯಾದರೂ ಕಾದಂಬರಿ, ಪ್ರಬಂಧ, ಕವಿತೆಗಳಿಂದ ಅವರನ್ನು ಹೆಚ್ಚು ಗುರುತಿಸಲಾಗುತ್ತದೆ.
ಎರಡು ಡಜನ್‌ಗಿಂತಲೂ ಹೆಚ್ಚು ನಾಟಕಗಳನ್ನು ಫೋಸ್ಸೆ ಬರೆದಿದ್ದಾರೆ, ಅದಲ್ಲದೆ ಕಾದಂಬರಿ, ಪ್ರಬಂಧ ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ಅವರು ಕೈ ಆಡಿಸಿದ್ದಾರೆ, ಅವರ ಕೃತಿಗಳು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ನಾಟಕಗಳು 1000ಕ್ಕೂ ಹೆಚ್ಚು ನಿರ್ಮಾಣಗೊಂಡಿವೆ. ಸಾಮಯಿಕ ನಾಟಕರಂಗದಲ್ಲಿ ಅವರು ಅತ್ಯಂತ ಪ್ರಚೋದನಾತ್ಮಕ ಹರಿತ ಲೇಖನವುಳ್ಳವರು ಎಂದು ಫ್ರೆಂಚ್ ದೈನಿಕ ಲಾ ಮಾಂಡೆ ಬಣ್ಣಿಸಿದೆ. ಹೇಳಲಾಗದ ಸಂಗತಿಗಳಿಗೆ ಮಾತು ನೀಡಿದ ವ್ಯಕ್ತಿ ಎಂದು ನೊಬೆಲ್ ಫೌಂಡೇಷನ್ ಗುರುತಿಸಿದೆ. ಅವರ ಮೊದಲ ನಾಟಕದ ಇಂಗ್ಲಿಷ್ ಹೆಸರು ‘ಅಂಡ್ ವಿ ವಿಲ್ ಬಿ ನೆವರ್ ಪಾರ್ಟೆಡ್’ 1994ರಲ್ಲಿ ಪ್ರಕಟಗೊಂಡಿತು. ಅದಾದ ನಂತರ 40ಕ್ಕೂ ಹೆಚ್ಚು ನಾಟಕಗಳು ಅವರ ಲೇಖನಿಯಿಂದ ಹೊರಹೊಮ್ಮಿದೆ.