ಮಂಗಳೂರು : ‘ಬಹು ಓದು’ ಬಳಗ ಹಾಗೂ ‘ಆಕೃತಿ ಆಶಯ’ ಪಬ್ಲಿಕೇಶನ್ ಇದರ ಸಹಯೋಗದೊಂದಿಗೆ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 19 ಜನವರಿ 2025ರ ರವಿವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿರುವ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿಲೋಕಾರ್ಪಣೆಗೊಳಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಸಬಿಹಾ ಭೂಮಿಗೌಡ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡದ ಬಹುರೂಪಿ ಚಿಂತನೆಗಳನ್ನು ಒಂದೆಡೆ ಕಟ್ಟಿಕೊಡುವ ಕೃತಿಯೇ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’. 1995 ರಿಂದ 2023ರವರೆಗಿನ ಮೂರು ದಶಕಗಳ ಕಾಲದ ಈ ಭಾಗದ ಲೇಖಕ ಲೇಖಕಿಯರು, ಸಾಹಿತಿ, ಸಾಹಿತ್ಯ, ಸಂಸ್ಕೃತಿ ಮತ್ತು ಸ್ತ್ರೀವಾದಿ ತಾತ್ವಿಕತೆಯ ಬಗ್ಗೆ ಏನನ್ನು ಯೋಚನೆ ಮಾಡಿದ್ದಾರೆ, ಕಾಲ ಕಾಲಕ್ಕೆ ಅನುಗುಣವಾಗಿ ಅದನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದು ಈ ಪುಸ್ತಕದ ಓದಿನಿಂದ ತಿಳಿದುಕೊಳ್ಳಬಹುದು” ಎಂದು ಹೇಳಿದರು.
ಕೃತಿ ವಿಮರ್ಶೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ರಾಜಲಕ್ಷ್ಮೀ ಎನ್. ಕೆ. ಮಾತನಾಡಿ “ಈ ಕೃತಿಯನ್ನು ಮಾತು-ಮಂಥನ -ಚಿಂತನ ಈ ಮೂರು ಕ್ರಮದಲ್ಲಿ ವಿಮರ್ಶೆಗೆ ಒಳಪಡಿಸಬಹುದು. ಓದಿಸಿಕೊಂಡು ಹೋಗುವ ಲೇಖನಗಳು ‘ಮಾತು’, ಮನನ ಮಾಡಿಕೊಳ್ಳುವ ಲೇಖನಗಳು ‘ಮಂಥನ’ ಹಾಗೂ ಚಿಂತನೆಗೆ ಹಚ್ಚುವ ಲೇಖನಗಳು ‘ಚಿಂತನ’ ಎಂದು ವಿವರಿಸಿಕೊಳ್ಳಬಹುದು” ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ಸೋಮಣ್ಣ ಹೊಂಗಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಕೃಷ್ಣಮೂರ್ತಿ ಪಿ. ‘ಬಹು ಓದು’ ಬಳಗ ಹಾಗೂ ‘ಆಕೃತಿ ಆಶಯ’ ಪ್ರಕಾಶನದ ಕಾರ್ಯವನ್ನು ಶ್ಲಾ ಘಿಸಿದರು.
ಸಂಪಾದಕರಾದ ಡಾ. ಸತೀಶ್ ಚಿತ್ರಾಪು ಪ್ರಾಸ್ತಾವಿಕವಾಗಿ ಮಾತನಾಡಿ, ‘ಆಕೃತಿ ಆಶಯ’ ಪ್ರಕಾಶನದ ಶ್ರೀ ಕಲ್ಲೂರು ನಾಗೇಶ್ ಸ್ವಾಗತಿಸಿ, ಡಾ. ಆಶಾಲತಾ ಚೇವಾರು ನಿರೂಪಿಸಿ, ಇನ್ನೋರ್ವ ಸಂಪಾದಕ ಸೋಮಶೇಖರ್ ಹಾಸನಡ್ಕ ವಂದಿಸಿದರು.