10 ಏಪ್ರಿಲ್ 2023, ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವತಿಯಿಂದ ‘ನೂರಾರು ಲೇಖಕರ ನೂರಾರು ಕತೆಗಳು’ ಕಥಾ ಸಂಕಲನವನ್ನು ದಿನಾಂಕ 08-04-2023 ಶನಿವಾರದಂದು ಉಡುಪಿಯ ಪವನ್ ರೂಫ್ ಟಾಪ್ ಕಿದಿಯೂರು ಹೋಟೆಲ್ ನಲ್ಲಿ ಬಿಡುಗಡೆಗೊಂಡಿತು. ಪುಸ್ತಕ ಬಿಡುಗಡೆಗೊಳಿಸಿದ ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ)ರವರು “ಕತೆಗಳು ಸಂಕಷ್ಟ ಕಾಲದಲ್ಲಿ ಔಷಧಿಯಂತೆ ಸಾಂತ್ವನ ನೀಡುತ್ತವೆ. ಅಹಂಕಾರದಲ್ಲಿ ಕತೆ ಹುಟ್ಟುವುದಿಲ್ಲ. ಅನುನಯದಿಂದ ಕತೆಗಳನ್ನು ಬರೆಯಬೇಕಾಗುತ್ತದೆ. ಕತೆಗಳು ಮನುಷ್ಯನ ಅಂತರಂಗದ ಮಾತನ್ನು ಹೇಳುತ್ತವೆ. ಕಟ್ಟಿದ ಕತೆಗಳಿಗಿಂತ ಅಂತರಂಗದಲ್ಲಿ ಹುಟ್ಟಿದ ಕತೆಗಳೇ ಶ್ರೇಷ್ಠ” ಎಂದು ಹೇಳಿದರು.
ಪತ್ರಕರ್ತ ವಸಂತ ಗಿಳಿಯಾರ್ ಕಥಾಸಂಕಲನವನ್ನು ಪರಿಚಯಿಸಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಪ್ರೊ. ಶಂಕರ್ ವೇದಿಕೆಯಲ್ಲಿದ್ದರು.
ಸಂಕಲನದ ಸಂಪಾದಕರಾದ ನಾಗರಾಜ್ ಹೆಬ್ಬಾರ್ ಪ್ರಸಾವಿಕ ಮಾತುಗಳನ್ನಾಡಿದರು. ರಾಜೇಶ್ ಭಟ್ ಫಣಿಯಾಡಿ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.
117 ಕತೆಗಳ ಸಂಕಲನ : ಪ್ರತಿಷ್ಠಾನ ಕೊರೋನಾ ಕಾಲದಲ್ಲಿ ಲೇಖಕರಿಗೆ ಕತೆಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಸಣ್ಣ ಕತೆಗಳನ್ನು ಬರೆದು ಕಳುಹಿಸಲು ಆಹ್ವಾನಿಸಿತ್ತು. ಅದರಂತೆ 400ಕ್ಕೂ ಹೆಚ್ಚು ಮಂದಿ ಕತೆಗಳನ್ನು ಕಳುಹಿಸಿದ್ದರು. ಅವುಗಳಲ್ಲಿ 117 ಕತೆಗಳನ್ನು ಆಯ್ಕೆ ಮಾಡಿ ಈ ಸಂಕಲನವನ್ನು ಪ್ರಕಟಿಸಲಾಗಿದೆ.