ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಯೋಜಿಸಿ ಪ್ರಕಟಿಸಿದ “ನೂರಾರು ಕತೆಗಳು” ಕಥಾ ಸಂಕಲನದ ಕುರಿತು ಕನ್ನಡದ ಪ್ರಸಿದ್ಧ ಸಾಹಿತಿ,ವಿಮರ್ಶಕರಾದ
ಡಾ.ಪಾರ್ವತಿ ಜಿ.ಐತಾಳ್ ಬರೆದ ವಿಮರ್ಶೆ ಇಲ್ಲಿದೆ…
ಕೃತಿಯ ಹೆಸರು : ನೂರಾರು ಕತೆಗಳು
ಸಂಪಾದಕರು : ಮರವಂತೆ ನಾಗರಾಜ ಹೆಬ್ಬಾರ್, ಪೂರ್ಣಿಮಾ ಜನಾರ್ದನ್, ರಾಜೇಶ್ ಭಟ್ ಪಣಿಯಾಡಿ
ಪ್: ಎಸ್.ಎಲ್.ಎನ್. ಪಬ್ಲಿಕೇಷನ್ಸ್ ಬೆಂಗಳೂರು
ಪ್ರ.ವರ್ಷ : 2022
ಪುಟಗಳು : 260
ಬೆಲೆ : ರೂ. 270
ಉಡುಪಿಯ ಪ್ರತಿಷ್ಠಿತ ಸಾಂಸ್ಕ್ರತಿಕ ಸಂಘಟನೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಪ್ರಕಟಿಸಿ, ಇತ್ತೀಚೆಗೆ ಓದುಗರ ಕೈಸೇರಿದ ೧೧೭ ಮಿನಿ ಕಥೆಗಳ ಸಂಕಲನ ‘ನೂರಾರು ಕತೆಗಳು’. ಕೊರೋನಾ ಮಹಾಮಾರಿಯು ಮನುಷ್ಯ ಮನಸ್ಸುಗಳಿಗೆ ಮಂಕು ಬಡಿಸಿ, ಸಾವಿನ ಅಟ್ಟಹಾಸವು ಮಿತಿ ಮೀರಿ ಮನುಷ್ಯರನ್ನು ಕಂಗೆಡಿಸಿದ ಕಾಲದಲ್ಲಿ ಸಂಘಟನೆಯ ರೂವಾರಿಗಳು ಹಾಕಿಕೊಂಡ ಯೋಜನೆ ಇದು. ಹೊರಗೆಲ್ಲೂ ಸ್ವಚ್ಛಂದವಾಗಿ ಹೋಗಲಾರದೆ ಮನೆಗಳೊಳಗೆ ಬಂಧಿತರಾದ ಮಂದಿ ಒಂದಷ್ಟು ಕ್ರಿಯಾಶೀಲರಾಗಿ ಓದು ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸುವಂತಾಗಲಿ ಎಂಬ ಸದುದ್ದೇಶದಿಂದ ಹುಟ್ಟು ಹಾಕಿದ ಈ ಯೋಜನೆ ಅವರ ನಿರೀಕ್ಷೆಗೂ ಮೀರಿ ಫಲ ಕೊಟ್ಟಿದ್ದನ್ನು ಇಲ್ಲಿ ಕಾಣಬಹುದು. ‘ ನೂರು ಕತೆಗಳನ್ನು ಒಟ್ಟು ಮಾಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ಅಷ್ಟು ಕತೆಗಳು ಬಂದಾವೇ ಅನ್ನುವ ಆತಂಕ ಹಲವು ಕಾಲ ನಮ್ಮನ್ನು ಕಾಡಿತ್ತು. ಆದರೆ ಭರ್ಜರಿ ಐನೂರು ಕಥೆಗಳು ಬಂದು ಅವುಗಳಲ್ಲಿ ನೂರಾ ಹದಿನೇಳು ಕತೆಗಳನ್ನು ಕಷ್ಟಪಟ್ಟು ಆಯ್ಕೆ ಮಾಡಬೇಕಾಗಿ ಬಂತು ‘ ಎಂದಿದ್ದಾರೆ ಸಂಪಾದಕರು. ‘An idle mind is a devil’s workshop’ ಅನ್ನುವ ಮಾತನ್ನು ಕನ್ನಡದ ಸೃಜನಶೀಲ ಮನಸ್ಸುಗಳು ಸಂಪೂರ್ಣ ಸುಳ್ಳಾಗಿಸಿದ್ದು ನಾವು ಖುಷಿ ಪಡಬೇಕಾದ ವಿಚಾರ.
ಮೊದಲು ‘ಕೊರೋನಾ ಪೀಡನೆಯ ಕಾಲದಲ್ಲಿ ಅಸ್ತವ್ಯಸ್ತವಾದ ನಿಮ್ಮ ದೈನಂದಿನ ಬದುಕು, ನೀವು ಅನುಭವಿಸಿದ ಕಷ್ಟಗಳು, ನಿಮ್ಮ ಮಾನಸಿಕ ಹಿಂಸೆಗಳು, ಬುಡಮೇಲಾದ ಸಾಮಾಜಿಕ ಬದುಕುಗಳ ಕುರಿತು ಒಂದು ಪುಟದಷ್ಟು ಮಿನಿ ಕತೆ ಬರೆದು ಕಳುಹಿಸಿ ‘ ಎಂದು ಸಂಘಟಕರು ಸೂಚಿಸಿದ್ದರಾದರೂ ಇಲ್ಲಿರುವ ಎಲ್ಲಾ ಕತೆಗಳು ಕೊರೋನಾ ಕತೆಗಳಲ್ಲ. ಕೆಲವು ಕತೆಗಳು ಕೊರೋನಾ ಕಾಲದಲ್ಲಿ ಕೆಲಸ ಕಳೆದುಕೊಂಡು ಬಡತನದ ಕಷ್ಟವನ್ನು ಅನುಭವಿಸಿದ್ದು, ಮನುಷ್ಯ ಸಂಬಂಧಗಳ ಸ್ವಭಾವದಲ್ಲಿ ಇದ್ದಕ್ಕಿದ್ದಂತೆ ಆದ ಬದಲಾವಣೆ, ಆಸ್ಪತ್ರೆಗಳಲ್ಲಿ ಸಿಬಂದಿಗಳ ವರ್ತನೆ, ಜನಸೇವೆಯ ಹೆಸರಿನಲ್ಲಿ ಆಗುವ ಪ್ರಹಸನ, ಅಕಾಲ ಮರಣದಿಂದಾಗಿ ಬಂಧು ಬಳಗದವರನ್ನು ಕಳೆದುಕೊಂಡು ಪಡುವ ದುಃಖ, ಕೊರೋನಾ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರವು ವಿಧಿಸಿದ ನಿಯಮಗಳನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಉಂಟಾದ ಅನಾಹುತ ಮತ್ತು ಆ ಬಗ್ಗೆ ಪರಿತಾಪ, ಜೀವನ ನಿರ್ವಹಣೆಗೂ ಹಣವಿಲ್ಲದೆ ಪರದಾಡು ತ್ತಿರುವಾಗ ಅನಿರೀಕ್ಷಿತವಾಗಿ ಒದಗಿ ಬರುವ ಸಹಾಯ, ತಾನು ತೀರಾ ಅಸಹಾಯಕ ಸ್ಥಿತಿಯಲ್ಲಿದ್ದರೂ ಅನಾಥ ಮಕ್ಕಳ ಬಗ್ಗೆ ತೋರುವ ಮಾನವೀಯ ಕಾಳಜಿ, ಅಪಾಯದ ಕಾಲದಲ್ಲಿ ತಂದೆಯನ್ನು ನಿರ್ಲಕ್ಷಿಸುವ ಮಗಳು, ಬೇರೆ ಹೆಣ್ಣಿನ ಹಿಂದೆ ಹೋಗಿ ಹೆಂಡತಿಯನ್ನು ನಿರ್ಲಕ್ಷಿಸಿ ಕೊರೋನಾ ಬಂದಾಗ ಅವಳ ಸಹಾಯ ತೆಗೆದುಕೊಂಡು ಮತ್ತೆ ಅವಳನ್ನು ದೂರ ಮಾಡುವ ಹೃದಯಹೀನ ಗಂಡ – ಹೀಗೆ ನೇರವಾಗಿ ಕೊರೋನಾ ಸುತ್ತುಮುತ್ತವೇ ಘಟನೆ- ಸನ್ನಿವೇಶಗಳನ್ನು ಕಟ್ಟಿಕೊಂಡ ಕಥೆಗಳಿವೆ. ಅಪ್ಪನ ಮಿಸ್ಡ್ ಕಾಲ್, ವಿತರಣೆ, ಪಶ್ಚಾತ್ತಾಪ, ಬೆಳ್ಳಿಕಿರಣ, ಒಡನಾಡಿ, ಅನಾಥ ಮಗು, ಸ್ವಾಭಿಮಾನದ ದುಡಿಮೆ, ಸಣ್ಣ ಸ್ವಾರ್ಥ, ದೇವರ ಆಟ ಬಲ್ಲವರಾರು ಮೊದಲಾದ ಕಥೆಗಳು ಕೊರೋನಾ ಕಾರ್ಮೋಡದ ವಾತಾವರಣವನ್ನು ಸಮರ್ಥವಾಗಿ ಸೃಷ್ಟಿಸುತ್ತವೆ.
ಸಂಕಲನದಲ್ಲಿ ಹೆಚ್ಚಿನ ಕತೆಗಳು ಭಿನ್ನ ಕಥಾವಸ್ತುಗಳನ್ನು ಆಧರಿಸಿ ಇವೆ. ಆಧುನಿಕತೆಯ ಭರಾಟೆಯಲ್ಲಿ ಪಾರಂಪರಿಕ ವೃತ್ತಿಗಳನ್ನೂ ಕೃಷಿಯ ಬಗೆಗಿನಪ್ರೀತಿಯನ್ನೂ ಜನರು ಮರೆಯುತ್ತಿರುವ ದುರಂತ (ಬದುಕುವ ದಾರಿ), ಹಣದ ಹಿಂದೆಯೇ ಓಡುವ ವೈದ್ಯರುಗಳ ಮಧ್ಯೆ ಮೇಲು-ಕೀಳೆನ್ನುವ ಭೇದ ಭಾವವಿಲ್ಲದೆ ಮಾನವೀಯ ಕಾಳಜಿ ತೋರಿಸುವ ಡಾಕ್ಟರ್ (ಮುಟ್ಟಿಸಿಕೊಳ್ಳದವರು), ಎಂಥದೇ ಸಂದರ್ಭದಲ್ಲೂ ನಂಬಿಕೆಯನ್ನು ಕಳೆದುಕೊಳ್ಳದ ನಿಜ ಅರ್ಥದ ಗೆಳೆತನ (ಮುತ್ತು ಹೆಕ್ಕಿ ಕೊಡಲೇನೇ..) ವೃತ್ತಿಯ ಘನತೆಯ ಬಗ್ಗೆ ಹೆಮ್ಮೆ ಪಡುವ ಐಐಟಿ ಪ್ಲಂಬರ್, ಮನುಷ್ಯನಲ್ಲಿ ಅಪರೂಪವಾಗುತ್ತಿರುವ ಉಪಕಾರ ಸ್ಮರಣೆಯ ಗುಣ(ಕೃತಜ್ಞತೆ), ಅಪಾಯ ಮೇಲೆರಗಿದಾಗ ಅಹಂಕಾರದ ಗುಳ್ಳೆ ಒಡೆಯುವುದು(ಆ ಕರಾಳ ರಾತ್ರಿ), ವಿದ್ಯೆ ಬುದ್ಧಿ ಕಲಿಸಬೇಕಾದ ಗುರುವಿನ ನಿರ್ದಯ ವರ್ತನೆಯಿಂದ ನಲುಗುವ ಪುಟ್ಟ ಹುಡುಗಿ(ದೀಪಾವಳಿಯ ಕರಾಳ ರಾತ್ರಿ) -ಹೀಗೆ ಹೇಳುತ್ತ ಹೋಗುವುದಾದರೆ ಮನುಷ್ಯ ಸ್ವಭಾವದ ವಿವಿಧ ಮಗ್ಗುಲುಗಳನ್ನು ಪರಿಚಯಿಸುವ ಇಂತಹ ಇನ್ನಷ್ಟು ಹೃದಯಸ್ಪರ್ಶಿ ಕತೆಗಳು ಸಂಕಲನದಲ್ಲಿ ಧಾರಾಳ ಇವೆ.
ಹೆಣ್ಣಿನ ಶೋಷಣೆ, ಹೆಣ್ಣುತನ್ನ ಅಸ್ಮಿತೆಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಹೋರಾಟವಾಗಿಸಿಕೊಂಡ ಕಥೆಗಳೂ ಸಂಕಲನದಲ್ಲಿ ಪುಟ್ಟ ಜಾಗ ಪಡೆದುಕೊಂಡಿವೆ. ಹೊರನೋಟಕ್ಕೆ ಆದರ್ಶ ದಂಪತಿಗಳೆಂದು ಕಾಣುವ ಜೋಡಿಯಲ್ಲಿ ಗಂಡ ತನ್ನ ಮಾತೇ ನಡೆಯ ಬೇಕೆಂದು ಹಠಹಿಡಿದಾಗ ಹೆಂಡತಿ ಅನುಭವಿಸುವ ಕಷ್ಟದ ವಿಚಾರ ಹೊರಗಿನವರಿಗೆ ಗೊತ್ತಾಗುವುದು ಗಂಡ ಸತ್ತ ನಂತರ !(ಪಂಜರದ ಕದ ತೆರೆದಾಗ). ಹೆಣ್ಣು ಎಳೆಯ ಪ್ರಾಯದಲ್ಲೇ ವಿಧವೆಯಾದಾಗ ಲೋಕರೂಢಿಗೆ ವಿರುದ್ಧವಾಗಿ ಅತ್ತೆಯೇ ನಿಂತು ಸೊಸೆಗೆ ಇನ್ನೊಂದು ಮದುವೆ ಮಾಡಿಸುತ್ತಾಳೆ (ಅತ್ತೆ). ಗಂಡನ ದೌರ್ಜನ್ಯಗಳು ಮಿತಿಮೀರಿದಾಗ ಹೆಂಡತಿ ಆತ್ಮಹತ್ಯೆಗೆ ಶರಣಾಗುತ್ತಾಳೆ(ನೇಣಿಗೆ ಸೇರಿದ ಕನಸುಗಳು).ಹೆಣ್ಣುಮಗುವೆಂದು ಕಡೆಗಣಿಸಿದರೂ ಮುಂದೆ ಚೆನ್ನಾಗಿ ಓದಿ ಗಂಡು ಮಗುವಿಗಿಂತ ಹೆಚ್ಚು ಉನ್ನತ ಸ್ಥಾನಕ್ಕೆ ಹೋಗುತ್ತಾಳೆ.(ಕರ್ತವ್ಯದ ಬಹುಮಾನ).
ಓದುತ್ತ ಹೋದಂತೆ ಸಂಕಲನದ ಎಲ್ಲ ಕಥೆಗಳೂ ಒಂದಿಲ್ಲೊಂದು ಕಾರಣಕ್ಕೆ ಇಷ್ಟವಾಗುತ್ತವೆ. ಇಷ್ಟೊಂದು ಸಂಖ್ಯೆಯಲ್ಲಿ ಬರಹಗಾರರನ್ನು ಸಂಪರ್ಕಿಸಿ, ಸಂಕಟಕಾಲದಲ್ಲಿ ಸುಮ್ಮನೆ ಕುಳಿತ ಅವರೊಳಗಿನ ಸೃಜನಶೀಲತೆಯನ್ನು ಹೊಡೆದೆಬ್ಬಿಸಿ , ಅವರಿಂದ ಪುಟ್ಟ ಪುಟ್ಟ ಕಥೆಗಳನ್ನು ಬರೆಯಿಸಿ, ಸಂಗ್ರಹಿಸಿ, ಕರಡು ತಿದ್ದಿ, ಪುಸ್ತಕವನ್ನು ಮುದ್ದಾಗಿ ಮುದ್ರಿಸಿ, ಪ್ರಕಟಿಸಿದ್ದು ಸಂಪಾದಕ ಮಂಡಳಿಯ ಬಹು ದೊಡ್ಡ ಸಾಹಸ. ಅದಕ್ಕಾಗಿ ಸಂಪಾದಕತ್ರಯರಾದ ಮರವಂತೆ ನಾಗರಾಜ ಹೆಬ್ಬಾರ್, ಪೂರ್ಣಿಮಾ ಜನಾರ್ದನ್ ಮತ್ತು ರಾಜೇಶ ಭಟ್ ಪಣಿಯಾಡಿಯವರು ಓದುಗರ ಅಭಿನಂದನೆ ಮತ್ತು ಕೃತಜ್ಞತೆಗಳಿಗೆ ಅರ್ಹರು.
- ಡಾ. ಪಾರ್ವತಿ ಜಿ.ಐತಾಳ್, ಕುಂದಾಪುರ