ಬೆಂಗಳೂರು : ಗುರು ವಿದುಷಿ ಶ್ರೀಮತಿ ದೀಪ ಭಟ್ ಅವರ ನೃತ್ಯ ಸಂಸ್ಥೆ ನೃತ್ಯಕುಟೀರದ 19ನೇ ವಾರ್ಷಿಕೋತ್ಸವ ಅಂಗವಾಗಿ ‘ನೃತ್ಯ ಮಿಲನ’ ಕಾರ್ಯಕ್ರಮವು ದಿನಾಂಕ 30-07-2023ರಂದು ಅತ್ಯಂತ ರಮಣೀಯವಾಗಿ ನಗರದ ಪ್ರಸಿದ್ಧ ಸಭಾಭವನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಕಣ್ಮನ ಸೂರೆಗೊಳ್ಳುವಂತೆ ಮಾಡಿತು. ಪುಟಾಣಿ ಮಕ್ಕಳಿಂದ ಹಿಡಿದು ವಿದ್ವತ್ ವಿದ್ಯಾರ್ಥಿಗಳವರೆಗಿನ ಕಲಾವಿದರೆಲ್ಲ ಒಟ್ಟಾಗಿ ಸೇರಿ ಸಂಭ್ರಮದಿಂದ, ಅಚ್ಚುಕಟ್ಟಾಗಿ, ಲಯಬದ್ಧವಾಗಿ, ವೈವಿಧ್ಯಮಯ ನೃತ್ಯಗಳನ್ನು ಪ್ರದರ್ಶಿಸಿ ಕಿಕ್ಕಿರಿದು ಸೇರಿದ ಕಲಾ ರಸಿಕರ ಕರತಾಡನಕ್ಕೆ ಪಾತ್ರರಾದರು. ಪುಟ್ಟ ಮಕ್ಕಳ ‘ರಾಮ ಭಜನೆ’ ನೃತ್ಯಕ್ಕೆ ಮನಸೋತ ಪ್ರೇಕ್ಷಕರು ಸಹ ‘ರಾಮ ರಾಮ’ ಉದ್ಗಾರ ಹೇಳುತ್ತ ಮನಸೋತರು. ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಜಾನಕೀ ಕೌತ್ವಂ, ಸ್ವಾಗತಂ ಕೃಷ್ಣ, ರಾರ ವೇಣು, ಹರಿ ಕುಣಿದ, ಮಹಿಳಾ ಮಣಿಗಳಿಂದ ಸುಬ್ರಮಣ್ಯನ ಕುರಿತಾದ ಶಬ್ದಂ ಹಾಗೂ ಅಠಾಣರಾಗದಲ್ಲಿ ಹಾಗೂ ಆದಿತಾಳದಲ್ಲಿನ ಕೃಷ್ಣನ ಕುರಿತಾದ ವರ್ಣಂ ಅನ್ನು ವೈವಿಧ್ಯಮಯ ರೀತಿಯಲ್ಲಿ ಸಂಯೋಜಿಸಿ ಶಾಸ್ತ್ರಬದ್ಧವಾಗಿ ಪ್ರದರ್ಶಿಸಲಾಯಿತು.
ಗ್ರಾಮೀಣ ಪರಿಸರದ ‘ಕೋಳೂರ ಕೊಡಗೂಸು’ ಎಂಬ ನೃತ್ಯ ರೂಪಕವು ಶಿವಭಕ್ತಿಯ ಹಿರಿಮೆಯನ್ನು ಸಾರುತ್ತ ಸೊಗಸಾಗಿತ್ತು. ಸುಮಾರು 28 ವಿದ್ಯಾರ್ಥಿಗಳಿಂದ ಸ್ವಾತಿ ತಿರುನಾಳ್ ವಿರಚಿತ ‘ಭಾವಯಾಮಿ ರಘುರಾಮಂ’ ಕೃತಿಗೆ ಸಂಪೂರ್ಣ ರಾಮಾಯಣ ದೃಶ್ಯಗಳು ಕಲಾ ರಸಿಕರ ಮುಂದೆ ಅದ್ಭುತವಾಗಿ ಮೂಡಿಬಂದಿತು. ಮೂರು ಸಮೂಹ ಗುಂಪುಗಳಲ್ಲಿ ಕಲಾವಿದರು ವೈವಿಧ್ಯಮಯ ನಡೆ ಜತಿ ಹಾಗೂ ನೃತ್ಯ ಭಂಗಿಗಳಲ್ಲಿ ಸುಂದರ ವೇಷಭೂಷಣದಲ್ಲಿ ಕಲಾ ರಸಿಕರನ್ನು ರಂಜಿಸಿದರು. ವಿದ್ವತ್ ವಿದ್ಯಾರ್ಥಿಗಳಿಂದ ವಿದುಷಿ ದೀಪ ಭಟ್ ಇವರ ಮಾತೃಶ್ರೀಯವರಾದ ಶ್ರೀಮತಿ ಜಯಲಕ್ಷ್ಮಿ ಭಟ್ ಅವರು ರಚಿಸಿರುವ ‘ನವರಸ ಲಲಿತೆ’ ಎಂಬ ಕೃತಿಯಲ್ಲಿ ದೇವಿಯ ಕುರಿತಾದ ಪುರಾಣ ಕಥೆಗಳ ಮುಖೇನ ನೃತ್ಯದಲ್ಲಿಯ ನವರಸವನ್ನು ಪ್ರೇಕ್ಷಕರಿಗೆ ಉಣಬಡಿಸಲಾಯಿತು.
ಶಾಸ್ತ್ರೀಯ ನೃತ್ಯದ ಜೊತೆಗೆ ಪುಟ್ಟ ಮಕ್ಕಳಿಂದ ಶಾಸ್ತ್ರೀಯ ಸಂಗೀತ ಗಾಯನ, ಕಾವಡಿ ಚಿಂದು ಜಾನಪದ ನೃತ್ಯ, ದಾಂಡಿಯಾ ರಾಸ್ ಸಹ ಪ್ರೇಕ್ಷಕರಿಗೆ ಮುದ ನೀಡಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭರತನಾಟ್ಯ ಕಲಾವಿದೆ, ನಟಿ ಹಾಗೂ ನಿರೂಪಕಿ – ಇಂದಿನ ಜನಪ್ರಿಯ ಭಾಗ್ಯಲಕ್ಷ್ಮಿ ಧಾರವಾಹಿ ನಾಯಕಿಯಾದ ಶ್ರೀಮತಿ ಸುಷ್ಮಾ ಕೆ. ರಾವ್ ಹಾಗೂ ಭರತನಾಟ್ಯದ ಕಲಾವಿದರು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯದಲ್ಲಿ ‘ತಾಳಾವಧಾನ’ ಶೋಧಕರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಉಪಸ್ಥಿತರಿದ್ದು ನೃತ್ಯಕುಟೀರದ ವಾರ್ಷಿಕೋತ್ಸವದ ಹೆಚ್ಚಿನ ಸಂಭ್ರಮಕ್ಕೆ ಕಾರಣರಾದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ನಡೆಸುವ ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತದ ಕಿರಿಯ ಹಿರಿಯ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಸಹ ಆಯೋಜಿಸಲಾಗಿತ್ತು.