ಮೈಸೂರು : ಮಂಗಳೂರಿನ ‘ಭರತಾಂಜಲಿ’ ಪ್ರಸ್ತುತಪಡಿಸುವ ‘ನೃತ್ಯ ಲಾಲಿತ್ಯ’ ಭರತನಾಟ್ಯ ಕಾರ್ಯಕ್ರಮವು ಮೈಸೂರು ದಸರಾ ಉತ್ಸವದ ಅಂಗವಾಗಿ ದಿನಾಂಕ 21-10-2023ರಂದು ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಆವರಣದಲ್ಲಿ ನಡೆಯಲಿದೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆ ಹಾಗೂ ಗುರು ಶ್ರೀಧರ್ ಹೊಳ್ಳ ಇವರ ಸಲಹೆ ಮತ್ತು ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಭಾರತಾಂಜಲಿಯ ನಿರ್ದೇಶಕರ ಬಗ್ಗೆ :
ವಿದುಷಿ ಪ್ರತಿಮಾ ಶ್ರೀಧರ್ ಇವರು 6ನೇ ವಯಸ್ಸಿನ ಎಳವೆಯಲ್ಲಿ ಕದ್ರಿಯ ನೃತ್ಯಗುರು ಯು.ಎಸ್. ಕೃಷ್ಣರಾವ್ ಇವರಲ್ಲಿ ನೃತ್ಯಭ್ಯಾಸ ಮಾಡಿ ಮುಂದೆ ಕರ್ನಾಟಕ ಕಲಾಶ್ರೀ ಪುರಸ್ಕೃತೆ ಗುರು ವಿದುಷಿ ಶ್ರೀಮತಿ ಕಮಲಾ ಭಟ್ ಇವರಲ್ಲಿ 17 ವರ್ಷಗಳ ಸತತ ಅಧ್ಯಯನದ ನಡೆಸಿದರು. ಇದರ ಫಲವಾಗಿ ಪ್ರತಿಮಾ ಅವರಿಗೆ 1985-86ರ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂ ಕ್. 1990-91ರಲ್ಲಿ ಸೀನಿಯರ್ ವಿಭಾಗ ಮತ್ತು 1994-95ರಲ್ಲಿ ವಿದ್ವತ್ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಇವರ ಕಲಾ ಸಾಧನೆಗೆ ಹಿಡಿದ ಕನ್ನಡಿ. ಪತಿ ವಿದ್ವಾನ್ ಶ್ರೀಧರ ಹೊಳ್ಳ ಇವರ ಪ್ರೋತ್ಸಾಹ ಪ್ರತಿಮಾ ಅವರ ಕಲಾ ಜೀವನದ ಅಭಿವೃದ್ಧಿಗೆ ಕಾರಣವಾಯಿತು.
ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಗೋ ಸೇವಾ ಪುರಸ್ಕಾರ, ಸಾಧಕ ಪುರಸ್ಕಾರ, ನಾಟ್ಯರಾಣಿ ಪುರಸ್ಕಾರ, ನಾಟ್ಯ ಶಿಕ್ಷಣ ಪುರಸ್ಕಾರ, ನಾಟ್ಯ ಮಯೂರಿ ಪುರಸ್ಕಾರ, ಸಾಧಕ ಪುರಸ್ಕಾರ, ಕಲಾ ಸಿಂಧು ಪುರಸ್ಕಾರ, ಅಭಿನಯ ಚತುರೆ ಪುರಸ್ಕಾರ ಇತ್ಯಾದಿ ಪ್ರಶಸ್ತಿಗಳು ಇವರು ನೃತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ ಸಂದ ಗೌರವ.
ಭಾರತಾಂಜಲಿಯ ಬಗ್ಗೆ :
ನಾಟ್ಯ ದಂಪತಿಗಳಿಬ್ಬರೂ ಗುರುಗಳ ಮಾರ್ಗದರ್ಶನ ಹಾಗೂ ಶುಭಾಶೀರ್ವದದೊಂದಿಗೆ 1995ರಲ್ಲಿ ‘ಭಾರತಾಂಜಲಿ’ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರು ಪರಿಸರದ ವಿವಿಧೆಡೆಗಳಲ್ಲಿ ನೂರಾರು ಮಕ್ಕಳಿಗೆ ಕಳೆದ 28 ವರ್ಷಗಳಿಂದ ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ. ಶ್ರೀ ರಾಮಾಯ ತುಭ್ಯಂ ನಮಃ, ಕೃಷಂ ವಂದೇ ಜಗದ್ಗುರುಂ, ಶ್ರೀ ರಾಮ ಅವತರಣಂ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ ಇತ್ಯಾದಿ ಇವರು ಸಂಯೋಜಿಸಿದ ನೃತ್ಯ ಬಂಧಗಳು. ಸುಮಾರು 1500ಕ್ಕೂ ಮಿಕ್ಕಿ ಯಶಸ್ವೀ ಪ್ರದರ್ಶನ ಕಂಡ ‘ಪುಣ್ಯ ಕೋಟಿ’ ನೃತ್ಯ ರೂಪಕ ದಂಪತಿಗಳು ಶಾಸ್ತ್ರೀಯ ನೃತ್ಯಕ್ಕೆ ನೀಡಿದ ಪ್ರಾಮಾಣಿಕ ಸೇವೆಯ ಪ್ರತಿಫಲ.