ಮಂಗಳೂರು : ಶ್ರೀ ಶಾರದಾ ನಾಟ್ಯಾಲಯ ಹೊಸಬೆಟ್ಟು ಇದರ ರಜತ ಸಂಭ್ರಮದ ಪ್ರಯುಕ್ತ ‘ನೃತ್ಯ ಶರಧಿ’ ಸರಣಿ ಕಾರ್ಯಕ್ರಮವು ದಿನಾಂಕ 07-09-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೃತ್ಯ ನಿರ್ದೇಶಕರಾದ ನಾಟ್ಯ ವಿಶಾರದ ಶ್ರೀ ಯು.ಕೆ. ಪ್ರವೀಣ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು ಮತ್ತು ಈರ್ವರೂ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಪುಷ್ಪಾಂಜಲಿ, ಗಣಪತಿ ಸ್ತುತಿಯೊಂದಿಗೆ ಶುಭಾರಂಭಗೊಂಡ ಕಾರ್ಯಕ್ರಮ ನಾಟ್ಯದ ಅಧಿದೇವನಾದ ನಟರಾಜನಿಗೆ, ರಂಗ ದೇವತೆಗಳಿಗೆ, ದಿಕ್ಪಾಲಕರಿಗೆ ಹಾಗೂ ಗುರುಗಳಿಗೆ ನಮಿಸಿ ಕಾರ್ಯಕ್ರಮ ಮುಂದುವರಿಯಿತು. ಪುಟಾಣಿ ಮಕ್ಕಳು ಶ್ಯಾಮಲೆ ಮೀನಾಕ್ಷಿ ಅವರ ಹಾಡಿಗೆ ನರ್ತಿಸಿದರು. ನಟರಾಜ, ಸರಸ್ವತಿ, ಗುರು ಹಾಗೂ ಪ್ರೇಕ್ಷಕರಿಗೆ ವಂದಿಸುವ ನಾಟ್ಯಗಣಪತಿಗೆ ನಮನ ಎಂಬ ನೃತ್ಯ ಪ್ರೇಕ್ಷಕರ ಮನಸ್ಸಿಗೆ ಮುದನೀಡಿತು. ಶಿವನ ಕುರಿತಾದ ‘ನಟನಂ ಆಡಿನಾರ್’ ಮತ್ತು ‘ಕಂಡೆ ನಾ ನಟರಾಜನ’ ಎಂಬ ಶಿವ ಕೃತಿಯನ್ನು ವಿದ್ಯಾರ್ಥಿಗಳು ಪ್ರೇಕ್ಷಕರ ಮನ ಮುಟ್ಟುವಂತೆ ನರ್ತಿಸಿದರು. ಜಯದೇವನ ಅಷ್ಟಪದಿಯ ಪ್ರಾರಂಭದ ದಶಾವತಾರ ಶ್ಲೋಕ, ಪುರಂದರ ದಾಸರ ಪಿಳ್ಳ೦ಗೋವಿಯ, ಜಯಶ್ರೀ ಅರವಿಂದ್ ಅವರು ಬರೆದ ‘ಕಣ್ಣುಗಳೆರಡು ಸಾಲದಮ್ಮ’, ಪುರಂದರ ದಾಸರ ಮತ್ತೊoದು ದೇವರನಾಮ ‘ಹರಿಯೇ ಗತಿ’ (ರುಕ್ಮಿಣಿ ಕಲ್ಯಾಣ, ಭಸ್ಮಾಸುರ ಮೋಹಿನಿ ಕಥೆ)ಗಳನ್ನು ಸಂಚಾರಿ ರೂಪದಲ್ಲಿ ಪ್ರದರ್ಶಿಸಲಾಯಿತು. ಕೊನೆಯಲ್ಲಿ ವಿದ್ವಾನ್ ಮಂಜುನಾಥ್ ಪುತ್ತೂರು ಅವರು ಬರೆದ ಸರಸ್ವತಿ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಹಾಡುಗಾರಿಕೆಯಲ್ಲಿ ಸಹಕರಿಸಿದ ವಿದುಷಿ ರಜನಿ ವರುಣ್ ಗೋರೆ ಬೆಂಗಳೂರು, ಮೃದಂಗದಲ್ಲಿ ಬಾಲಚಂದ್ರ ಭಾಗವತ, ಕೊಳಲು ಹಾಗೂ ಕೀ ಬೋರ್ಡ್ ವಿದ್ವಾನ್ ಶ್ರೀ ಮುರಳೀಧರ ಆಚಾರ್ಯ, ಸುಂದರವಾಗಿ ಕಾರ್ಯಕ್ರಮ ನಿರೂಪಣೆ ಮಾಡಿದ ಶ್ರೀ ದಾಮೋದರ ಶರ್ಮ ಇವರೆಲ್ಲರನ್ನೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಂಸ್ಥೆಯ ಸಹನಿರ್ದೇಶಕಿಯಾದ ವಿದುಷಿ ಪ್ರಣತಿ ಸತೀಶ್ ಪ್ರಸ್ತಾವಿಕ ನುಡಿಗಳನ್ನಾಡಿ, ಸಂಸ್ಥೆಯ ನಿರ್ದೇಶಕರಾದ ವಿದುಷಿ ಭಾರತಿ ಸುರೇಶ್ ಧನ್ಯವಾದ ಸಮರ್ಪಿಸಿದರು.