ಮಂಗಳೂರು: ಹಿರಿಯ ನೃತ್ಯ ಗುರು ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಗುರು ಬಿ.ಪ್ರೇಂನಾಥ್ ದಿನಾಂಕ 01-10-2023ರಂದು ಮಧ್ಯಾಹ್ನ ತಮ್ಮ 87ನೇ ವಯಸ್ಸಿನಲ್ಲಿ ಇಹವನ್ನು ತ್ಯಜಿಸಿದ್ದಾರೆ. ಗುರು ಪರಂಪರೆಯಿಂದ ಬಂದ ಶಾಸ್ತ್ರೀಯ ನೃತ್ಯ ಕಲೆಯ ಶುದ್ಧತೆಯನ್ನು ಉಳಿಸಿ ಬೆಳೆಸಿ ನೃತ್ಯ ಕಲೆಗೆ ನ್ಯಾಯ ಒದಗಿಸಿದ ನೃತ್ಯ ಗುರುಗಳಲ್ಲಿ ಹಿರಿಯರಾದ ಪ್ರೇಂನಾಥ್ ಇವರೂ ಒಬ್ಬರು. 1961ರಲ್ಲಿ ‘ಲಲಿತ ಕಲಾ ಸದನ’ ಎಂಬ ಹೆಸರಿನಲ್ಲಿ ನೃತ್ಯ ಸಂಗೀತ ಶಾಲೆಯನ್ನು ಮಂಗಳೂರಿನ ಉರ್ವಸ್ಟೋರ್ ನಲ್ಲಿ ಸ್ಥಾಪಿಸಿದರು.
ಗುರುಗಳು ತಾವು ಮಾತ್ರ ನೃತ್ಯ ಶಾರದೆಯ ಸೇವೆ ಮಾಡಿದ್ದಲ್ಲದೆ ತಮ್ಮ ಪೂರ್ಣ ಕುಟುಂಬವೇ ಭರತನಾಟ್ಯ ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ಮಾರ್ಗದರ್ಶನ ಮಾಡಿದವರು. ಅಭಿನಯ ಶಿರೋಮಣಿ ಗುರು ರಾಜರತ್ನಂ ಪಿಳ್ಳೆಯವರಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಪಾಠವನ್ನು ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಸಮರ್ಪಣಾ ಭಾವದಿಂದ ಕಲಾಮಾತೆಗೆ ನ್ಯಾಯ ಒದಗಿಸಿದ್ದಾರೆ. ದೇಶ-ವಿದೇಶಗಳಲ್ಲಿ ಶಿಷ್ಯರನ್ನು ಹೊಂದಿದ್ದ ಇವರು ಕಥಕ್ಕಳಿ, ಭರತನಾಟ್ಯ ಅಭ್ಯಾಸದೊಂದಿಗೆ ಸಂಗೀತ, ಮೃದಂಗ ವಾದನವನ್ನೂ ಕಲಿತಿದ್ದರು. ಕರಾವಳಿ ನೃತ್ಯ ಕಲಾ ಪರಿಷತ್ ದ.ಕ., ಹಾಗೂ ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಬಿ.ಎ., ಬಿ.ಎಡ್. ಪದವೀಧರರಾದ ಶ್ರೀಯುತರು 40 ವರ್ಷಗಳ ಕಾಲ ಮಂಗಳೂರಿನ ಸೈಂಟ್ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಮಹಾ ಸಂಸ್ಥಾನದಿಂದ ‘ನೃತ್ಯ ಕಲಾ ಸಾಗರ’, ಭಾರತೀಯ ನೃತ್ಯ ಕಲಾ ಪರಿಷತ್ ಮೈಸೂರು ‘ನೃತ್ಯ ಕಲಾ ವಿದ್ಯಾನಿಧಿ’, 2001ರಲ್ಲಿ ಅಖಿಲ ಭಾರತ ನೃತ್ಯ ಸಮಾವೇಶದಲ್ಲಿ ಪರ್ಯಾಯ ಪೀಠಾದೀಶ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ ‘ನೃತ್ಯ ಕಲಾ ಪ್ರಭಾಕರ’, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಕರ್ನಾಟಕ ಸರಕಾರದಿಂದ ‘ಕರ್ನಾಟಕ ಕಲಾಶ್ರೀ’, ರಾಜ್ಯೋತ್ಸವ ಪ್ರಶಸ್ತಿ, ಇವರು ಭರತನಾಟ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ದೆಹಲಿ ಕರ್ನಾಟಕ ಸಂಘದಿಂದ ‘ನೋಬೆಲ್ ಮ್ಯಾನ್ ಅವಾರ್ಡ್’ ರಾಷ್ಟ್ರೀಯ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿಗಳೆಲ್ಲ ಗುರು ಶ್ರೀ ಪ್ರೇಂನಾಥ್ ಇವರು ನೃತ್ಯ ಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದೆ ಶೃದ್ಧೆಯಿಂದ ಮಾಡಿದ ಪ್ರಾಮಾಣಿಕ ಶ್ರಮಕ್ಕೆ ಸಂದ ಗೌರವ.
ಪುತ್ರ ವಿದ್ವಾನ್ ಸುದರ್ಶನ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ತಂದೆಯವರು ಸ್ಥಾಪಿಸಿದ ಲಲಿತ ಕಲಾಸದನದ ವಿವಿಧ ಶಾಖೆಗಳನ್ನು ಸ್ಥಾಪಿಸಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇನ್ನೊಬ್ಬ ಮಗ ಮಹೇಶ್ ಲೆಮಿನಾದಲ್ಲಿ ಉದ್ಯೋಗಿಯಾಗಿದ್ದಾರೆ. ಹಿರಿಯ ಪುತ್ರಿ ವಿದುಷಿ ಶ್ರೀಮತಿ ನಯನಾ ಸತ್ಯನಾರಾಯಣ್ ಬಿ.ಎ. ಬಿ.ಎಡ್ ಪದವೀಧರೆ. ವಿಟ್ಲದಲ್ಲಿ ಲಲಿತಾ ಕಲಾ ಸದನದ ಶಾಖೆಯನ್ನು ಸ್ಥಾಪಿಸಿ, ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿರಿಯ ಪುತ್ರಿ ವಿದುಷಿ ಶ್ರೀಮತಿ ಪ್ರತಿಮಾ ಇವರು ಎಂ.ಎ. ಪದವೀಧರರು. ಇವರು ಬೆಂಗಳೂರಿನಲ್ಲಿ ಲಲಿತ ಕಲಾಸದನದ ನೃತ್ಯ ಶಾಖೆಯನ್ನು ಸ್ಥಾಪಿಸಿ ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.