ಮಂಗಳೂರು : ಭರತಾಂಜಲಿ ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ನೃತ್ಯಾಮೃತಮ್ -2023’ ಕಾರ್ಯಕ್ರಮ ನಗರದ ಪುರಭವನದಲ್ಲಿ ದಿನಾಂಕ :08-07-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ಇವರು ಉದ್ಘಾಟಿಸಿ ಮಾತನಾಡುತ್ತಾ “ನೃತ್ಯ ಕಲೆಯ ಕಲಿಯುವಿಕೆಯಿಂದ ಮನುಷ್ಯನಲ್ಲಿ ತಾಳ್ಮೆ ಸಹನೆ ಏಕಾಗ್ರತೆ ಬೆಳೆಯಲು ಸಾಧ್ಯ. ಭರತನಾಟ್ಯ ಕಲೆಯು ಆಧ್ಯಾತ್ಮಿಕ ವಿಷಯಗಳ ಅರಿವನ್ನು ನೀಡುತ್ತದೆ. ಭರತನಾಟ್ಯ ಕಲೆಯಲ್ಲಿ ಪ್ರಸಿದ್ದಿ ಪಡೆಯಬೇಕಾದರೆ ಕಠಿಣ ಪರಿಶ್ರಮದೊಂದಿಗೆ ಧ್ಯೇಯ ಅತೀ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 28 ವರ್ಷಗಳಿಂದ ಈ ಕಲಾ ಪ್ರಕಾರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಲಾ ಸೇವೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭರತಾಂಜಲಿಯ ಕಲಾ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ದಂಪತಿಗಳು ಅಭಿನಂದನಾರ್ಹರು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಪೊಳಲಿ, ಗಿರಿ ಪ್ರಕಾಶ್ ತಂತ್ರಿ, ನಾಟ್ಯ ಗುರು ಕಲಾಶ್ರೀ ಕಮಲಾ ಭಟ್ ಉಪಸ್ಥಿತರಿದ್ದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ ಸ್ವಾಗತಿಸಿ, ನಿರ್ದೇಶಕಿ ಪ್ರತಿಮಾ ಶ್ರೀಧರ್ ವಂದಿಸಿದರು. ಸಹ ಶಿಕ್ಷಕಿಯರಾದ ಪಕ್ಷಿಲಾ ಜೈನ್, ಮಾನಸ ಕುಲಾಲ್ ವಂದನಾರಾಣಿ ಮತ್ತಿತರರು ಉಪಸ್ಥಿತರಿದ್ದರು.
ಹಿಮ್ಮೇಳದಲ್ಲಿ ನೃತ್ಯ ನಿರ್ದೇಶನ ಹಾಗೂ ನಟವಾಂಗದಲ್ಲಿ ಗುರು ವಿದುಷಿ ಪ್ರತಿಮಾ ಶ್ರೀಧರ್, ಹಾಡುಗಾರಿಕೆಯಲ್ಲಿ ವಿದುಷಿ ವಂದನಾ ರಾಣಿ, ಮೃದಂಗಂನಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್, ವಯಲಿನ್‌ನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಭಾಗವಹಿಸಿದ್ದರು.