ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿಯು ಹಮ್ಮಿಕೊಂಡ ‘ನೃತ್ಯಾಂತರಂಗ’ದ 104ನೇ ಸರಣಿ ಕಾರ್ಯಕ್ರಮವು ದಿನಾಂಕ 16-09-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ‘ಶಿವ ಪ್ರಣಾಮ್’ ನೃತ್ಯ ಸಂಸ್ಥೆಯ ನಿರ್ದೇಶಕಿಯಾದ ವಿದುಷಿ ಅನ್ನಪೂರ್ಣ ರಿತೇಶ್ ಮೂಲ್ಕಿ ಇವರು ಭರತನಾಟ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಇವರಿಂದ ಶಂಖನಾದ ಹಾಗೂ ಸಂಸ್ಥೆಯ ಸಂಗೀತ ನಿರ್ದೇಶಕಿಯಾದ ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಮಂಗಳಮಯ ಓಂಕಾರನಾದ ಮತ್ತು ಸಂಸ್ಥೆಯ ಪುಟಾಣಿ ಕಲಾವಿದರ ‘ಅಲಪದ್ಮ’ ತಂಡದಿಂದ ಪ್ರಾರ್ಥನೆ ನಡೆಯಿತು.
ಅಭ್ಯಾಗತರಾಗಿ ಆಗಮಿಸಿದ ಪತ್ರಕರ್ತ ಶ್ರೀಯುತ ಹರಿಪ್ರಸಾದ್ ನೆಲ್ಯಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಶ್ರೀ ಹಿಮನೀಶ್, ಕುಮಾರಿಯರಾದ ಅಪೇಕ್ಷಾ ಮತ್ತು ದಿಶಾ ಆರ್.ಶೆಟ್ಟಿ ಅಭ್ಯಾಗತರನ್ನು ಹಾಗೂ ಕಲಾವಿದರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಕಲಾವಿದೆಯಾದ ಕುಮಾರಿ ಅಕ್ಷಯ ಪಾರ್ವತಿ ಸರೊಳಿ ತುಳುವಿನಲ್ಲಿ ನಿರೂಪಿಸಿದರು.
ಮಂಗಳೂರಿನ ಭಾರತಾಂಜಲಿ ನೃತ್ಯ ಸಂಸ್ಥೆಯ ಗುರು ಪ್ರತಿಮಾ ಶ್ರೀಧರ್ ಹಾಗೂ ಶ್ರೀಯುತ ಶ್ರೀಧರ್ ಹೊಳ್ಳ ಇವರ ಶಿಷ್ಯೆಯಾದ ವಿದುಷಿ ಅನ್ನಪೂರ್ಣ ರಿತೇಶ್ ಮೊದಲಿಗೆ ಪುಷ್ಪಾಂಜಲಿ ಶೈಲಿಯ ದೇವಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ನಂತರ ಸುದೀರ್ಘವಾದ ನವರಾಗಮಾಲಿಕೆಯ ಪದವರ್ಣವನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ನಾಯಕಿಯು ನಾಯಕನ ತಪ್ಪುಗಳನ್ನು ಖಂಡಿಸುವ ಹುಸೇನಿ ರಾಗದಲ್ಲಿರುವ ಖಂಡಿತ ನಾಯಕಿಯ ‘ಪದಂ’ ಅನ್ನು ಪ್ರಸ್ತುತಪಡಿಸಿ, ಮಂಗಳಂದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ನೃತ್ಯಾ ಕಾರ್ಯಕ್ರಮವನ್ನು ವಿದುಷಿ ಅನ್ನಪೂರ್ಣ ರಿತೇಶ್ ಇವರ ಶಿಷ್ಯೆಯಾದ ಕುಮಾರಿ ಹಿತ ನಿರೂಪಿಸಿದರು.