ಮಂಗಳೂರು : ಶಾಂತಲಾ ಪ್ರಶಸ್ತಿ ಪುರಸ್ಕೃತೆ ದಿ. ಶ್ರೀಮತಿ ಜಯ ಲಕ್ಷ್ಮೀ ಆಳ್ವ ಅವರ 90ನೇ ವರ್ಷದ ಜನ್ಮ ವರ್ಷಾಚರಣೆಯ ಅಂಗವಾಗಿ ಮಂಗಳೂರಿನ ಶ್ರೀದೇವಿ ನೃತ್ಯಕಲಾ ಕೇಂದ್ರ ಆಯೋಜಿಸುವ ‘ನೃತ್ಯೋತ್ಸವ-2023’ ಪ್ರತಿಭಾ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ದಿನಾಂಕ 27-10-2023 ಮತ್ತು 28-10-2023ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ದಿನಾಂಕ 27-10-2023ರಂದು ಪೂರ್ವಾಹ್ನ ಘಂಟೆ 10.00ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮವನ್ನು ಮಣಿಪುರಿ ನೃತ್ಯದ ಹಿರಿಯ ಪ್ರತಿವಾದಕರಾದ ಪದ್ಮಶ್ರೀ ದರ್ಶನ ಜ್ಹವೇರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ನೃತ್ಯಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಆಯ್ದ 20 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಜೇತರಿಗೆ ‘ಯುವಕಲಾ ಪ್ರಶಸ್ತಿ’ ಪ್ರದಾನಿಸಲಾಗುವುದು.ದಿನಾಂಕ 28-10-2023 ರಂದು ಸಂಜೆ ಘಂಟೆ 5.30ಕ್ಕೆ ನೃತ್ಯ ಗುರು ಕೆ.ಎನ್.ದಂಡಾಯುಧಪಾಣಿ ಒಳ್ಳೈ ಸ್ಮರಣಾರ್ಥ ನೀಡಲಾಗುವ ‘ನಾಟ್ಯಕಲಾ ತಪಸ್ವಿ ಪ್ರಶಸ್ತಿಯನ್ನು ಕಲಾವಿದೆ ಪದ್ಮಶ್ರೀ ಡಾ.ನರ್ತಕಿ ನಟರಾಜ ಚೆನ್ನೈ ಅವರಿಗೆ ಹಾಗೂ ಶ್ರೀಮತಿ ಜಯಲಕ್ಷ್ಮೀ ಆಳ್ವ ಅವರ ಸ್ಮರಣಾರ್ಥ ‘ಜಯ ಕಲಾ ಪ್ರಶಸ್ತಿ’ಯನ್ನು ಭರತನಾಟ್ಯ ಕ್ಷೇತ್ರದಲ್ಲಿ ಉನ್ನತ ಸೇವೆ ನೀಡಿರುವ ಡಾ.ಶೀಲಾ ಶ್ರೀಧರ್ ಮೈಸೂರು ಅವರಿಗೆ ಪ್ರದಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಜಯಲಕ್ಷ್ಮೀ ಆಳ್ವ ಅವರ ಸಾಂಸ್ಕೃತಿಕ ಜೀವನದ ಪಯಣ ‘ಜಯ ಕಥಾ’ವನ್ನು ಸಂಗೀತ ನೃತ್ಯ ರೂಪಕದ ಮೂಲಕ ಶ್ರೀದೇವಿ ನೃತ್ಯ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಮುಂಬೈಯ ಅನುರಾಮ್ ಡಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.