ಮಂಗಳೂರು: ದಿನಾಂಕ 04-06-2023ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ಭರತನಾಟ್ಯ ಮಾರ್ಗದ ಕನ್ನಡ ನೃತ್ಯಬಂಧಗಳಿಗೆ ಸಂಬಂಧಪಟ್ಟಂತೆ ‘ನೃತ್ಯಕಾವ್ಯ’ ಕೃತಿಯ ಲೋಕಾರ್ಪಣೆ ಹಾಗೂ ಆತನ ಭಾವ ಛಾಯೆಗಳಿಗೆ ಸಂಬಂಧಿಸಿದ ‘ಭಾವಸ್ಥ’ ಎಂಬ ಶೀರ್ಷಿಕೆಯಡಿಯಲ್ಲಿ ನೃತ್ಯಗಳ ಪ್ರದರ್ಶನಗೊಂಡಿತು. ಶ್ರೀ ವಿಜಯಕುಮಾರ್ ಎಸ್. ಚೆನ್ನೈ, ಶ್ರೀ ಸಾಗರ್ ಟಿ.ಎಸ್. ತುಮಕೂರು, ಶ್ರೀ ಅನಿಲ್ ಅಯ್ಯರ್ ಬೆಂಗಳೂರು, ಶ್ರೀ ಬಿ. ದೀಪಕ್ ಕುಮಾರ್ ಪುತ್ತೂರು, ಶ್ರೀ ಪ್ರಮೋದ್ ಕುಮಾರ್ ಉಳ್ಳಾಲ, ಶ್ರೀ ಸುಜಯ್ ಶ್ಯಾನುಭಾಗ ಹುಬ್ಬಳ್ಳಿ ಈ ಆರೂ ಮಂದಿ ಭರತನಾಟ್ಯ ಕಲಾವಿದರು ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ ಇವರ ಅದ್ಭುತ ಕಂಠಸಿರಿಗೆ, ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರ ನಟುವಾಂಗ, ಶ್ರೀ ಕೇಶವ ಮೋಹನ ಮೈಸೂರು ಇವರ ವಯೋಲಿನ್ ವಾದನ ಹಾಗೂ ಶ್ರೀ ವಿನಯ್ ನಾಗರಾಜ್ ಬೆಂಗಳೂರು ಇವರ ಮೃದಂಗ ವಾದನ, ಈ ಎಲ್ಲಾ ಹಿಮ್ಮೇಳಕ್ಕೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ್ದಾರೆ.
ಹಿರಿಯರಾದ ಕರ್ನಾಟಕ ಕಲಾತಿಲಕ ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ನಟರಾಜನ ಬಳಿ ಮಂಗಳ ಜ್ಯೋತಿ ಬೆಳಗಿ ನಟುವಾಂಗದ ತಾಳವನ್ನು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರಿಗೆ ನೀಡಿ ಹರಸಿದಾಗ ಇವರೊಂದಿಗೆ ನಾಟ್ಯ ಗುರುಗಳಾದ ವಿದ್ವಾನ್ ಚಂದ್ರಶೇಖರ ನಾವಡ ಮತ್ತು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರೂ ಹರಸಿದರು. ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ದೀಪ ಬೆಳಗುವುದರೊಂದಿಗೆ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖ್ಯಾತ ಭರತನಾಟ್ಯ ಕಲಾವಿದೆ ಯಶಸ್ವೀ ನಟಿಯೂ ಆದ ಸೀತಾ ಕೋಟೆಯವರು ಅಮೂಲ್ಯ ಕೃತಿ ‘ನೃತ್ಯಕಾವ್ಯ’ದ ಬಂಧನವನ್ನು ಕಳಚಿ ಲೋಕಾರ್ಪಣೆ ಮಾಡಿ ಅದರ ಜ್ಞಾನ ಧಾರೆ ಎಲ್ಲೆಡೆ ಹರಿಯುವಂತೆ ಮಾಡಲು ಸಹಕರಿಸಿದರು.
ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಮಾತನಾಡುತ್ತಾ “ಬಾಲ್ಯದಿಂದಲೇ ಸುಮಂಗಲಾಳಿಗೆ ಶೃದ್ಧೆಯಿಂದ ಅಧ್ಯಯನ ಮಾಡುವ, ಹೊಸದನ್ನು ಕಂಡುಕೊಳ್ಳುವ ಛಲ ಇತ್ತು. ಕಲಾವಿದರಲ್ಲಿರಬೇಕಾದ ನಯ ವಿನಯ ಗುಣಗಳನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡವಳು. ಯಕ್ಷಗಾನದಲ್ಲಿಯೂ ನಾಟ್ಯ, ಮಾತುಗಾರಿಕೆ ಮತ್ತು ತಾಳ ಮದ್ದಳೆಯಲ್ಲಿಯೂ ಮೆರೆಯುವ ವಾಕ್ಚಾತುರ್ಯ, ಭರತನಾಟ್ಯದ ನಟುವಾಂಗದಲ್ಲಿಯೂ ಲಯಬದ್ಧತೆ ಮತ್ತು ಇವೆಲ್ಲವುಗಳಿಗಿಂತ ಹೆಚ್ಚಾಗಿ ಯಾರೂ ಮಾಡದ ಒಂದು ಸಾಹಿತ್ಯ ರಚನೆಯ ಸಾಧನೆಯನ್ನು ಇವಳು ಮಾಡಿದ್ದಾಳೆ ಇವೆಲ್ಲವೂ ಶ್ಲಾಘನೀಯ” ಎಂದರು.
ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಹಿರಿ ತೆರೆ ಕಿರಿ ತೆರೆಯ ನಟಿ ಶ್ರೀಮತಿ ಸೀತಾ ಕೋಟೆಯವರು ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಾ “ಭಾಷೆಯ ಮುಖಾಂತರ ಮಾತ್ರ ಪ್ರತಿಯೊಂದು ಭಾವವನ್ನೂ ನಿಖರವಾಗಿ, ತೀಕ್ಷ್ಣವಾಗಿ ಮತ್ತು ಸಾಂದ್ರವಾಗಿ ಹೇಳಲು ಸಾಧ್ಯ ಎಂಬುದನ್ನು ವಿದುಷಿ ಸುಮಂಗಲಾ ರತ್ನಾಕರ್ ರಾವ್ ತೋರಿಸಿ ಕೊಟ್ಟಿದ್ದಾರೆ. ನಾವು ಕೇಳುವ, ನೋಡುವ ಜಾವಳಿ, ಪದಂ, ಪದ ವರ್ಣಗಳೇ ಇರಬಹುದು ಇವುಗಳಿಗೆ ಕಿಂಚಿತ್ತೂ ಕೊರತೆ ಬಾರದ ರೀತಿಯಲ್ಲಿ ಇಷ್ಟು ಘನವಾಗಿ, ಪ್ರೌಢವಾಗಿ, ಪಕ್ವತೆಯಿಂದ ಸಾಹಿತ್ಯ ರಚನೆ ಮಾಡುವುದು ಸುಲಭದ ಮಾತಲ್ಲ. ಭಾವನೆಗಳು ತಾಯಿಯದ್ದೇ ಇರಬಹುದು, ಪ್ರೇಮಿಯದ್ದೇ ಇರಬಹುದು, ಮನುಷ್ಯನ ಭಾವನೆಗಳನ್ನು ತಳಭಾಗದಿಂದ ಸ್ಪರ್ಶಿಸಿ ನಮ್ಮ ಮುಂದೆ ಅನಾವರಣಗೊಳಿಸಿದ್ದಾರೆ. ಮುಂದೆ ನನ್ನ ಏಳೆಂಟು ರಂಗ ಪ್ರವೇಶಗಳಿವೆ. ಅವುಗಳಲ್ಲಿ ಸುಮಂಗಲಾರ ರಚನೆಯನ್ನೇ ಮಾಡುತ್ತೇನೆ. ಪ್ರತೀಯೊಂದು ರಚನೆಯಲ್ಲೂ ಪ್ರೌಢಿಮೆ ಇರುವ ಈ ಜಾವಳಿಗಳು ಪದಂಗಳು ಮುಂದೆ ಮನೆ ಮಾತಾಗಲಿ. ಯಕ್ಷಗಾನದ ಹಿನ್ನೆಲೆ, ಸಾಹಿತ್ಯದ ಹಿನ್ನೆಲೆ ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಭಾವನೆಗಳನ್ನು ಅರ್ಥ ಮಾಡಿಕೊಂಡು ಸೂಕ್ಷ್ಮತೆಯಿಂದ ಬರೆದಿರುವುದು ಯಾವತ್ತೂ ಸೋಲುವುದಿಲ್ಲ. ತಾನೊಬ್ಬ ಹೆಣ್ಣಾಗಿ ಗಂಡು ಮಕ್ಕಳ ಭಾವನೆಯನ್ನು ಅಷ್ಟು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು, ಈ ವೇದಿಕೆಯನ್ನು ಅವರಿಗೇ ಬಿಟ್ಟು ಕೊಟ್ಟದ್ದು ವಿಶಾಲ ಮನೋಭಾವನೆಗೆ ಸಾಕ್ಷಿಯಾಗಿದೆ. ‘ನೃತ್ಯ ಕಾವ್ಯ’ ಕೃತಿ ಪ್ರಪಂಚದಾದ್ಯಂತ ಹೋಗಬೇಕು, ಸಾವಿರ ಸಾವಿರ ಪ್ರಸ್ತುತಿಗಳಾಗಬೇಕು” ಎಂದು ಹಾರೈಸಿದರು.
ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಕಲಾಪೋಷಕ ಶ್ರೀ ವಿನಯ್ ಭಟ್ ಪಿ.ಜೆ. ಮಾತನಾಡಿ “ಸಂಗೀತ, ತಾಳ, ನೃತ್ಯ, ಶಬ್ದಗಳನ್ನು ಕನ್ನಡದಲ್ಲಿ ಕಟ್ಟಿ ಹಾಕಿ ಅದನ್ನು ಲಯದ ಚೌಕಟ್ಟಿನೊಳಗೆ ಸಂಸ್ಕಾರಯುತವಾಗಿ ಬಂಧಿಸಿದ ರೀತಿ ಅಮೋಘ” ಎಂದರು.
ನಾಟ್ಯಂಜಲಿ ಕಲಾ ಅಕಾಡಮಿಯ ನಿರ್ದೇಶಕ ಸುಮಂಗಲಾ ರತ್ನಾಕರರ ಗುರುಗಳಾದ ವಿದ್ವಾನ್ ಚಂದ್ರಶೇಖರ ನಾವಡರು ಮಾತನಾಡಿ ಸಾಧನೆಯು ಸಾಧಕನ ಸೊತ್ತು ಎಂಬುದಕ್ಕೆ ಸರಿಯಾದ ಸಾಕ್ಷಿ ಸುಮಂಗಲಾ. ವಿದ್ಯಾರ್ಥಿ ಜೀವನದಲ್ಲಿಯೇ ಅರ್ಥವಾಗದ್ದನ್ನು ಅರ್ಥವಾಗುವವರೆಗೆ ಛಲ ಬಿಡದೆ ಸಾಧಿಸಿ ತಿಳಿದುಕೊಂಡು ಕರಗತ ಮಾಡಿಕೊಳ್ಳುವಾಕೆ. ಸುಮಂಗಲಾ ಮುಂದೊಂದು ದಿನ ಏನೋ ಸಾಧಿಸುವವಳಿದ್ದಾಳೆ ಎಂದು ಅಂದು ಯೋಚಿಸಿದ್ದನ್ನು ಇಂದು ವೇದಿಕೆಯಲ್ಲಿ ನೆನೆಸಿಕೊಂಡರು. ಸುಮಂಗಲಾ ರತ್ನಾಕರ್ ಇವರ ಇನ್ನೊಬ್ಬ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್ ಮಾತನಾಡಿ, ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆ, ನಟುವನ್ನರ್ ನಿರೂಪಕಿ ಹೀಗೆ ಸಕಲ ಕಲಾವಲ್ಲಭೆ ವಿದುಷಿ ಸುಮಂಗಲಾ ರತ್ನಾಕರ್ ಎನ್ನುತ್ತಾ ಇವರಿಗೆ ಶುಭ ಹಾರೈಸಿದರು.
ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ನೃತ್ಯಕ್ಕೆ ಸಂಕ್ರಮಣವನ್ನು ಕೊಟ್ಟ ಏಕೈಕ ನೃತ್ಯಗುರು ಸುಮಂಗಲಾ ರತ್ನಾಕರ್. ಅಧ್ಯಯನ, ಅಧ್ಯಾಪನ, ಪ್ರದರ್ಶನ ಈ ಮೂರಕ್ಕೆ ಒಂದು ಪಠ್ಯವನ್ನು ಸುಮಂಗಲಾ ರತ್ನಾಕರ್ ನೀಡಿದ್ದಾರೆ. ಆರು ಮಂದಿ ಪುರುಷರು ನರ್ತಿಸುವಾಗ ವೇದಿಕೆಯ ಮೇಲೆ ಬಿದ್ದ ಅವರ ಒಂದೊಂದು ಹನಿ ಬೆವರೂ ಸಹ ಕರಾವಳಿ ಕರ್ನಾಟಕದಲ್ಲಿ ನಾಟ್ಯ ಕಲೆಯನ್ನು ಉಳಿಸುವ ಒರತೆಯಾಗಿ ಪರಿಣಮಿಸಿದೆ. ‘ನೃತ್ಯ ಕಾವ್ಯ’ ಕೃತಿ ಅಕ್ಷರ ಲೋಕಕ್ಕೆ ಒಂದು ದೊಡ್ಡ ಕೊಡುಗೆ ಎಂದರು.
ಕೃತಿ ರಚನೆಯನ್ನು ಛಲದಿಂದ ಮಾಡಿ ನೃತ್ಯ ಕ್ಷೇತ್ರಕ್ಕೆ ನೀಡಿದ ಬಹುದೊಡ್ಡ ಕೊಡುಗೆಗೆ ಧರ್ಮಸ್ಥಳದ ಭುಜಬಲಿಯವರು ಸುಮಂಗಲಾರನ್ನು ಅಭಿನಂದಿಸಿದರು. ವೇದಿಕೆಯಲ್ಲಿದ್ದ ಶ್ರೀಮತಿ ಶಕುಂತಲಾ ರಮಾನಂದ ಭಟ್ ಇಡ್ಯಾ ಆಶೀರ್ವದಿಸಿದರು. ಪ್ರಸಿದ್ಧ ಸಾಹಿತಿ ಹಾಗೂ ವಕೀಲರಾದ ಶ್ರೀ ಶಶಿರಾಜ್ ರಾವ್ ಕಾವೂರು ಮಾತನಾಡಿ “ಹಿಂದೆ ಗುರುಗಳಿದ್ದಾರೆ ಮುಂದಿರುವ ಗುರಿಯನ್ನು ಸುಮಂಗಲಾ ಮೇಡಂ ತಲುಪಿದ್ದಾರೆ. ಇನ್ನೂ ಹೆಚ್ಚಿನ ಕೃತಿಗಳು ಬೆಳಕು ಕಾಣಲಿ” ಎಂದರು. ಕಾಂತಾರ ಖ್ಯಾತಿಯ ವಿದುಷಿ ಮಾನಸಿ ಸುಧೀರ್ “ಕನ್ನಡದಲ್ಲಿ ಭರತನಾಟ್ಯಕ್ಕೆ ಸಾಹಿತ್ಯಬೇಕು ಎಂಬ ನಿರೀಕ್ಷೆ ಬಹು ಸಮಯದ್ದು. ಇಂದಿನ ಸಂಗೀತ ಪ್ರಸ್ತುತಿಯಲ್ಲಿ ಸಾಹಿತ್ಯ ಹಾಗೂ ನೃತ್ಯ ಈ ಮೂರೂ ಪರಿಪಕ್ವವಾಗಿ ಬೆಸೆದುಕೊಂಡು ರಸೋತ್ಪತ್ತಿಯಾಗಿ ಪ್ರೇಕ್ಷರನ್ನು ತನ್ನ ಕಡೆಗೆ ಸೆಳೆದಿದೆ” ಎಂದರು. ಶ್ರೀ ಅಗರಿ ರಾಘವೇಂದ್ರ ರಾವ್ ಶುಭ ಹಾರೈಸಿದರು.
ಗಣೇಶ ಸ್ತುತಿಯೊಂದಿಗೆ ಆರಂಭವಾಗಿ ನಾಟ್ಯಾಧಿದೇವತೆ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ, ಹಿಮ್ಮೇಳ ಕಲಾವಿದರಿಗೆ ವಿದ್ವತ್ ಸಭೆಗೆ ನಮಿಸಿ, ಭೂಮಾತೆಗೆ ವಂದಿಸುತ್ತಾ ಕಾರ್ಯಕ್ರಮಕ್ಕೆ ಶುಭಯಾಚಿಸುವ ನೃತ್ಯ ಪುಷ್ಪಾಂಜಲಿಯನ್ನು ಸಮೂಹದಲ್ಲಿ ನರ್ತಿಸಿದವರು ವಿದ್ವಾನ್ ದೀಪಕ್ ಕುಮಾರ್ ಪುತ್ತೂರು, ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ ಮತ್ತು ವಿದ್ವಾನ್ ಸುಜಯ್ ಶಾನುಭೋಗ್ ಹುಬ್ಬಳ್ಳಿ. ಈ ಮೂರೂ ಮಂದಿ ಅದ್ಭುತ ಪ್ರಸ್ತುತಿ ನೀಡಿದ್ದಾರೆ. ಧೀರ ಉದ್ಧತ ನಾಯಕ ರಾವಣನನ್ನು ಬಿಂಬಿಸುವ ಒಂದು ಅಪೂರ್ವ ಜಾವಳಿಯನ್ನು ವಿದ್ವಾನ್ ಅನಿಲ್ ಅಯ್ಯರ್ ಅಮೋಘವಾಗಿ ಪ್ರಸ್ತುತಪಡಿಸಿದ್ದಾರೆ. ಇಲ್ಲಿಂದ ಆರಂಭವಾಗಿ ಒಂದಕ್ಕಿಂತ ಒಂದು ಅಪೂರ್ವವಾದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
ದೇವಾಲಯದ ಮುಖ್ಯ ದೇವತೆಯನ್ನು ಸ್ತುತಿಸುವ ಸಾಹಿತ್ಯವಿರುವ ಪ್ರಾರ್ಥನಾ ರೂಪದ ನಟೇಶ ಕೌತ್ವಂನ್ನು ಪ್ರಸ್ತುತ ಪಡಿಸಿದವರು ವಿದ್ವಾನ್ ಸುಜಯ್ ಶಾನುಭೋಗ್ ಹುಬ್ಬಳ್ಳಿ. ಕೃಷ್ಣನ ಬಾಲಲೀಲೆ, ಗೀತೋಪದೇಶ, ಎಲ್ಲರಿಗೂ ದರ್ಶನ ಭಾಗ್ಯ ನೀಡುವ ವಿಷಯಗಳನ್ನು ಒಳಗೊಂಡ ‘ಶಬ್ದಂ’ನ್ನು ಪ್ರಮೋದ್, ಶಕುಂತಲೆಯನ್ನು ಧಿಕ್ಕರಿಸುವ ಖಂಡಿತ ನಾಯಕನ ಪ್ರಸ್ತುತಿ ವಿದ್ವಾನ್ ವಿಜಯ್ ಕುಮಾರ್ ಚೆನ್ನೈಯವರು ಪ್ರಸ್ತುತ ಪಡಿಸಿದರು. ಪ್ರೇಮಕ್ಕಾಗಿ ಹಾತೊರೆಯುವ ಅಭಿಸರಣ ನಾಯಕನನ್ನು ಬಿಂಬಿಸುವಂತಹ ಪದಂ ಪ್ರಸ್ತುತಿಯನ್ನು ದೀಪಕ್ ಕುಮಾರ್ ಪುತ್ತೂರು, ಧೀರ ಲಲಿತ ನಾಯಕನೊಬ್ಬ ತನ್ನ ಪತ್ನಿಯೊಂದಿಗೆ ಕಳೆಯುವ ಸರಸದ ಸಮಯವನ್ನು ಚಿತ್ರಿಸುವ ಜಾವಳಿಯನ್ನು ಡಾ. ಸಾಗರ್ ಟಿ.ಎಸ್ ಪ್ರದರ್ಶಿಸಿದರೆ, ವಿದ್ವಾನ್ ಅನಿಲ್ ಅಯ್ಯರ್ ಮತ್ತು ವಿದ್ವಾನ್ ಡಾ. ಸಾಗರ್ ಅವರ ಆಕರ್ಷಕ ನಡೆ ಭೇದಗಳು ಮತ್ತು ತಾಳ ವಿನ್ಯಾಸಗಳ ಸಂಯೋಜನೆಯ ಸುಂದರ ಪ್ರಸ್ತುತಿ ತಿಲ್ಲಾನದಲ್ಲಿ ಕಾರ್ಯಕ್ರಮ ಕೊನೆಕೊಂಡಿತು.
ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ಇವರು ತಮ್ಮ ಏಳರ ಎಳವೆಯಿಂದಲೇ ಭರತನಾಟ್ಯಕ್ಕೆ ಪಾದಾರ್ಪಣೆ ಮಾಡಿ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬಾಲ್ಯದಿಂದ ಜ್ಞಾನದಾಹದ ವಿದ್ಯಾರ್ಥಿ. ಕೀರ್ತಿಶೇಷ ನಾರಾಯಣ ಅವರಲ್ಲಿ ಭರತನಾಟ್ಯದ ಅಭ್ಯಾಸವನ್ನು ಆರಂಭಿಸಿ, ಮುಂದುವರಿದು ವಿದ್ವಾನ್ ಚಂದ್ರಶೇಖರ ನಾವಡರಲ್ಲಿ ಮತ್ತು ನೃತ್ಯ ಗುರು ಕರ್ನಾಟಕ ಕಲಾ ಶ್ರೀ ಶ್ರೀಮತಿ ಶಾರದಾಮಣಿ ಶೇಖರ್ ಅವರ ಮಾರ್ಗದರ್ಶನದಲ್ಲಿಯೂ ನೃತ್ಯಾಭ್ಯಾಸ ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ನಡೆಯುವ ಮಂಗಳೂರಿನ ಉರ್ವದ ನಾಟ್ಯಾರಾಧನಾ ಕಲಾಕೇಂದ್ರ ಈಗ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿದೆ. ನೃತ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದ ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಯಕ್ಷಗಾನ, ತಾಳಮದ್ದಲೆಯಲ್ಲಿ ನುರಿತ ಇವರು ‘ಯಕ್ಷ ಆರಾಧನಾ’ದ ನಿರ್ದೇಶಕಿಯೂ ಆಗಿದ್ದಾರೆ. ಅಪೂರ್ವವಾದ ‘ನೃತ್ಯ ಕಾವ್ಯ’ ಎನ್ನುವ ಕೃತಿಯ ಕರ್ತೃ ವಿದುಷಿ ಸುಮಂಗಲಾ ರತ್ನಾಕರ್ ರಾವ್. ಕಾವ್ಯ ರಚನೆ ಎನ್ನುವುದು ಕೇವಲ ಶಬ್ಧಗಳ ಜೋಡಣೆಯಲ್ಲ. ಕವಿಯ ಆತ್ಮದ ಭಾಗವನ್ನು ಭಾವವಾಗಿಸಿ ಪ್ರಪಂಚದೊಂದಿಗೆ ಹಂಚಿಕೊಳ್ಳುವುದು ಎಂಬುದು ಹಿರಿಯರ ಅಭಿಪ್ರಾಯ. ಭರತನಾಟ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇದ್ದಂತಹ ಕನ್ನಡ ರಚನೆಯ ಕೊರತೆಯನ್ನು ನೀಗಿಸುವ ಬಹುದೊಡ್ಡ ಪ್ರಯತ್ನ ಮಾಡಿದ್ದಾರೆ ಶ್ರೀಮತಿ ಸುಮಂಗಲಾ. ಈ ರಚನೆಗಳನ್ನು ಕೇವಲ ತನ್ನ ಉಪಯೋಗಕ್ಕಷ್ಟೇ ಸೀಮಿತಗೊಳಿಸದೆ ಕಲಾಲೋಕಕ್ಕೆ ಅರ್ಪಿಸುವ ಮನಸ್ಸು ಮಾಡಿದ್ದು ಶ್ರೇಷ್ಠ ಕೆಲಸ. ಕನ್ನಡಿಗರಿಗೆ ಮಾತ್ರವಲ್ಲದೆ ಅನ್ಯ ಭಾಷಿಗರಿಗೂ ತಲುಪಬೇಕೆನ್ನುವ ಸದುದ್ದೇಶದಿಂದ ಕನ್ನಡ ಸಾಹಿತ್ಯದ ಜೊತೆಗೆ ಆಂಗ್ಲ ವಿವರಣೆಯನ್ನೂ ಸ್ಪಷ್ಟವಾಗಿ ಬಿಡಿಬಿಡಿಯಾಗಿ ನೀಡಿ, ನೃತ್ಯ ಕ್ಷೇತ್ರಕ್ಕೆ ಮಾತ್ರವಲ್ಲ ಪೂರ್ಣ ಸಾಹಿತ್ಯ ಕ್ಷೇತ್ರಕ್ಕೇ ಅನನ್ಯವೂ ಅಪೂರ್ವವೂ ಆದಂತಹ ಕೃತಿಯೊಂದನ್ನು ನೀಡಿದ್ದಾರೆ. ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯಬೇಕಾದದ್ದು ಇದನ್ನು ವಿದುಷಿ ಸುಮಂಗಲಾ ರತ್ನಾಕರ್ ಸಾಬೀತು ಪಡಿಸಿದ್ದಾರೆ.
ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಇವರೊಬ್ಬ ಬಹುಮುಖ ಪ್ರತಿಭೆಯುಳ್ಳ ಮತ್ತು ಹೆಚ್ಚು ಬೇಡಿಕೆ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು. ಹೆಸರಾಂತ ಸಂಗೀತ ಕುಟುಂಬದಿಂದ ಬಂದ ಇವರು ಸಂಗೀತ ಶಾಸ್ತ್ರಜ್ಞರು, ಸಂಗೀತ ಸಂಯೋಜಕರು ಮತ್ತು ಸಂಪನ್ಮೂಲ ವ್ಯಕ್ತಿ. ಎಳವೆಯಲ್ಲಿಯೇ ವಿದ್ವಾನ್ ಶ್ರೀ ಕಾಂತ್ ಇವರು ತಮ್ಮ ತಾಯಿ ಪ್ರಖ್ಯಾತ ಸಂಗೀತ ಗುರು ಶ್ರೀಮತಿ ಲೀಲಾವತಿ ಗೋಪಾಲಕೃಷ್ಣನ್ ಇವರಲ್ಲಿ ಸಂಗೀತ ಅಭ್ಯಾಸ ಆರಂಭಿಸಿದ್ದು, ಹೆಚ್ಚಿನ ತರಬೇತಿಯನ್ನು ಸಂಗೀತ ಕಲಾನಿಧಿ ಶ್ರೀ ಟಿ.ಎಂ. ತ್ಯಾಗರಾಜನ್ ರಲ್ಲಿ ಅಭ್ಯಾಸ ಮಾಡಿದರು. ಭಾರತ ಸರ್ಕಾರ ನೀಡುವ ಪ್ರತಿಷ್ಟಿತ ಸಾಂಸ್ಕೃತಿಕ ವಿದ್ಯಾರ್ಥಿ ವೇತನವನ್ನು ಪಡೆಯುವ ಮೂಲಕ ಬಿ.ಎಸ್. ತ್ಯಾಗರಾಜನ್ ಇವರಲ್ಲಿ ವಿಶೇಷ ಸಂಗೀತ ತರಬೇತಿಯನ್ನು ಪಡೆದಿರುತ್ತಾರೆ. ಸಂಗೀತ ಸಾಧಕರು ಮತ್ತು ಪ್ರತಿಷ್ಠಿತ ಗುರುಗಳ ಸಂಗೀತ ಸಂಯೋಜನೆಗಳ ಮೂಲಕ ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡ ಇವರು ಚೆನ್ನೈಯ ಎ ಗ್ರೇಡ್ ಕಲಾವಿದ. ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಗಣಕ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಇವರು ಶಾಸ್ತ್ರೀಯ ಸಂಗೀತದ ಗ್ರಂಥಾಲಯವೆಂದೇ ಪ್ರಸಿದ್ಧರಾಗಿದ್ದಾರೆ ಮತ್ತು ವಿವಿಧ ಸಂಗೀತ ಸಂಯೋಜಕರ ಸಂಗೀತದ ಮೇಲೆ ಸಂಶೋಧನಾತ್ಮಕ ಅಧ್ಯಯನವನ್ನೂ ಮಾಡಿರುತ್ತಾರೆ. ಸುಮಾರು 350ಕ್ಕಿಂತಲೂ ಹೆಚ್ಚಿನ ದೇವರ ನಾಮಗಳಿಗೆ ರಾಗ ಸಂಯೋಜನೆ ಮಾಡಿರುವುದು ಇವರ ಹೆಗ್ಗಳಿಕೆ. ಇವರ ಸಂಗೀತ ಸಾಧನೆಗೆ ದೊರೆತ ಪುರಸ್ಕಾರಗಳಲ್ಲಿ ಮುಖ್ಯವಾದುದು ‘ಆಸ್ಥಾನ್ ವಿದ್ವಾನ್ ಶ್ರೀ ಕಂಚೀಮಠ ಕಛೇರಿ ಪ್ರಶಸ್ತಿ’, ‘ಚೆನ್ನೈ ಗಾನ ಕಲಾ ಭಾಸ್ಕರ ಪ್ರಶಸ್ತಿ’, ‘ಸಂಗೀತಾ ಕಲಾ ಭಾರತಿ ಪ್ರಶಸ್ತಿ’, ‘ಸಂಗೀತ ಸ್ವರ ಶ್ರೇಷ್ಠ ಪ್ರಶಸ್ತಿ’, ‘ಸತ್ಯ ಗಂಧರ್ವ ಗಾನ ಕಲಾ ಸುಂದರಂ ಪ್ರಶಸ್ತಿ’, ‘ಭಾವ ಗಾನ ಗಂಧರ್ವ ಪ್ರಶಸ್ತಿ’, ‘ಯುವ ಸಾಧಕ ಪುರಸ್ಕಾರ’. ಕಳೆದ 35 ವರ್ಷಗಳಿಂದ ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಹಾಡುಗಾರಿಕೆ, ಕಾರ್ಯಾಗಾರ ಹಾಗೂ ವಿಚಾರಗೋಷ್ಟಿ ಹಾಗೂ ಉಪನ್ಯಾಸಗಳನ್ನು ನೀಡಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರೊಬ್ಬ ಸಂಗೀತದ ಮೇರು ಪ್ರತಿಭೆಯಾಗಿದ್ದಾರೆ.
ಭಾವಸ್ಥ ಕಾರ್ಯಕ್ರಮದ ಮೃದಂಗ ವಾದನದಲ್ಲಿ ಸಹಕರಿಸಿದವರು ವಿದ್ವಾನ್ ಶ್ರೀ ವಿನಯ ನಾಗರಾಜ್ ಇವರು ವಿದ್ವಾನ್ ಎನ್. ನಾರಾಯಣ ಸ್ವಾಮಿಯವರಿಂದ ಮೃದಂಗ ಕಲಿಕೆಯನ್ನು ಆರಂಭಿಸಿ ಪ್ರಸ್ತುತ ಬೆಂಗಳೂರು ಎಸ್.ವಿ. ಬಾಲಕೃಷ್ಣನ್ ಅವರಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ. ಬೆಂಗಳೂರು ಆಲ್ ಇಂಡಿಯಾ ರೇಡಿಯೋದ ಬಿ ಹೈಗ್ರೇಡ್ ಮೃದಂಗ ವಾದನ ಕಲಾವಿದ ಮತ್ತು ಕೊನ್ನಕೋಲ್ ಬಿ ಗ್ರೇಡ್ ಕಲಾವಿದರಾಗಿದ್ದಾರೆ. ದೇಶ ವಿದೇಶಗಳ ಹಲವಾರು ಪ್ರತಿಷ್ಟಿತ ವೇದಿಕೆಗಳಲ್ಲಿ ಪ್ರಸಿದ್ಧ ಶಾಸ್ತ್ರೀಯ ಹಾಡುಗಾರಿಕೆಗೆ ಹಾಗೂ ಭರತನಾಟ್ಯ ಕಾರ್ಯಕ್ರಮಕ್ಕೂ ಹಿಮ್ಮೇಳ ನೀಡಿದ ಅನುಭವ ಇವರಿಗಿದೆ. ಇವರು ಪ್ರಸಿದ್ಧ ನೃತ್ಯಗಾರರು ಹಾಗೂ ಗುರುಗಳಾದ ವಿದ್ವಾನ್ ಶ್ರೀ ಕಿರಣ್ ಸುಬ್ರಹ್ಮಣ್ಯ, ವಿದ್ವಾನ್ ಶ್ರೀ ಪ್ರವೀಣ್ ಕುಮಾರ್, ವಿದ್ವಾನ್ ಶ್ರೀ ಸತ್ಯ ನಾರಾಯಣ ರಾಜು, ವಿದುಷಿ ಶ್ರೀಮತಿ ಇಂದಿರಾ ಕಡಂಬಿ ಹಾಗೂ ವಿದ್ವಾನ್ ಶ್ರೀ ಪಾರ್ಶ್ವನಾಥ ಉಪಧ್ಯಾಯ ಮುಂತಾದವರೊಂದಿಗೆ ಪ್ರದರ್ಶನ ನೀಡಿದ್ದಾರೆ. ಇವರು ಅನೇಕ ನೃತ್ಯ ಪ್ರಸ್ತುತಿಗಳಿಗೆ ಸಂಗೀತ ಸಂಯೋಜನೆ ಮತ್ತು ಅನೇಕ ಧ್ವನಿ ಮುದ್ರಣಗಳ ಭಾಗವಾಗಿದ್ದಾರೆ. ಮೃದಂಗ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ, ಮಾತ್ರವಲ್ಲದೆ ಉಪಾಧ್ಯೆ ಸ್ಕೂಲ್ ಆಫ್ ಡಾನ್ಸ್ ಬಿ ಮ್ಯೂಜಿಕ್ ಇಲ್ಲಿ ಮೃದಂಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಸ್ಟ್ ಪರ್ಕೆಷನಿಸ್ಟ್, ಯುವ ಕಲಾ ಸಾಧಕ ಪ್ರಶಸ್ತಿ, ಯುವ ಕಲಾರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಪ್ರೇಕ್ಷಕರಿಂದ ಬಹು ಮೆಚ್ಚುಗೆಯನ್ನೂ ಪಡೆದಿದ್ದಾರೆ.
ಪಿಟೀಲು ಕೇಶವ ಮೋಹನ್ ಇವರು ವಿದ್ವಾನ್ ಎಚ್.ಕೆ. ನರಸಿಂಹ ಮೂರ್ತಿಯವರ ಶಿಷ್ಯರಾದ ಕೇಶವ ಮೋಹನ್ ಕುಮಾರ್ ಇವರು ಆಕಾಶವಾಣಿ ಮತ್ತು ದೂರದರ್ಶನ ಬಿ ಹೈಗ್ರೇಡ್ ಕಲಾವಿದರಾಗಿದ್ದಾರೆ. ದಕ್ಷಿಣ ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರೊಂದಿಗೆ ನೂರಾರು ಕಾರ್ಯಕ್ರಮಗಳನ್ನು ನೀಡಿದ ಇವರು 2019 ಮತ್ತು 2020ರಲ್ಲಿ ಪ್ರತಿಷ್ಟಿತ ಸರಣಿ ಸಂಗೀತ ಕಛೇರಿಗಳಾದ ಸ್ಪಿರಿಟ್ ಆಫ್ ಯೂಥ್ ಮತ್ತು ಜಿ.ಸಿ.ಎಂ.ಎ.ಗಳಲ್ಲಿ ಭಾಗವಹಿಸಿರುತ್ತಾರೆ. ಏಕವ್ಯಕ್ತಿ ವಯೋಲಿನ್ ಕಛೇರಿ ನಿಡುವುದರಲ್ಲಿ ಸಿದ್ಧ ಹಸ್ತರಾದ ಮೋಹನ್ ಹಲವಾರು ಆಲ್ಬಂ ಸಿನಿಮಾಗಳಿಗೂ ರಾಗ ಸಂಯೋಜನೆ ಮಾಡಿ ಗಮನ ಸೆಳೆದಿರುತ್ತಾರೆ. ವಿಶ್ವದಾದ್ಯಂತ ಅನೇಕ ವಿದ್ಯಾರ್ಥಿಗಳು ಇವರಿಂದ ಪಿಟೀಲು ವಾದನ ಅಭ್ಯಾಸ ಮಾಡುತ್ತಿದ್ದಾರೆ. ಇವರು ಎಂ.ಎಸ್. ಸುಬ್ಬುಲಕ್ಷ್ಮಿ ಸ್ಕಾಲರ್ ಶಿಪ್ 2022, ಸಿ.ಸಿ.ಆರ್.ಟಿ. ಸ್ಕಾಲರ್ ಶಿಪ್, 2014ಕ್ಕೆ ಭಾಜನರಾಗಿದ್ದಾರೆ. ಸಂಗೀತ ಕಛೇರಿಗಳ ಸಂಯೋಜನೆ ಮಾಡುವುದರೊಂದಿಗೆ ಸಂಗೀತ ಸಂಯೋಜಕರೂ ಆಗಿರುವುದು ಶ್ಲಾಘನೀಯ.
ಆರ್ಯಭಟ ಪ್ರಶಸ್ತಿ ವಿಜೇತ ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಅತ್ಯಾಸಕ್ತಿಯ ನೃತ್ಯ ಕಲಾವಿದ. ಶ್ರೇಷ್ಟ ನೃತ್ಯ ಗುರು ಎಂದು ಜನಮಾನಸದಲ್ಲಿ ಗುರುತಿಸಲ್ಪಟ್ಟವರು. ಗುರು ಅಂಬಳೆ ರಾಜೇಶ್ವರಿಯವರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡಿ, ನೃತ್ಯ ಗುರುಗಳಾದ ಶ್ರೀಮತಿ ನರ್ಮದಾ, ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ಇವರಲ್ಲಿ ಭರತನಾಟ್ಯದ ಹೆಚ್ಚಿನ ಶಿಕ್ಷಣ ಪಡೆದು ಅನೇಕ ಹಿರಿಯ ನೃತ್ಯ ಗುರುಗಳ ಕಾರ್ಯಾಗಾರದಲ್ಲಿ ಭಾಗವಹಿಸಿ, ತನ್ನ ಜ್ಞಾನ ಹೆಚ್ಚಿಸಿಕೊಂಡ ಇವರು, ಬೆಂಗಳೂರಿನ ಪ್ರಸಿದ್ಧ ಕಲಾವಿದೆ ಶ್ರೀಮತಿ ವೀಣಾಮೂರ್ತಿ ವಿಜಯ್ ಮತ್ತು ಸಂಧ್ಯಾರಾಣಿ ಇವರಿಂದ ಕೂಚುಪುಡಿ ನೃತ್ಯ ಪ್ರಕಾರವನ್ನೂ ಅಧ್ಯಯನ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ 500ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ ಇವರು ಬೆಂಗಳೂರು ದೂರದರ್ಶನ ಕಲಾವಿದರಾಗಿದ್ದಾರೆ. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ಎನ್ನುವ ನೃತ್ಯ ಸಂಸ್ಥೆಯನ್ನು 1995ರಲ್ಲಿ ಪುತ್ತೂರಿನಲ್ಲಿ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಪತ್ನಿ ಪ್ರೀತಿಕಲಾ ಇವರೊಂದಿಗೆ ನೀಡಿದ ‘ನೃತ್ಯ ಬಂಧ’ವು ‘ಕಲಾದೀಪ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ದೆಹಲಿ ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿದ್ದಾರೆ.
ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ್ ಇವರು ಶಾಂತಲಾ ಪ್ರಶಸ್ತಿ ವಿಜೇತ ಗುರು ಉಳ್ಳಾಲ್ ಮೋಹನ್ ಕುಮಾರ್, ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿದುಷಿಯರಾದ ರಾಜಶ್ರೀ ಉಳ್ಳಾಲ್, ಶಾರದಾಮಣಿ ಶೇಖರ್ ಹಾಗೂ ವಿದ್ವಾನ್ ಪ್ರವೀಣ್ ಬೆಂಗಳೂರು ಇವರೆಲ್ಲರಿಂದ ನೃತ್ಯದಲ್ಲಿ ಮಾರ್ಗದರ್ಶನ ಪಡೆದ ದೂರದರ್ಶನದ ಶ್ರೇಣಿಕೃತ ಕಲಾವಿದರು. ‘ನೃತ್ಯ ಸೌರಭ ನಾಟ್ಯಾಲಯ’ ಉಳ್ಳಾಲ ಇದರ ನೃತ್ಯ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯಮಟ್ಟದಲ್ಲಿ ನಡೆದ ‘ಯುವ ಪ್ರತಿಭೆ’ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡ ಮೊದಲ ಯುವ ಕಲಾವಿದ. ಇವರು ‘ಬೆಸ್ಟ್ ಡಾನ್ಸರ್ ಅವಾರ್ಡ್’, ‘ಟ್ಯಾಲೆಂಟ್ ಹಂಟ್ ಪ್ರಶಸ್ತಿ’, ‘ರಾಣಿ ಅಬ್ಬಕ್ಕ ಯುವ ಕಲಾ ಪ್ರಶಸ್ತಿ’, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿ, ‘ಅಂತರಾಷ್ಟ್ರೀಯ ಪಿಂಗಾರ ಪ್ರಶಸ್ತಿ’, ‘ಜೆ.ಸಿ.ಐ. ಸಾಧನಾಶ್ರೀ ಪ್ರಶಸ್ತಿ’, ದೆಹಲಿಯಲ್ಲಿ ‘ಗಾಯನ ರತ್ನ ರಾಷ್ಟ್ರೀಯ ಪ್ರಶಸ್ತಿ’ ಇತ್ಯಾದಿಗಳಿಂದ ಪುರಸ್ಕೃತರಾಗಿದ್ದಾರೆ. ‘ಬ್ರಹ್ಮಶ್ರೀ ನಾರಾಯಣ ಗುರು’ ನೃತ್ಯ ರೂಪಕ ಪ್ರದರ್ಶನ ನೀಡಿ ಇದರಿಂದ ಬಂದ ಮೊತ್ತವನ್ನು ಕ್ಯಾನ್ಸರ್ ಪೀಡಿತ ಬಡ ಮಕ್ಕಳಿಗೆ ನೀಡುವಂತಹ ಸಮಾಜಮುಖಿ ಕೆಲಸವನ್ನೂ ಮಾಡಿದವರು ಪ್ರಮೋದ್ ಉಳ್ಳಾಲ್.
ಸುಜಯ್ ಶಾನುಭೋಗ್ ಹುಬ್ಬಳ್ಳಿ ಇವರು ತಮ್ಮ ಆರನೇ ವಯಸ್ಸಿನಲ್ಲಿಯೇ ಭರತನಾಟ್ಯದ ಯಾನವನ್ನು ಮೈಸೂರಿನ ವಸುಂಧರಾ ದೊರೆಸ್ವಾಮಿಯವರಲ್ಲಿ ಆರಂಭಿಸಿ, ಈಗ ಚೆನ್ನೈಯ ಗುರು ಪದ್ಮ ಸುಬ್ರಹ್ಮಣ್ಯ ಅವರಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ. ಶಾಸ್ತ್ರೀಯ ಗಾಯನ, ಮೃದಂಗ ಮತ್ತು ಕಳರಿಪಯಟ್ಟುಗಳ ಸಮರ ಕಲೆಯ ತರಬೇತಿಯೂ ಅವರ ಕೌಶಲ್ಯವನ್ನು ತೀಕ್ಷ್ಣಗೊಳಿಸಿದೆ. ಅವರು ತಮ್ಮ ರಂಗ ಪ್ರವೇಶವನ್ನು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಪ್ರದರ್ಶಿಸಿದ್ದಾರೆ. ‘ಅಂತು’ ಕೊಂಕಣಿ ಚಲನಚಿತ್ರದಲ್ಲಿನ ಅಭಿನಯವು ಇವರಿಗೆ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ‘ಅತ್ಯುತ್ತಮ ನಟ ಪ್ರಶಸ್ತಿ’ ತಂದು ಕೊಟ್ಟಿದೆ. ಕಾಸ್ಟ್ಯೂಮ್ ಡಿಸೈನಿಂಗ್, ಛಾಯಾ ಚಿತ್ರಗ್ರಹಣ, ಮೇಕಪ್ ಆರ್ಟ್ ಗಳಲ್ಲಿ ಪ್ರವೀಣರಾಗಿದ್ದಾರೆ. ಬೆಂಗಳೂರು ವಿ.ವಿ.ಯಿಂದ 2 ಚಿನ್ನದ ಪದಕಗಳೊಂದಿಗೆ ಪ್ರದರ್ಶನ ಕಲೆಯಲ್ಲಿ ಎಂ.ಎ. ಪೂರ್ಣಗೊಳಿಸಿದ್ದು, ಪ್ರಸ್ತುತ ಪ್ರೊಫೆಸರ್ ಎಸ್.ಎನ್. ಸುಶೀಲಾ ಇವರ ಮಾರ್ಗದರ್ಶನದೊಂದಿಗೆ ಭರತನಾಟ್ಯದಲ್ಲಿ ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದಾರೆ. ‘ಬಾಲಶ್ರೀ ಪ್ರಶಸ್ತಿ’, ‘ಗೋಪಿ ಕೃಷ್ಣ ಪ್ರಶಸ್ತಿ’, ‘ನೃತ್ಯ ಭಾರತ’, ‘ನೃತ್ಯ ಕೌಮುದಿ’, ‘ಗಂಗೂ ಬಾಯಿ ಹಾನಗಲ್ ಯುವ ಪುರಸ್ಕಾರ’, ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಮಾನ್ಯತಾ ಪುರಸ್ಕಾರಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಶಿವ ಪ್ರಪ್ರಿಯ ಸ್ಕೂಲ್ ಆಫ್ ಡಾನ್ಸಿನಿಂದ ‘ಕಲಾರತ್ನ ಪ್ರಶಸ್ತಿ’ಯ ಗೌರವಗಳಿಗೆ ಪಾತ್ರರಾಗಿದ್ದಾರೆ. ದೇಶ ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ಯಶಸ್ವೀ ಕಾರ್ಯಕ್ರಮ ನೀಡುತ್ತಾ, ನೃತ್ಯ ಸಂಯೋಜನೆಯನ್ನು ಮಾಡುತ್ತಾ, ಸಾಂಸ್ಕೃತಿಕ ರಾಯಭಾರಿಗಳ ತಂಡ ನಿರ್ಮಿಸಿ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆ ನೀಡುತಿರುವುದು ಶ್ರುತ್ಯಾರ್ಹವಾಗಿದೆ. ಕಲೆಯ ಪ್ರಚಾರವನ್ನೇ ಮುಖ್ಯವಾಗಿಟ್ಟುಕೊಂಡಿರುವಂತಹ ‘ಕಲಾಶೃಜಯ’ ಎಂಬ ಒಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾಗಿದ್ದಾರೆ.
ಯುವ ಪ್ರತಿಭಾನ್ವಿತ ಭರತನಾಟ್ಯ ಕಲಾವಿದರಾಗಿರುವ ವಿಜಯಕುಮಾರ್ ಇವರು ಬಿ.ಇ. ಇಲೆಕ್ಟ್ರಿಕಲ್ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದು ಪ್ರಸ್ತುತ ಐ.ಐ.ಎಂ. ಕೋಯಿಕೋಡ್ ಇಲ್ಲಿ ಪಿ.ಎಚ್.ಡಿ. ಅಧ್ಯಯನವನ್ನು ಸಾಂಸ್ಥಿಕ ನಡವಳಿಯಲ್ಲಿ ಮಾಡುತ್ತಿದ್ದಾರೆ. ಭರತನಾಟ್ಯ ಕಲೆಯನ್ನು ಶ್ರೀಮತಿ ಸುಜಾತಾ ಪರಮೇಶ್ವರನ್ ಇವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ಇವರು ಮಾರ್ಗಂ ಸ್ಪರ್ಧೆಯಲ್ಲಿ ‘ಕಲಾ ಪ್ರವೀಣ’ ಪ್ರಶಸ್ತಿಯನ್ನು ಸ್ಪರ್ಧಾ ಗೆಲುವಿನೊಂದಿಗೆ ತಮ್ಮದಾಗಿಸಿಕೊಂಡವರು. ದೇಶದ ನಾನಾ ಕಡೆ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಸಂಗೀತ ಮತ್ತು ಮೃದಂಗದಲ್ಲಿಯೂ ಸಾಧನೆ ಮಾಡಿದ ಇವರು ನಾರದ ಗಾನ ಸಭಾ ಚೆನ್ನೈಯಲ್ಲಿ ಏಕವ್ಯಕ್ತಿ ಗಾಯನ ಕಾರ್ಯಕ್ರಮ ನೀಡಿದ್ದಾರೆ. ಅಖಿಲ ಭಾರತ ‘ಅತ್ಯುತ್ತಮ ನರ್ತಕ ಪ್ರಶಸ್ತಿ’ ಚಿನ್ನದ ಪದಕವನ್ನು ದೆಹಲಿಯಲ್ಲಿ ಗೆದ್ದವರು. ಯುವ ಶಕ್ತಿ-2008, ಯುವ ಸಾಧಕ ಪ್ರಶಸ್ತಿ-2009 ಮತ್ತು ಕಪಾಲೀಶ್ವರ ಶಿವರಾತ್ರಿ ನೃತ್ಯೋತ್ಸವವನ್ನು 2008-2018ರವರೆಗೆ ನಿರಂತರವಾಗಿ ನೀಡಿದವರು. ದೇಶದ ನಾನಾ ಕಡೆ ಯಶಸ್ವೀ ನೃತ್ಯ ಕಾರ್ಯಕ್ರಮ ನೀಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಭರತನಾಟ್ಯದ ಯುವ ಕಲಾವಿದರಿಗೆ ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಮತ್ತು ತಮಿಳುನಾಡು ಎನ್. ನಾಟಕ ವಿದ್ಯಾರ್ಥಿ ವೇತನಕ್ಕೂ ಅರ್ಹರಾಗಿದ್ದಾರೆ.
ವಿದ್ವಾನ್ ಅನಿಲ್ ಅಯ್ಯರ್ ಬೆಂಗಳೂರಿನ ನಾಟ್ಯಗುರು ಪೂರ್ಣಿಮಾ ಗುರುರಾಜ್ ಇವರ ಶಿಷ್ಯರಾಗಿದ್ದು, ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ಕೊಡ ಮಾಡುವ ಯುವ ಕಲಾವಿದ ವಿದ್ಯಾರ್ಥಿ ವೇತನ ಪ್ರಶಸ್ತಿ ವಿಜೇತರು. ದೂರದರ್ಶನದ ಶ್ರೇಣೀಕೃತ ಕಲಾವಿದ. ನೃತ್ಯದ ಜೊತೆಗೆ ಟಿ.ವಿ. ನಾಗರಾಜ್ ಅವರಿಂದ ಕರ್ನಾಟಕ ಸಂಗೀತ ಶಿಕ್ಷಣವನ್ನು ಅಧ್ಯಯನ ಮಾಡುವುದರೊಂದಿಗೆ ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀಯವರ ಬಳಿ ನಾಟಕ ಕಲೆಯನ್ನು ಕರಗತ ಮಾಡಿಕೊಂಡು, ಭಾರತ ದೇಶದ ರಾಯಭಾರಿಗಳಲ್ಲಿ ಒಬ್ಬರಾಗಿ ಚೀನಾ ದೇಶದ ಪ್ರವಾಸ ಮಾಡಿದ್ದಾರೆ. ಯುನೆಸ್ಕೋ ಮತ್ತು ಚೈನಾ ಸರಕಾರ ಆಯೋಜಿಸಿದ ಇಂಟರ್ನ್ಯಾಷನಲ್ ಇಂಟಾಂಜಿಬಲ್ ಕಲ್ಚರಲ್ ಹೆರಿಟೇಜ್ 2013ರಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ‘ಶಿವೋಹಂ’ ಎಂಬ ನೃತ್ಯ ಶಾಲೆಯನ್ನು ತೆರೆಯುವ ಮೂಲಕ ಆಸಕ್ತರಿಗೆ ಭರತನಾಟ್ಯ ವಿದ್ಯೆಯನ್ನೂ ಧಾರೆ ಎರೆದಿದ್ದಾರೆ. ಅನೇಕ ಶಾಲಾ ಕಾಲೇಜುಗಳಲ್ಲಿ ಮನಶಾಸ್ತ್ರಜ್ಞ ಸಮಾಲೋಚಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವುದರೊಂದಿಗೆ ಅನೇಕ ಕಾರ್ಯಾಗಾರ ಹಾಗೂ ಉಪನ್ಯಾಸಗಳನ್ನು ನಡೆಸಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರು ನಟ, ನೃತ್ಯ ಸಂಯೋಜಕ, ನಟುವನ್ನಾರ್, ನೃತ್ಯ ಶಿಕ್ಷಕ ಮತ್ತು ಮನಶಾಸ್ತ್ರಜ್ಞ ಹೀಗೆ ಹಲವು ಪ್ರತಿಭೆಗಳೊಂದಿಗೆ ಬಹುಮುಖಿ ಕಲಾವಿದರಾಗಿರುವುದರೊಂದಿಗೆ ಪ್ರಸ್ತುತ ಕೌನ್ಸಿಲಿಂಗ್ ವಿಚಾರವಾಗಿ ಪಿ.ಎಚ್.ಡಿ. ವ್ಯಾಸಂಗದೊಂದಿಗೆ ಮನೋವಿಜ್ಞಾನ ಮತ್ತು ಥಿಯೇಟರ್ ಕಲೆಗಾಗಿ ‘ಅದಿಶಕ್ತಿ’ ಕಲಾಲಯ ಪಾಂಡಿಚೇರಿಯಲ್ಲಿ ಅತಿಥಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.
ವಿದ್ವಾನ್ ಡಾ. ಸಾಗರ್ ಟಿ.ಎಸ್. ತುಮಕೂರು ಇವರು ಕಲೆ ಮತ್ತು ವಾಸ್ತುಶಿಲ್ಪದಲ್ಲಿ ವಿಶಿಷ್ಟ ಭರವಸೆಯ ವ್ಯಕ್ತಿತ್ವವಾಗಿದ್ದು, ಲೇಖಕರೂ ಆಗಿದ್ದಾರೆ. 6ನೇ ವಯಸ್ಸಿನಲ್ಲಿಯೇ ಭರತನಾಟ್ಯದತ್ತ ಒಲವು ತೋರಿದ ಇವರು ಅಂದಿನಿಂದ ಈ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಬಹು ಶೃದ್ಧೆ ಮತ್ತು ಪ್ರೀತಿಯಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಕರ್ನಾಟಕ ಕಲಾತಿಲಕ ಮತ್ತು ಶಾಂತಲಾ ಕಲಾ ಪ್ರಶಸ್ತಿ ಪುರಸ್ಕೃತ ಕೆ.ಎಂ. ರಾಮನ್ ಇವರ ಮೊದಲ ಗುರು. ಇವರ ಮಾರ್ಗದರ್ಶನದಲ್ಲಿ 13 ವರ್ಷಗಳ ಕಾಲ ಕಠಿಣ ಪಂದ ನಲ್ಲೂರು ಶೈಲಿಯ ಭರತನಾಟ್ಯವನ್ನು ಅಭ್ಯಸಿಸಿದರು. ಹಿರಿಯ ಮಟ್ಟದ ಭರತನಾಟ್ಯ ಅಭ್ಯಾಸವನ್ನು ಪೂರ್ಣಗೊಳಿಸಿದ ನಂತರ ಮಾಸ್ಟರ್ ಆಫ್ ಫೈನ್ ಆರ್ಟ್ಸ್, ಭರತನಾಟ್ಯ ಅಲಂಕಾರ ಲಿಟರೇಚರ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಪಿ.ಎಚ್.ಡಿ. ಶೈಕ್ಷಣಿಕ ಅರ್ಹತೆಗಳನ್ನು ಪಡೆದಿದ್ದಾರೆ. ಬೆಂಗಳೂರು ದೂರದರ್ಶನದ ಶ್ರೇಣಿಕೃತ ಕಲಾವಿದ. ದೇಶ ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಇವರದು. ಕಾರ್ಯಾಗಾರಗಳಿಗಾಗಿ ವಿದೇಶಗಳಿಗೂ ಹೋಗಿ ಬಂದ ಖ್ಯಾತಿ ಇವರದು. ಇವರು ಸ್ಥಾಪಿಸಿದ ತುಮಕೂರಿನ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದಲ್ಲಿ ಅಪೇಕ್ಷಿತ ವಿದ್ಯಾರ್ಥಿಗಳಿಗೆ ಭರತನಾಟ್ಯದ ತರಬೇತಿ ನೀಡುತ್ತಾರೆ. ಅನೇಕ ಪ್ರತಿಷ್ಟಿತ ನಿರ್ಮಾಣಗಳು ಇವರಿಂದ ಆಗಿವೆ. ‘ಕಿಶೋರ ಪ್ರತಿಭೆ’, ‘ನಾಟ್ಯಪ್ರವೀಣ’, ‘ನಾಟ್ಯ ಲಾಂಛನ’, ‘ಭರತ ಶ್ರೀ’, ‘ಅಂತರಾಷ್ಟ್ರೀಯ ವ್ಯಕ್ತಿ ಮಲೇಷಿಯಾ’ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳಿಂದ ಗೌರವ ಪಡೆದ ಸಾಗರ್ ರವರು ಉಪನ್ಯಾಸ ಪ್ರಾತ್ಯಕ್ಷಿಕೆಗಳ ಕಾರ್ಯಾಗಾರ ಮತ್ತು ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಕೆಲವು ಚಿತ್ರಗಳಿಗೆ ಡಾ. ಸಾಗರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
12 Comments
Entire program vizualised in write up. Amazing article. Also each and every artist introduced to the readers is specially appreciated. Thank you roovari on behalf of NKK and myself
One of the best program I have ever witnessed. This is one of Sumangala Rathanakara mam’s greatest contributions towards Kannada language. The songs are so so beautifully composed and sang. We all received goosebumps watching the program. Dancers were extremely good and we all got inspired watching them. Hats off to all the dancers, Himmella and especially to Sumangala Rathnakar Mam for organising this event and inspiring us in every possible way!!!!!!!
One of the best program I have ever witnessed. This is one of Sumangala Rathanakara mam’s greatest contributions towards Kannada language. The songs are so so beautifully composed and sang. We all received goosebumps watching the program. Dancers were extremely good and we all got inspired watching them. Hats off to all the dancers, Himmella and especially to Sumangala Rathnakar Mam for organising this event and inspiring us in every possible way!!!!!!!
A beautiful report on an amazing book written by my teacher Vidushi Smt.Sumangala Ratnakar.
One of the best program I have ever witnessed. This is one of Sumangala Rathanakara mam’s greatest contributions towards Kannada language. The songs are so so beautifully composed and sang. We all received goosebumps watching the program. Dancers were extremely good and we all got inspired watching them. Hats off to all the dancers, Himmella and especially to Sumangala Rathnakar Mam for organising this event and inspiring us in every possible way!!!!!!!
Very beautiful program… All performances were great.
Excellent report.
Ever memorable program. Wonderful artists , wonderful performance. Each and every point has been mentioned clearly in this article. I am glad yo be the part of this wonderful event.
Thank you Roovari you cherished my memories 😊😊🙏
Nice to know about each and every artist🙏 Thank you for your valuable report🙏
Definitely a masterpiece I have witnessed.
Thank u for making justice to the book and the program through ur apt report.
❤❤
Beautiful lyrics, mesmerising singing and instrumental support, mind-blowing choreography combined with excellent execution…. What else is needed for a successful program!! Congratulations Guru Vidushi Sumangala Rathnakar for this great event. Thank you Roovari for reporting this wonderfully and making the readers recollect it.
Beautiful lyrics, mesmerising singing and instrumental support, mind-blowing choreography combined with excellent execution….. What else does a successful program need!! Congratulations Guru Vidushi Sumangala Rathnakar for this great event!! Thank you Roovari for reporting this wonderfully and making the readers recollect the same.