ಮಂಗಳೂರು, ಫೆಬ್ರವರಿ 21: ಅಪರೂಪವೆನಿಸುವ, ಸುಂದರ, ಮನೋಹರ ಕ್ಷಣಗಳಿಗೆ ಸಾಕ್ಷಿಯಾಯ್ತು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣ ಕಳೆದ ಜನವರಿ ೨೧ರಂದು. ಮಂಗಳೂರಿನ ಪ್ರಸಿದ್ಧ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿಯಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯರಿಂದ ನಡೆದ ನೃತ್ಯ ಪ್ರದರ್ಶನ ನಿಜಕ್ಕೂ ಚೇತೋಹಾರಿಯಾಗಿತ್ತು.ಮೊದಲಿಗೆ ನೃತ್ಯವನ್ನು ಪ್ರಸ್ತುತ ಪಡಿಸಿದವರು ಸಂಸ್ಥೆಯ ಈಗತಾನೇ ಬಿರಿಯಲನುವಾಗುತ್ತಿರುವ ಮೊಗ್ಗುಗಳಿಂತಿರುವ ಮುಕುಳ ತಂಡದವರು. ೧೦ ಸದಸ್ಯರ ಈ ತಂಡ ಮೊದಲಿಗೆ ಗಣಪತಿ ಕವಿತ್ವವನ್ನು ಪ್ರಸ್ತುತ ಪಡಿಸಿದರು. ಇದು ಗಣಪತಿಯ ತತ್ವವನ್ನು ಸಾರುವ ನೃತ್ಯ.
ಎರಡನೆಯ ಪ್ರಸ್ತುತಿಯಾಗಿ ನಟರಾಜನನ್ನು ಸ್ತುತಿಸುವ ನಟೇಶ ಕೌತ್ವ ಸುಂದರವಾಗಿ ಮೂಡಿ ಬಂದಿತು.
ಮೂರನೆಯದು ಹರಿ ಹರಿ ರಾಮ ಎಂಬ ಭಜನ್. ಭದ್ರಾಚಲ ರಾಮದಾಸರ ಈ ರಚನೆಯಲ್ಲಿ ಸಂಕ್ಷಿಪ್ತವಾಗಿ ರಾಮನ ಕಥೆಯನ್ನು, ವಿಶೇಷವಾಗಿ ಶಬರಿಯ ಕಥೆಯನ್ನು ನಿರೂಪಿಸಲಾಯಿತು. ಮುಕುಳ ತಂಡದ ಕೊನೆಯ ಪ್ರಸ್ತುತಿಯಾಗಿ ಪುರಂದರ ದಾಸರ ಆಡ ಹೋದಲ್ಲೆ ಮಕ್ಕಳು ಆಡಿಕೊಂಬರು ನೋಡಮ್ಮ ಎಂಬ ದೇವರ ನಾಮದಲ್ಲಿ ಕೃಷ್ಣನ ತುಂಟಾಟಗಳನ್ನು ಅತೀ ಸುಂದರವಾಗಿ ಪ್ರದರ್ಶಿಸಲಾಯಿತು.
ಎರಡನೆಯ ತಂಡ ಮಯೂರ. ಇವರು ನೃತ್ಯದ ಬಗ್ಗೆ ಸ್ವಲ್ಪ ತಿಳಿದ, ಅರ್ಥ ಮಾಡಿಕೊಳ್ಳಬಲ್ಲ, ಅರೆ ಬಿರಿದ ಸುಮಗಳು. ಮಹತಿ ಪವನಾಸ್ಕರ್, ಪೂರ್ವೀ ಕೃಷ್ಣ ಮತ್ತು ಗೌತಮಿ ಸುಧಾಕರ್ ನರ್ತಿಸಿದ ಮಯೂರಿಗಳು.
ಇವರ ಮೊದಲ ಪ್ರಸ್ತುತಿ ದೇವಿಸ್ತುತಿ. ನೃತ್ಯ ಮುಖೇನ ದೇವಿಯ ಎರಡು ಮುಖಗಳ ಅನಾವರಣವನ್ನು ಮಾಡಿದರು. ವಾತ್ಸಲ್ಯ, ಕರುಣೆ, ಮಮತೆಭರಿತ ತಾಯಿಯಾಗಿಯೂ, ದುಷ್ಟ ಸಂಹಾರ ಮಾಡುವ ಉಗ್ರ, ರೌದ್ರ ರೂಪಿಯಾಗಿಯೂ ದೇವಿಯನ್ನು ತೋರಿಸಿದ ರೀತಿ ಅನುಪಮವಾಗಿತ್ತು.
ಈ ತಂಡದ ಎರಡನೆಯ ನೃತ್ಯ ಕಪಾಲಿನೀ ದಯಾನಿಧೀ ಎಂಬ ಶಿವನ ಕುರಿತಾದ ರಚನೆ. ಇದರ ಸಂಚಾರಿಯಲ್ಲಿ ಮಾರ್ಕಾಂಡೇಯನ ಕಥೆಯನ್ನೂ, ಸಮುದ್ರ ಮಥನ ಕಾಲದಲ್ಲಿ ಉದ್ಭವವಾದ ಹಾಲಾಹಲವನ್ನು ಶಿವನು ಕುಡಿದು ಹೇಗೆ ಲೋಕ ರಕ್ಷಕನಾದನೆಂಬುದನ್ನೂ ಅಭಿನಯಿಸಿದ ರೀತಿ ಮನೋಜ್ಞವಾಗಿತ್ತು.
ಮೂರನೆಯದಾಗಿ ವಿದುಷಿಯರಾದ ರೂತ್ ಪ್ರೀತಿಕಾ ಮತ್ತು ಅಂಕಿತಾ ರೈ ಜೋಡಿಯಾಗಿ ನೃತ್ಯ ಪ್ರದರ್ಶನ ಮಾಡಿದರು. ಮೊದಲನೆಯದಾಗಿ ಸಲಾಪಂ ರಾಗದಲ್ಲಿ ಮಧುರೈ ಆರ್. ಮುರಳೀಧರನ್ ಅವರ ರಚನೆಯಾದ ಮೋಗವಣ್ಣಂ ಕಂಡೇನ್ ಎಂಬ ಪದವರ್ಣವನ್ನು ಅಭಿನಯಿಸಿದರು. ಇದು ಕೃಷ್ಣನನ್ನು ಕಂಡು ಗೋಪಿಕೆಯರು ಅಥವಾ ನಾಯಿಕೆಯರು ಹೇಗೆ ಮೋಹಗೊಂಡರೆಂದು ವರ್ಣಿಸುವ ನೃತ್ಯ. ಇದರ ವಿಶೇಷತೆ ಎಂದರೆ ಒಮ್ಮೆ ಒಬ್ಬಾಕೆ ಕೃಷ್ಣನಾಗಿಯೂ, ಇನ್ನೊಬ್ಬಾಕೆ ಗೋಪಿಕೆಯಾಗಿಯೂ ಅಭಿನಯಿಸಿದರೆ, ಇನ್ನೊಮ್ಮೆ ಅದನ್ನೇ ಅದಲು ಬದಲಾಗಿಸಿ ಅಭಿನಯಿಸುವಂತೆ ಮಾಡಿದ್ದು ನೃತ್ಯ ನಿರ್ದೇಶಕಿಯ ಚಾತುರ್ಯ.
ಪುರಂದರ ದಾಸರ ಅಳುವುದ್ಯಾತಕೊ ರಂಗ ಎಂಬ ದೇವರನಾಮ ಮುಂದಿನ ಪ್ರಸ್ತುತಿಯಾಗಿತ್ತು. ಗೋಪಿಕೆಯರಿಬ್ಬರು ಮಗುವನ್ನು ಮಲಗಿಸಲು ಪ್ರಯತ್ನಿಸುತ್ತಾ, ಕೃಷ್ಢನ ಕಥೆಯನ್ನು ನಿರೂಪಿಸಿದ ರೀತಿ ವಿಶಿಷ್ಟವಾಗಿತ್ತು.
ಪೂತನಾವಧೆಯ ಕಥೆಯನ್ನು ಅಭಿನಯಿಸುತ್ತಾ, ವಿಷದ ಹಾಲುಂಡು ನಂಜಾಯಿತೇ ಎನ್ನುವುದು, ಕಾಳಿಂಗ ಮರ್ದನದ ಕಥೆ ಹೇಳುತ್ತಾ ಕಾಲು ನೋವಾಯಿತೇ ಎಂದು ಕೇಳುವುದು, ಗೋವರ್ಧನ ಗಿರಿ ಎತ್ತಿ ಬೆರಳು ನೋವಾಯಿತೇ ಎನ್ನುವುದು ತಾಯಂದಿರ ಕಳಕಳಿಯನ್ನು ತೋರಿಸುತ್ತದೆ. ನಂತರ ಅವರೇ ಕೃಷ್ಣ ನೋವು ಕೊಡುವವನಲ್ಲ, ನೋವನ್ನು ಪರಿಹರಿಸುವವನು, ತಮ್ಮೊಳಗೇ ಕೃಷ್ಣನಿದ್ದಾನೆಂದು ಸಮಾಧಾನ ಹೊಂದುವುದು ನೃತ್ಯದ ಪ್ರೌಢಿಮೆಗೊಂದು ಗರಿ.
ಮೂರೂ ತಂಡಗಳ ನೃತ್ಯ ಪ್ರದರ್ಶನದಲ್ಲಿ ನರ್ತಕಿಯರ ಪರಿಶ್ರಮದ ಜೊತೆಗೆ ನೃತ್ಯ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಪರಿಶ್ರಮವೂ, ಜಾಣ್ಮೆ ಚಾತುರ್ಯಗಳೂ ಎದ್ದು ಕಾಣುತ್ತಿದ್ದವು.
ಕಾರ್ಯಕ್ರಮಕ್ಕೆ ಕಿರೀಟವಿಟ್ಟಂತೆ ಕೊನೆಯ ಪ್ರಸ್ತುತಿ ಸಂಸ್ಥೆಯ ಹಿರಿಯ ಸದಸ್ಯೆ ವಿದುಷಿ ದಿವ್ಯಾ ಭಟ್ ಪ್ರಭಾತ್ ಇವರದು. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾದ ಇವರು ಪ್ರವೃತ್ತಿಯನ್ನೂ ಮುಂದುವರಿಸುತ್ತಿರುವುದು ಹೆಮ್ಮೆಯ ವಿಷಯ. ಇವರು ಮೊದಲಿಗೆ ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ರಚನೆಯಾದ ಶಾರದೇ ಕರುಣಾನಿಧೇ ಎಂಬ ಹಾಡಿಗೆ ನರ್ತಿಸಿದರು. ಅಮೀರ್ ಕಲ್ಯಾಣಿ ರಾಗದಲ್ಲಿ, ಮಿಶ್ರಛಾಪು ತಾಳದ ಈ ನೃತ್ಯದ ಕೊನೆಯಲ್ಲಿ ತಾಯಿ ಶಾರದೆಯ ಪಾದಗಳಿಗೆ ನಮಿಸಿ, ಅಲ್ಲಿಂದಲೇ ನೃತ್ಯಾರಂಭ ಮಾಡುವ ರೀತಿಯಲ್ಲಿ ಅಭಿನಯಿಸಿದ್ದು ಹೃದ್ಯವಾಗಿತ್ತು.
ಎರಡನೆಯ ಪ್ರಸ್ತುತಿ ಪುರಂದರ ದಾಸರ ಆಡಿದನೋ ರಂಗ ಅದ್ಭುತದಿಂದಲಿ ಎಂಬ ದೇವರ ನಾಮ. ರಾಗಮಾಲಿಕೆ ಮತ್ತು ಆದಿ ತಾಳದ ಈ ರಚನೆಯಲ್ಲಿ ಕೃಷ್ಣ ಹೇಗೆ ಕಾಳಿಂಗಮರ್ದನ ಮಾಡಿದನೆಂಬುದನ್ನು ಸಮಗ್ರವಾಗಿ ಅಭಿನಯಿಸಿದರು. ನೃತ್ತ, ನೃತ್ಯ ಎರಡೂ ಮೇಳೈಸಿದ ಪ್ರಸ್ತುತಿ ಪ್ರೇಕ್ಷಕರ ಮನ ಸೂರೆಗೊಂಡಿತು.
ಮೂರನೆಯ ಪ್ರಸ್ತುತಿ ಒಂದು ಲಾಲಿ ಹಾಡು. ವಿಶಿಷ್ಟವೂ ವಿಶೇಷವೂ ಆದ ರಚನೆ. ಸೀತೆ ತನ್ನ ಗರ್ಭದಲ್ಲಿರುವ ಶಿಶುಗಳಿಗೆ ಲಾಲಿ ಹಾಡಿ ಮಲಗಿಸುವಂತೆ ಆರಂಭವಾಗುವ ಗೀತೆ ಮುಂದುವರಿದು ಕುಶ ಲವರು ಶಸ್ತ್ರಾಭ್ಯಾಸ ಮಾಡುವಲ್ಲಿವರೆಗೆ ಬರುತ್ತದೆ. ಮಿಶ್ರ ಛಾಪು ತಾಳ, ದ್ವಿಜಾವಂತಿ ರಾಗದಲ್ಲಿ ಶರತ್ ಆರ್. ಪ್ರಭಾತ್ ರಚಿಸಿದ ಈ ಗೀತೆಗೆ ಮಾಡಿದ ಪ್ರೌಢ ಅಭಿನಯ ಪ್ರೇಕ್ಷಕರನ್ನು ಕಣ್ಣೀರಿಡುವಂತೆ ಮಾಡಿತು. ಗರ್ಭದಲ್ಲಿ ಶಿಶುಗಳು ಗುದ್ದಾಡುವಾಗ “ಕುಶಲವಾಗಿರಲು ಕ್ಲೇಶವೇ?” ಎಂದು ಶಿಶುಗಳನ್ನು ಸಂತೈಸುತ್ತಾ, ಮನಸ್ಸಿನಲ್ಲೇ ರಾಮನನ್ನೂ ಸಮಾಧಾನಿಸುವ ಅಭಿನಯ ಅದ್ಭುತವಾಗಿತ್ತು. ಸಂಪೂರ್ಣ ಹೊಸದೇ ಆದ ಪರಿಕಲ್ಪನೆಯ ಈ ಗೀತ ಮತ್ತು ನೃತ್ಯ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದಿತು.
ಕೊನೆಯಲ್ಲಿ ಚಿಕ್ಕದಾದ, ಚೊಕ್ಕವಾದ, ಶ್ರೀ ಲಾಲ್ ಗುಡಿ ಜಯರಾಮನ್ ಅವರ ದೇಶ ರಾಗ, ಆದಿತಾಳದ ರಚನೆ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಆಡಿದನೋ ರಂಗ ಮತ್ತು ತಿಲ್ಲಾನದ ನೃತ್ಯ ನಿರ್ದೇಶನ ಮಾಡಿದವರು ಗುರು ವಿದ್ಯಾಶ್ರೀ ರಾಧಾಕೃಷ್ಣ ಅವರು. ಶಾರದಾ ಸ್ತುತಿ ಮತ್ತು ಲಾಲಿಹಾಡಿಗೆ ಸ್ವತಃ ದಿವ್ಯಾ ಅವರೇ ನೃತ್ಯ ನಿರ್ದೇಶನ ಮಾಡಿರುತ್ತಾರೆ. ಇದು ವಿದ್ಯಾಶ್ರೀಯವರ ತರಬೇತಿಯ ಫಲ.
– ಶ್ರೀಮತಿ ಜಯಲಕ್ಷ್ಮೀ ಭಟ್, ಬೆಂಗಳೂರು