“ಅಮಣೀ …. ಎಷ್ಟು ಹೊತ್ತು ಬೇಗ ತಯಾರಾಗು ಮಾಸ್ಟ್ರು ಬರ್ತಾರೆ”
“ಆ … ಅಪ್ಪಯ್ಯ ಬಂದೆ ಬಂದೆ”
“ಅಮಣೀ ಗಂಜಿಗೆ ತುಪ್ಪ ಹಾಕಿದ್ದೇನೆ ಆರಿ ತಣ್ಣಗಾಗ್ತದೆ”
“ಈಗ ಹಸಿವಿಲ್ಲ, ಸ್ವಲ್ಪ ಮತ್ತೆ ಊಟ ಮಾಡ್ತೇನಮ್ಮಾ”
ಈ ಸಂಭಾಷಣೆಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್ ಗುಡುತ್ತಿವೆ.
1976ರಲ್ಲಿ ನಾನು ಉಡುಪಿಯಿಂದ ಮಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದು ಲಾಲ್ ಬಾಗ್ ನ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದೆ. ನನ್ನ ಪತಿ ಬೈಕಾಡಿ ಜನಾರ್ದನ ಆಚಾರ್ ಸಂಗೀತದಲ್ಲಿ ನನಗಿದ್ದ ಆಸಕ್ತಿ ಕಂಡು ನನ್ನನ್ನು ಬಲ್ಲಾಳ್ ಬಾಗ್ ನಲ್ಲಿರುವ ಶಾರದಾಮಣಿಯ ಮನೆಗೆ ಕರೆತಂದು ಅವಳ ತಂದೆ ಎನ್.ಕೆ. ಸುಂದರಾಚಾರ್ ರನ್ನು ಪರಿಚಯಿಸಿದರು. ಮುಂದೆ ಇವರ ಸಂಸಾರದ ಸದಸ್ಯರಲ್ಲಿ ನಾನೂ ಒಬ್ಬಳಾದೆ.
ಶ್ರೀ ಎನ್.ಕೆ. ಸುಂದರಾಚಾರ್ ಹಾಗೂ ಶ್ರೀಮತಿ ವಸಂತಿ ಎಸ್. ಅಚಾರ್ ಇವರ ಸುಪುತ್ರಿ ಶ್ರೀಮತಿ ಶಾರದಾಮಣಿ. ಒಬ್ಬ ಅಣ್ಣ ಮೂರು ಜನ ತಮ್ಮಂದಿರ ಮಧ್ಯೆ ಜನಿಸಿದ ತಂದೆ-ತಾಯಿಯ ಪ್ರೀತಿಯ ಮಗಳು. ಬಾಲ್ಯದಿಂದಲೇ ನಿಧಾನದ ಮಾತು, ಯಾರ ಮನಸ್ಸನ್ನೂ ನೋಯಿಸುವ ಮಾತುಗಳಿಲ್ಲ. ಎರಡು ಮಾತಿಲ್ಲದೆ ಇದ್ದದ್ದನ್ನು ಇದ್ದ ಹಾಗೇ ಸ್ವೀಕರಿಸುವ ಗುಣ ಈಕೆಯದು. ನನ್ನ ಮತ್ತು ಶಾರದಾಮಣಿಯ ಭೇಟಿಯಾಗುವಾಗ ಆಕೆ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ. ಯಾವುದೇ ಬೇಕುಗಳ ಬೇಡಿಕೆಗಳನ್ನು ತಂದೆ ಎದುರು ಇಟ್ಟದ್ದು ನನಗೆ ನೆನಪಿಲ್ಲ.
ತನ್ನ 13ನೇ ವರ್ಷ ವಯಸ್ಸಿನಲ್ಲಿ ನಾಟ್ಯಾಚಾರ್ಯ ಮೋಹನ ಕುಮಾರ್ ಉಳ್ಳಾಲ್ ಇವರಿಂದ ಇವಳ ಶಾಸ್ತ್ರೀಯ ನೃತ್ಯ ಭಾರತನಾಟ್ಯದ ಅಭ್ಯಾಸ ಪ್ರಾರಂಭವಾಯಿತು. ಅವಳ ಈ ಪ್ರತಿಭೆಗೆ ಬಾಲ್ಯದಲ್ಲಿ ತಂದೆಯ ಪ್ರೋತ್ಸಾಹ ಅಪೂರ್ವವಾದುದು. 1976ನೇ ಇಸವಿಯಲ್ಲಿಯೇ ಶಾಸ್ತ್ರೀಯ ನೃತ್ಯಕ್ಕೆ ಸಂಭಂಧಪಟ್ಟ ಎಲ್ಲಾ ಹಸ್ತ ಮುದ್ರೆಗಳ ಭಾವಚಿತ್ರಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಚೌಕಟ್ಟಿನೊಳಗೆ ಇಟ್ಟು ಮಗಳು ದಿನಾ ನೋಡುವಂತೆ ವ್ಯವಸ್ಥೆ ಮಾಡಿದ್ದರು.
ನಾನು ಮೊದಲು ಶಾರದಾಮಣಿಯ ನೃತ್ಯ ಪ್ರದರ್ಶನ ನೋಡಿದ್ದು, ಯುಗಾದಿ ಉತ್ಸವದ ಸಂದರ್ಭ ಕಾಳಿಕಾಂಬಾ ದೇವಸ್ಥಾನದ ಕಿಕ್ಕಿರಿದ ಜನದಟ್ಟಣೆ ಮಧ್ಯೆ. ವೇದಿಕೆಯಲ್ಲಿ ತಂದೆ ಎನ್.ಕೆ. ಸುಂದರಾಚಾರ್ ಹಾಡುಗಾರಿಕೆಯಲ್ಲಿ ಮತ್ತು ನಟುವಾಂಗದಲ್ಲಿ ನಾಟ್ಯಾಚಾರ್ಯ ಮೋಹನ ಕುಮಾರ್ ಉಳ್ಳಾಲ್. ನೃತ್ಯ ‘ಕೃಷ್ಣ ನೀ ಬೇಗನೆ ಬಾರೋ’. ಈ ಹಿನ್ನಲೆಯಲ್ಲಿ ಹೆಜ್ಜೆ ಹಾಕಿದ ಶಾರದಾಮಣಿಯ ನೃತ್ಯದಲ್ಲಿರುವ ಜೀವಂತಿಕೆ, ನೈಜತೆ ಕಂಡು ಮೂಕ ವಿಸ್ಮಿತಳಾದವಳು ನಾನು. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನರ್ತಿಸುವುದನ್ನು ನೋಡುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಆದರೆ ಆ ವೇದಿಕೆಯಲ್ಲಿ ಮಯಸ್ಸಿಗೆ ಮೀರಿದ ಅಭಿನಯ, ಭಾವಾಭಿವ್ಯಕ್ತಿ ಕಂಡು ನಾನು ಅಚ್ಚರಿ ಪಟ್ಟಿದ್ದೆ. ಮುಂದೆ ಆಕೆ ಅಭಿನಯಿಸಿದ ಎಲ್ಲಾ ನೃತ್ಯಗಳು ಕಣ್ಣು ಎವೆಯಿಕ್ಕದೆ ನೋಡುವಂತಹುದೇ. ಕೆಲವು ವರ್ಷಗಳ ಹಿಂದೆ “ಶಬರಿ” ನೃತ್ಯ ರೂಪಕದಲ್ಲಿ ಶಾರದಾಮಣಿ ನಿರ್ವಹಿಸಿದ ಶಬರಿಯ ಪಾತ್ರವಂತೂ ಅಮೋಘ, ಹೇಳಲು ಶಬ್ದಗಳೇ ಇಲ್ಲ. ಮುಂದೆ ಶ್ರೀಯುತ ಚಂದ್ರಶೇಖರ್ ಇವರನ್ನು ಕೈ ಹಿಡಿದ ಮೇಲೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿ ಅವಳ ಪ್ರತಿಭೆಗೆ ಪುಟವಿಟ್ಟಂತಾಗಿದೆ.
ತಮ್ಮ ಒಬ್ಬಳೇ ಮಗಳು ಕುಮಾರಿ ಶುಭಮಣಿಯನ್ನು 5ನೇ ತರಗತಿಯ ವಿದ್ಯಾಭ್ಯಾಸ ಮುಗಿದ ಕೂಡಲೇ ಮುಂದೆ ಶಾಸ್ತ್ರೀಯ ನೃತ್ಯದ ಅಭ್ಯಾಸಕ್ಕೆ ದೂರದ ಚೆನ್ನೈಯ ಕಲಾಕ್ಷೇತ್ರಕ್ಕೆ ಸೇರಿಸಿ, ಪಿ.ಯು.ಸಿ.ವರೆಗೆ ಅಲ್ಲಿ ಅಧ್ಯಯನ ಮಾಡಿ, ತದನಂತರ ಕಲೈಮಾಮಣಿ ರಮಾವೈದ್ಯನಾಥನ್ ಇವರ ಬಳಿ ನೃತ್ಯದಲ್ಲಿ ಹೆಚ್ಚು ಸಾಧನೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಈ ಮೂಲಕ ಶಾಸ್ತ್ರೀಯ ನೃತ್ಯ ಲೋಕಕ್ಕೆ ಒಂದು ಅನುಪಮ ಪ್ರತಿಭೆಯನ್ನು ನೀಡಿ, ಅದು ಶಾಸ್ತ್ರೀಯವಾಗಿ ಉಳಿದು ಬೆಳೆಯುವುದಕ್ಕೆ ಅವಕಾಶ ಮಾಡಿಕೊಟ್ಟ ದಂಪತಿಗಳು ವಿದುಷಿ ಶಾರದಾಮಣಿ ಮತ್ತು ಶ್ರೀ ಚಂದ್ರಶೇಖರ್.
ಬಲ್ಲಾಳ್ ಬಾಗ್ ನ ಸನಾತನ ನಾಟ್ಯಾಲಯದ ನಿರ್ದೇಶಕಿಯಾಗಿರುವ ಶಾರದಾಮಣಿ ಮತ್ತು ಅವಳ ಪತಿ ಚಂದ್ರಶೇಖರ್ ತಾವು ಸಮಾಜ ಸೇವಕರೆಂದು ಕರೆಯಿಸಿಕೊಳ್ಳಲು ಸುತರಾಂ ಇಷ್ಟ ಪಡದಿದ್ದರೂ, ಅವರು ಸಮಾಜದ ಬಗ್ಗೆ ಕಾಳಜಿ ಇರುವ ಸಮಾಜ ಸೇವಕರೂ ಹೌದು. ತಮ್ಮ ಮನೆಯಲ್ಲಿ ಈಶಾನ್ಯ ಭಾರತ (ಮೇಘಾಲಯ)ದ ಶಿಕ್ಷಣದಿಂದ ವಂಚಿತರಾದ ಸುಮಾರು 10 ಮಂದಿ ವಿದ್ಯಾರ್ಥಿನಿಯರಿಗೆ ಅಶನ, ವಸನದೊಂದಿಗೆ ತಮ್ಮ ಮನೆಯಲ್ಲಿಯೇ ವಸತಿಯನ್ನೂ ನೀಡಿ, ಶಿಕ್ಷಣವನ್ನು ನೀಡುತ್ತಿದ್ದಾರೆ. ಇದೆಲ್ಲವನ್ನೂ ಬಿಡಿಗಾಸನ್ನೂ ತೆಗೆದುಕೊಳ್ಳದೆ ನಿಸ್ವಾರ್ಥವಾಗಿಯೇ ಮಾಡುತ್ತಿದ್ದಾರೆ.
ಪ್ರಸಿದ್ದ ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್ ಇವರನ್ನು ಅವರ ಜೀವನದ ಸಂಧ್ಯಾ ಕಾಲದಲ್ಲಿ ಸುಮಾರು 10 ವರ್ಷಗಳ ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು, ಕೊನೆಯವರೆಗೂ ತಂದೆಯಂತೆಯೇ ನೋಡಿಕೊಂಡು ಗೌರವಾದರಗಳಿಂದ ಸೇವೆ ಮಾಡಿದವಳು ಶಾರದಾಮಣಿ.
ಈಗಲೂ ಸರಳ ಜೀವನ, ನಯ ವಿನಯದ ಮಾತು, ಹಿರಿಯರಲ್ಲಿ ಗೌರವ ಇದೇ ಶಾರದಾಮಣಿಯ ವಿಶೇಷತೆ. ಸಾಧನೆಯ ಅತ್ಯಂತ ಎತ್ತರಕ್ಕೆ ಬೆಳೆದಿದ್ದರೂ ನನಗೆ ಮಾತ್ರ ಅವಳ ಈ ಗುಣಗಳು ಮತ್ತು ನಗು ಬಾಲ್ಯದ ಅಮಣಿಯನ್ನೇ ನೆನೆಪಿಗೆ ತರುತ್ತದೆ. ನನಗೆ ಈಗಲೂ ಅವಳು ಅಮಣಿಯೇ.
– ಶ್ರೀಮತಿ ರತ್ನಾವತಿ ಜೆ. ಬೈಕಾಡಿ
2 Comments
100%
ಬಹಳ ಸುಂದರವಾದ ಬರವಣಿಗೆ. ರತ್ನಾವತಿ ಮೇಡಂ ಹೆತ್ತವರ ಮನದ ಭಾವನೆಗಳನ್ನು ಅವರ ಅಕ್ಷರಗಳಲ್ಲಿ ತುಂಬಿ ಇರಿಸುತ್ತಾರೆ. ಯಾಕೆಂದರೆ ಶಾರದ ಮಾಡಮ್ಮನ ನಯ ವಿನಯ ಶಿಸ್ತು ಸಮಾಧಾನ ನಾನು ಕಂಡ ಯಾವ ಸ್ತ್ರೀಯಲ್ಲಿ ಎಲ್ಲಾ ಭಾವನೆಗಳಿರುವುದಿಲ್ಲ ಶಾರದ ಮೇಡಂ ಈ ಎಲ್ಲಾ ಒಳ್ಳೆಯ ಗುಣಗಳನ್ನು ಒಬ್ಬರಲ್ಲಿ ಅಡಕವಾಗಿಸಿಕೊಂಡ ಸ್ತ್ರೀ.