ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರ ಪ್ರಸ್ತುತಪಡಿಸುವ ವಿದುಷಿ ಬಿ. ಸುಮಂಗಲಾ ರತ್ನಾಕರ್ ರಾವ್ ರಚಿಸಿರುವ ‘ನೃತ್ಯಕಾವ್ಯ’ ಪುಸ್ತಕ ಲೋಕಾರ್ಪಣೆ, ‘ಭಾವಸ್ಥ’ ಭಕ್ತಿ ಮತ್ತು ನಾಯಕ ಭಾವ ಕೇಂದ್ರಿತ ಭರತನಾಟ್ಯ ಮಾರ್ಗ ನೃತ್ಯ ಪ್ರಸ್ತುತಿ ಕಾರ್ಯಕ್ರಮ ಜೂನ್ 4ರಂದು ಸಂಜೆ 4.30ಕ್ಕೆ ಪುರಭವನದಲ್ಲಿ ನಡೆಯಲಿದೆ ಎಂದು ಬಿ. ಸುಮಂಗಲಾ ರತ್ನಾಕರ್ ರಾವ್ ತಿಳಿಸಿದರು.
ಕಲಾಕೇಂದ್ರದ ಘಟಕವಾದ ಹೀರಾ ಪಬ್ಲಿಕೇಷನ್ಸ್ ಮೂಲಕ ‘ನೃತ್ಯ ಕಾವ್ಯ’ ಭರತನಾಟ್ಯ ಮಾರ್ಗದ ನೃತ್ಯ ಬಂಧಗಳು ಎಂಬ ಭರತನಾಟ್ಯ ನೃತ್ಯ ಸಾಹಿತ್ಯದ ಕನ್ನಡ ಭಾಷೆಯ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಈ ಪುಸ್ತಕದ 9 ಹಾಡುಗಳಿಗೆ ದಕ್ಷಿಣ ಭಾರತದ 6 ಮಂದಿ ಯುವ ನೃತ್ಯ ಕಲಾವಿದರು. ‘ಭಕ್ತಿ, ನಾಯಕ ಭಾವಕೇಂದ್ರಿತ ಭಾವಸ್ಥ ಆತನ ಭಾವಛಾಯೆಗಳು’ ಎಂಬ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.
ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು, ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ, ವಿದ್ವಾನ್ ಸುಜಯ್ ಶ್ಯಾನುಬಾಗ್ ಹುಬ್ಬಳ್ಳಿ, ವಿದ್ವಾನ್ ವಿಜಯಕುಮಾರ್ ಎಸ್. ಚೆನ್ನೈ, ವಿದ್ವಾನ್ ಅನಿಲ್ ಅಯ್ಯರ್ ಬೆಂಗಳೂರು ಮತ್ತು ವಿದ್ವಾನ್ ಸಾಗರ್ ಟಿ.ಎಸ್. ತುಮಕೂರು ಇವರಿಂದ ‘ಭಾವಸ್ಥ’ ನೃತ್ಯ ಕಾರ್ಯಕ್ರಮ ನಡೆಯಲಿದೆ. ಚೆನ್ನೈನ ವಿದ್ವಾನ್ ಶ್ರೀಕಾಂತ ಗೋಪಾಲಕೃಷ್ಣ ಗಾಯನ, ವಿದುಷಿ ಬಿ.ಸುಮಂಗಲಾ ರಾವ್ ನಟುವಾಂಗ, ಬೆಂಗಳೂರಿನ ವಿನಯ್ ನಾಗರಾಜ್ ಮೃದಂಗ ಹಾಗೂ ಮೈಸೂರಿನ ಕೇಶವ ಮೋಹನ ವಯೋಲಿನ್ ಸಾಥ್ ನೀಡಲಿದ್ದಾರೆ.
ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಹಿರಿಯ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸುವುದರೊಂದಿಗೆ ನಟಿ ಡಾ. ಸೀತಾ ಕೋಟೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನಯ್ ಭಟ್ ಪಿ.ಜೆ., ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ಅಧ್ಯಕ್ಷ ಯು.ಕೆ. ಪ್ರವೀಣ್, ಶಿಕ್ಷಣ ತಜ್ಞ ಶ್ರೀರಾಮ ರಾವ್ ಸುರತ್ಕಲ್ ಮತ್ತಿತರರು ಭಾಗವಹಿಸುತ್ತಾರೆ.