ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ’ದ 102ನೇ ಸರಣಿ ಕಾರ್ಯಕ್ರಮವು ದಿನಾಂಕ 15-07-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ರಾಧಿಕಾ ಶೆಟ್ಟಿಯವರ ಶಿಷ್ಯೆಯಾದ ಕುಮಾರಿ ಅದಿತಿ ಲಕ್ಷ್ಮೀ ಭಟ್ ಇವರು ಭರತನಾಟ್ಯ ಕಾರ್ಯಕ್ರಮ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ರೂಢಿಯಂತೆ ಶ್ರೀ ಗಿರೀಶ್ ಕುಮಾರ್ ಇವರಿಂದ ಶಂಖನಾದ ಹಾಗೂ ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಮಂಗಳಮಯ ಓಂಕಾರನಾದ ಹಾಗೂ ಕುಮಾರಿ ದೀಕ್ಷಾ ಇವರಿಂದ ಪ್ರಾರ್ಥನೆ ನಡೆಯಿತು.
ಶಮಾ ಚಂದುಕೂಡ್ಲು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭ್ಯಾಗತರಾಗಿ ಆಗಮಿಸಿದ ಆಕಾಂಶ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಶ್ರೀಶ ಭಟ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಮಾರಿಯರಾದ ಸೃಷ್ಠಿ ಎಂ.ಬಿ, ಸಿಯಾ ಹಾಗೂ ಜೀವಿಕ ಕಜೆಯವರು ಅಭ್ಯಾಗತ, ಕಲಾವಿದ ಹಾಗೂ ಕಲಾವಿದರ ಗುರುಗಳ ಪರಿಚಯ ಮಾಡಿದ ನಂತರ ಕುಮಾರಿ ಪ್ರಣಮ್ಯ ಹಸ್ತಗಳ ಬಗ್ಗೆ ವಿಷಯ ಮಂಡಿಸಿ ಮಾಹಿತಿ ನೀಡಿದರು.
ಪುಷ್ಪಾಂಜಲಿಯೊಂದಿಗೆ ನೃತ್ಯ ಕಾರ್ಯಕ್ರಮ ಆರಂಭಿಸಿದ ಕುಮಾರಿ ಅದಿತಿ ನಂತರ ಕನ್ನಡದ ಜನಪ್ರಿಯ ವರ್ಣವಾದ ನೀಲ ಮೇಘ ಶ್ಯಾಮ ಸುಂದರನ ಎಂಬ ರಾಗಮಾಲಿಕೆಯಲ್ಲಿರುವ ವರ್ಣಗಳನ್ನು ಪ್ರಸ್ತುತಪಡಿಸಿದರು.
ನಾಯಿಕೆ ಶ್ರೀ ಕೃಷ್ಣನಿಗಾಗಿ ಹಂಬಲಿಸುವಂತಹ ಒರ್ವ ವೀರಹೋತ್ಕಂಟಿತ ನಾಯಕಿಯಾಗಿ ಅದಿತಿಯವರು ತಮ್ಮ ಪ್ರಾಮಾಣಿಕ ಪ್ರಯತ್ನ, ನಿಖರವಾದ ಅಂಗಶುದ್ಧ ಹಾಗೂ ಮುಗ್ಧವಾದ ಅಭಿನಯದಿಂದ ನೆರೆದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಈ ವರ್ಣದ ನಂತರ ಅಭ್ಯಾಗತರಾದಂತಹ ಶ್ರೀಶ ಭಟ್ ಇವರು ಕಾರ್ಯಕ್ರಮ ಹಾಗೂ ಅದಿತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಗುರುಗಳಾದಂತಹ ವಿದುಷಿ ರಾಧಿಕಾ ಶೆಟ್ಟಿಯವರು ಮಾತನಾಡಿ, ನೃತ್ಯ ಕ್ಷೇತ್ರಕ್ಕೆ ಆದಿತಿಯ ಪಾದಾರ್ಪಣೆ, ಬೆಳವಣಿಗೆಯ ಹಂತಗಳು ಹಾಗೂ ಆಕೆಯ ವೈಖರಿಗಳನ್ನು ಮನದುಂಬಿ ಹಂಚಿಕೊಂಡರು. ನೃತ್ಯಕಾರ್ಯಕ್ರಮದ ಕೊನೆಯ ಭಾಗವಾಗಿ ತುಳಸೀ ದಾಸರು ರಚಿಸಿದ ವಾತ್ಸಲ್ಯಮಯಿಯಾದ ತಾಯಿ ಕೌಸಲ್ಯೆ ಬಾಲ ರಾಮನನ್ನು ಕರೆಯುವಂತಹ ತುಮಕ್ ಚಲತ್ ಎಂಬ ಅಭಂಗ್ ಪ್ರಸ್ತುತ ಪಡಿಸಿದರು.
ನೃತ್ಯಕಾರ್ಯಕ್ರಮದ ಬಳಿಕ ಸಂಸ್ಥೆಯ ವೇದ ಶಿಷ್ಯೆಯರಾದಂತಹ ವಿದುಷಿ ಶ್ರೀಮತಿ ಸುಮಂಗಲ ಗಿರೀಶ್, ವಿದುಷಿ ಅಪೂರ್ವ ಗೌರಿ ದೇವಸ್ಯ, ಕುಮಾರಿ ವಿಭಾಶ್ರೀ, ಕುಮಾರಿ ಅಕ್ಷಯಾ ಪಾರ್ವತಿ ಇವರು ಕಾರ್ಯಕ್ರಮದ ಬಗ್ಗೆ ತಮ್ಮ ಉತ್ತಮ ಅಭಿಪ್ರಾಯಗಳನ್ನು ಪ್ರೇಕ್ಷಕರ ಮುಂದಿಟ್ಟರು.
ಅದಿತಿಯನ್ನು ಬಾಲ್ಯದಿಂದ ಕಂಡ ಅವಳ ಸಂಬಂಧಿಕರಾದ ಗಣಪಯ್ಯನವರು ಸಭಿಕರ ಪರವಾಗಿ ಅಭಿಪ್ರಾಯವನ್ನು ಹೇಳಿಕೊಳ್ಳುತ್ತಾ ಅವಳ ಸಾಧನೆಯನ್ನು ಕೊಂಡಾಡಿದರು. ಶ್ರೀಮತಿ ಪ್ರಮಿಳಾ ಚುಳ್ಳಿಕಾನ ಎಂಬವರು ಅದಿತಿಯ ನೃತ್ಯವನ್ನು ಆನಂದಿಸಿ ಅಲ್ಲೇ ಕವಿತೆ ರಚಿಸಿ ವಾಚಿಸಿದರು. ಯಕ್ಷಗಾನದ ಮೇರು ಕಲಾವಿದರಾದ ಶ್ರೀಧರ ಭಂಡಾರಿಯವರ ಮಗಳಾದ ಡಾ.ಅನಿಲಾ ದೀಪಕ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.