ಬೆಂಗಳೂರು: ಸುಧೀಂದ್ರ ನೃತ್ಯ ಕಲಾನಿಕೇತನ (ರಿ.) ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ 08-04-2023ನೇ ಶನಿವಾರ ಹಮ್ಮಿಕೊಂಡ ‘ನೃತ್ಯ ಸಿರಿ’ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಒಂದೇ ದಿನದಲ್ಲಿ ಮೂವರು ನೃತ್ಯ ವಿದ್ವಾಂಸರುಗಳು ಕಾರ್ಯಕ್ರಮ ನೀಡಿದ್ದು, ಮೊದಲ ಭಾಗದಲ್ಲಿ ನಾಟ್ಯಗುರು ಡಾ.ಸೌಂದರ್ಯ ಶ್ರೀವತ್ಸ ಇವರ ಶಿಷ್ಯೆಯಾದ ವಿದುಷಿ ಮೈತ್ರಿ ಮಧ್ಯಸ್ಥ ಇವರು ಭರತನಾಟ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಇವರು ನರ್ತನ ಕೀರ್ತನಾ’ ನೃತ್ಯ ಸಂಸ್ಥೆಯ ಕಲಾ ನಿರ್ದೇಶಕರಾಗಿದ್ದಾರೆ. ಇವರು ಭರತನಾಟ್ಯದ ಅದ್ಭುತ ಪ್ರಸ್ತುತಿಯನ್ನು ನೀಡಿದರು. ಭುವನ ಗುರು ಪ್ರಸಾದ್ ಇವರು ಶಾಸ್ತ್ರೀಯ ನೃತ್ಯದ ಒಂದು ಪ್ರಕಾರವಾದ ಕಥಕ್ ನೃತ್ಯ ಕಲಾವಿದೆ. ನಾಟ್ಯಗುರು ಭಾರತಿ ವಿಠಲರ ಶಿಷ್ಯೆಯಾದ ಇವರು ಕಲ್ಪನಾ ಸ್ಕೂಲ್ ಆಫ್ ಡಾನ್ಸ್ ನ ನಿರ್ದೇಶಕಿಯಾಗಿದ್ದಾರೆ. ಎರಡನೇ ಭಾಗದಲ್ಲಿ ಇವರು ಶ್ಲಾಘನೀಯ ಕಥಕ್ ನೃತ್ಯವನ್ನು ಪ್ರಸ್ತುತ ಪಡಿಸಿದರು.
ವಿದುಷಿ ಮೈತ್ರಿ ಮಧ್ಯಸ್ಥ
ವಿದುಷಿ ಭುವನ ಗುರುಪ್ರಸಾದ್
3ನೇ ಭಾಗದಲ್ಲಿ ಆಹ್ವಾನಿತ ಕಲಾದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಸಂಪೂರ್ಣ ರಾಮಾಯಣ ಎಂಬ ವಿಷಯಾಧಾರಿತ ನೃತ್ಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕೆ. ಕುಮಾರ್ ಮತ್ತು ಅನನ್ಯ ಕಲಾ ನಿಕೇತನದ ನಿರ್ದೇಶಕಿಯಾದ ಬೃಂದ ಕೃಷ್ಣ ಅಯ್ಯಂಗಾರ್ ಹಿರಿಯ ನೃತ್ಯ ಗುರುಗಳಾದ ವಿದುಷಿ ಶುಭಾ ಧನಂಜಯ, ವಿದುಷಿ ಸತ್ಯವತಿ ತುಮಕೂರು ಇವರುಗಳು ಈ ಕಾರ್ಯಕ್ರಮವನ್ನು ತುಂಬಾ ಮೆಚ್ಚಿಕೊಂಡರು. ಭಾವಯಾಮಿ ರಘುರಾಮ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ ಬರೆದು ಪ್ರಸ್ತುತ ಪಡಿಸಿದ ಭರತನಾಟ್ಯ ರೂಪಕ. ಸಂಪೂರ್ಣ ರಾಮಾಯಣ ಇಲ್ಲಿ ಇದೆ. ಆರಂಭದಲ್ಲಿ ದಶರಥನ ಪುತ್ರ ಕಾಮೇಷ್ಟಿ ಯಜ್ಞದಿಂದ ಅಂತ್ಯದ ಪಟ್ಟಾಭಿಷೇಕದವರೆಗೆ ಇರುವ ಎಲ್ಲಾ ಕಥಾಭಾಗವನ್ನು ಕೇವಲ ಇಬ್ಬರೇ ಕಲಾವಿದರು ಪ್ರಸ್ತುತ ಪಡಿಸಿದರು. ಬೇರೆ ಬೇರೆ ಸನ್ನಿವೇಷಗಳ ಬೇರೆ ಬೇರೆ ಪಾತ್ರಗಳನ್ನು ಇಬ್ಬರೇ ನಿರ್ವಹಿಸಿ ಪ್ರದರ್ಶನ ನೀಡಿದ್ದು ಈ ಕಾರ್ಯಕ್ರಮದ ವಿಶೇಷತೆ. ಇದು ಎಲ್ಲರಿಂದಲೂ ಮೆಚ್ಚುಗೆ ಪಡೆಯಿತು. ಗ್ರಾಮೀಣ ಪ್ರದೇಶದಿಂದ ಬಂದ ಈ ಪ್ರತಿಭೆಗಳನ್ನು ರಾಜಧಾನಿಯಲ್ಲಿ ಕಲಾವಿದರು, ಪ್ರದರ್ಶಕರು ಅದರಲ್ಲೂ ಪ್ರಸಿದ್ದ ನೃತ್ಯ ಗುರುಗಳಿಂದ ಮೆಚ್ಚುಗೆ ಪಡೆದುದು ಒಂದು ವಿಶೇಷತೆ.
ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್