ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆದ ‘ನೃತ್ಯಾಮೃತ -10’ ಸರಣಿ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2024ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್. ಸಿ. ಆರ್. ಐ. ಸಭಾಗಂಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ಭರತನಾಟ್ಯದಂತಹ ಕಲೆ ಭಾವನೆಗಳ ಮೂಲಕ ವಿಚಾರವನ್ನು ಪ್ರೇಕ್ಷಕರಿಗೆ ಸುಲಭವಾಗಿ ಮುಟ್ಟಿಸುವ ಕೆಲಸವನ್ನು ಮಾಡುತ್ತದೆ. ಈ ನಿಟ್ಟಿನಲ್ಲಿ ನಮಗೆ ಶ್ರೀಕೃಷ್ಣನನ್ನು ಅಂತರಂಗದಲ್ಲಿ ಕಾಣಿಸುವಲ್ಲಿ ನಾಟ್ಯಾರಾಧನಾ ಸಂಸ್ಥೆಯ ಭಾವ ನವನವೀನ’ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ನೃತ್ಯ ಕಲಾವಿದೆ ಹಾಗೂ ಸಂಘಟಕಿಯಾದ ಶ್ರೀಮತಿ ರಾಧಿಕಾ ಶೆಟ್ಟಿ ಮಾತನಾಡಿ ಒಂದೇ ಹಾಡಿಗೆ 5 ವಿಧದ ನೃತ್ಯ ಪ್ರಸ್ತುತಿಯಂತಹ ಅಧ್ಯಯನಾತ್ಮಕ ಕಾರ್ಯಕ್ರಮ ಮಂಗಳೂರಿಗೆ ಮಾತ್ರ ಸೀಮಿತವಾಗದೆ ನಾಡಿನೆಲ್ಲಡೆ ವೇದಿಕೆ ಪಡೆಯಬೇಕು. ನೃತ್ಯ ಕಲಿಯುವ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ವೀಕ್ಷಿಸುವುದರಿಂದ ಕಲಾ ವಿಸ್ತಾರದ ಅರಿವನ್ನು ಸುಲಭವಾಗಿ ಗ್ರಹಿಸಲು ಸಾಧ್ಯ.” ಎಂದರು.
ಕಾರ್ಯಕ್ರಮವನ್ನು ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಶ್ರೀ ಬಿ. ಸುಮಂತ ಕುಮಾರ್ ಉದ್ಘಾಟಿಸಿದರು. ಹಿರಿಯ ನೃತ್ಯ ಗುರುಗಳಾದ ಶ್ರೀ ಉಳ್ಳಾಲ ಮೋಹನ್ ಕುಮಾರ್, ಎಲ್. ಐ. ಸಿ. ಮಂಗಳೂರಿನ ನಿವೃತ್ತ ಹಿರಿಯ ಶಾಖಾಧಿಕಾರಿ ಶ್ರೀ ಎಲ್. ದಿವಾಕರ್, ಶ್ರೀ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳು ಕಾಟಿಪಳ್ಳ ಇದರ ಅಧ್ಯಕ್ಷರಾದ ಶ್ರೀ ಪಿ. ದಯಾಕರ್, ಎನ್. ಐ. ಟಿ. ಕೆ. ಸುರತ್ಕಲ್ ಇಲ್ಲಿ ಪ್ರೊಫೆಸರ್ ಆಗಿರುವ ಡಾ. ಎ. ನಿತ್ಯಾನಂದ ಶೆಟ್ಟಿ, ನಾಟ್ಯಾಂಜಲಿ ಕಲಾ ಅಕಾಡಮಿಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್, ನಾಟ್ಯ ನಿಕೇತನ ಕೊಲ್ಯ ಇಲ್ಲಿನ ಗುರು ವಿದುಷಿ ರಾಜಶ್ರೀ ಉಳ್ಳಾಲ್, ಭರತಾಂಜಲಿ ಕೊಟ್ಟಾರ ಇದರ ನಿರ್ದೇಶಕಿಯಾದ ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ವಿದುಷಿ ಸತ್ಯನುಶ್ರೀ ಗುರುರಾಜ್ ಮುಖ್ಯ ಅಭ್ಯಾಗತರಾಗಿದ್ದರು. ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಸ್ಟಿ ಶ್ರೀ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು. ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದು, ಸಂಸ್ಥೆಯ ನಿರ್ದೇಶಕಿ ವಿದುಷಿ ಸುಮಂಗಲಾ ರತ್ನಾಕರ್ ಸ್ವಾಗತಿಸಿ, ಭವ ಅಮೀನ್ ಸಂಕಮಾರ್ ನಿರೂಪಿಸಿ, ವಿದುಷಿ ಮಲ್ಲಿಕಾ ವೇಣುಗೋಪಾಲ್ ವಂದಿಸಿದರು.
‘ಭಾವ ನವನವೀನ’ ಕಾರ್ಯಕ್ರದಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ನಿರ್ದೇಶನ ಮತ್ತು ನಟುವಾಂಗಂನಲ್ಲಿ ಪುರಂದರದಾಸರ ‘ಪಿಳ್ಳಂಗೋವಿಯ’ ಸಾಹಿತ್ಯಕ್ಕೆ ವಿದುಷಿ ಸುಮಂಗಲಾ ರತ್ನಾಕರ್ ( ಯಶೋದೆ), ವಿದುಷಿ ಅನು ಧೀರಜ್ ( ಮುಗ್ಧ ಕಂದ), ಧರಿತ್ರಿ ಭಿಡೆ (ಪ್ರೇಮಿ), ವೃಂದಾ ರಾವ್ ( ಆಧ್ಯಾತ್ಮಿಕ ) ಹಾಗೂ ಶ್ರೀ ಅನಂತಕೃಷ್ಣ ( ಗೆಳೆಯ ಗೊಲ್ಲ) ನೃತ್ಯ ಪ್ರಸ್ತುತಿ ನೀಡಿ ಜನಮನ ಗೆದ್ದರು. ನಟುವಾಂಗಂನಲ್ಲಿ ಅನಂತ ಕೃಷ್ಣ ಭಟ್, ಹಾಡುಗಾರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪರ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕಾರ್ತಿಕ್ * ವೈಧಾತ್ರಿ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ದತ್ತ ರಾಕೇಶ್ ಬೆಂಗಳೂರು ಶ್ರೇಷ್ಠ ಮಟ್ಟದಲ್ಲಿ ಸಹಕರಿಸಿದ್ದರು.