ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ (ರಿ.) ಉರ್ವ ಇದರ ತ್ರಿಂಶೋತ್ಸವ ಸಮಾರಂಭದ ‘ನೃತ್ಯಾಮೃತ ಸರಣಿ ನೃತ್ಯ ಕಾರ್ಯಕ್ರಮ -3’ ದಿನಾಂಕ 09-04-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಬಾಲ್ಯದಿಂದಲೇ ಭಾರತೀಯ ನೃತ್ಯ, ಸಂಗೀತ ಮುಂತಾದ ಕಲೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಂಡರೆ ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ. ಸಾಂಸ್ಕೃತಿಕ ಕಲೆಗಳು ಮನಸ್ಸು ಕಟ್ಟುವ ಕೆಲಸ ಮಾಡುತ್ತದೆ.” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ನಾರಾಯಣ ಗುರು ಸೇವಾ ಟ್ರಷ್ಟ್ ಅಶೋಕನಗರದ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಮಾತನಾಡಿ “ಪರಿಶ್ರಮವಿಲ್ಲದೆ ಯಶಸ್ಸಿಲ್ಲ. ಈ ನಿಟ್ಟಿನಲ್ಲಿ ಕಳೆದ 30 ವರುಷಗಳಿಂತ ನಿರಂತರವಾಗಿ ಭರತನಾಟ್ಯ ಕಲಾ ಪ್ರಸರಣ ಕಾರ್ಯದಲ್ಲಿ ತೊಡಗಿರುವ ಯಶಸ್ವಿ ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯ.” ಎಂದರು.
ಸಭೆಯಲ್ಲಿ ಮಾಜಿ ಕ.ಸಾ.ಪ ದ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಿರಿಯ ನೃತ್ಯ ಗುರುಗಳಾದ ನಾಟ್ಯಾಲಯ ಉರ್ವದ ನಿರ್ದೇಶಕಿ ವಿದುಷಿ ಕಮಲಾ ಭಟ್, ನಾಟ್ಯ ನಿಕೇತನ ಕೊಲ್ಯ ಕೋಟೆಕಾರ್ ಇದರ ನಿರ್ದೇಶಕಿ ವಿದುಷಿ ರಾಜಶ್ರೀ ಉಳ್ಳಾಲ್ , ಕರ್ನಾಟಕ ಬ್ಯಾಂಕ್ ಉದ್ಯೋಗಿ ಶ್ರೀಮತಿ ವರಲಕ್ಷ್ಮೀ ಸರ್ವೇಶ ರಾವ್ , ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಿದುಷಿ ಸಿಂಧೂರ ಎಲ್. ಎಚ್., ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಮತ್ತು ಟ್ರಸ್ಟಿ ಶ್ರೀ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ನಡೆದ “ಶ್ರೀರಾಮಾಭಿವಂದನ” ನೃತ್ಯ ಕಾರ್ಯಕ್ರಮ ಹಾಗೂ “ಮಾಯಾ ವಿಲಾಸ” ನೃತ್ಯ ರೂಪಕ ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ಪರಿಕಲ್ಪನೆ, ರಚನೆ ಮತ್ತು ನಿರ್ದೇನದಲ್ಲಿ ನಾಟ್ಯಾರಾಧನಾದ ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ಕು. ಭಾರ್ಗವಿ ಮಯ್ಯ ಪ್ರಾರ್ಥಿಸಿ, ವಿದುಷಿ ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿ, ಶ್ರೀಮತಿ ಮಂಜುಳಾ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶೈಲಜ ಜಗತಾಪ್ ವಂದಿಸಿದರು.