ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯ, ಕುಳಾಯಿ – ಹೊಸಬೆಟ್ಟು ಮತ್ತು ಲಲಿತಕಲಾ ಸಂಘ, ಗೋವಿಂದ ದಾಸ ಕಾಲೇಜುಗಳ ಸಹಯೋಗದಲ್ಲಿ ಖ್ಯಾತ ಸಂಗೀತಗಾರ್ತಿ ದಿ. ಶೀಲಾ ದಿವಾಕರ್ ಅವರಿಗೆ ಅರ್ಪಿಸಿದ ‘ಗಾನ ಶಾರದೆಗೆ ನಮನ’ ಗುರುವಿಗೊಂದು ನಾಟ್ಯನಮನ ಕಾರ್ಯಕ್ರಮವು ದಿನಾಂಕ 26-01-2024ರಂದು ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಪ್ರತಿಭಾವಂತ ಸಾಧಕರ ಸಾಧನಾ ಕಾರ್ಯದ ಸ್ಮರಣೆ ನಿರಂತರವಾಗಿ ನಡೆಯಬೇಕು. ಶೀಲಾ ದಿವಾಕರ್ ಸಂಗೀತ ಗುರುಗಳಾಗಿ, ಕಲಾವಿದೆಯಾಗಿ ಅಪಾರ ಕೊಡುಗೆ ಸಲ್ಲಿಸಿ ನಮ್ಮನ್ನಗಲಿದರೂ ಅವರು ರೂಪಿಸಿದ ಗಾನ ಪರಂಪರೆಯನ್ನು ಶಿಷ್ಯವರ್ಗ ಮುನ್ನಡೆಸುತ್ತಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. “ಸಾಂಸ್ಕೃತಿಕ ಲೋಕದಲ್ಲಿ ಅನನ್ಯ ಸಾಧನೆ ನಡೆಸಿರುವ ಗೋವಿಂದ ದಾಸ ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿನಿ ಶೀಲಾ ದಿವಾಕರ್ ಕಲಾಲೋಕಕ್ಕೆ ಕೊಟ್ಟಿರುವ ಕೊಡುಗೆ ಅನನ್ಯವಾದುದು” ಎಂದರು.
ನುಡಿನಮನ ಸಲ್ಲಿಸಿದ ಅಗರಿ ಸಮೂಹ ಸಂಸ್ಥೆಗಳ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡವನ್ನೊಳಗೊಂಡಂತೆ ಅಪಾರ ಶಿಷ್ಯ ಸಮೂಹವನ್ನು ಸೃಷ್ಟಿಸಿದ ಶೀಲಾ ದಿವಾಕರ್ ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಸಂಗೀತ ಕಲಾವಿದರನ್ನು ರೂಪಿಸಿದವರಾಗಿದ್ದು ನಿರಂತರವಾಗಿ ಅವರ ಸ್ಮರಣೆಯನ್ನು ನಡೆಸಬೇಕು.” ಎಂದರು. ದಿವಾಕರ್ ಮಾತನಾಡಿ “ಶೀಲಾ ದಿವಾಕರ್ ಅವರು ಸಂಗೀತವನ್ನು ಬದುಕಿನ ಉಸಿರನ್ನಾಗಿಸಿಕೊಂಡು ಅಪಾರ ಶಿಷ್ಯ ವಾತ್ಯಲ್ಯವನ್ನು ಬೆಳೆಸಿದವರು” ಎಂದರು.
ಶ್ರೀ ಶಾರದ ನಾಟ್ಯಾಲಯದ ನಿರ್ದೇಶಕಿ ವಿದುಷಿ ಭಾರತಿ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಾದ ವಿದುಷಿ ಪ್ರಣತಿ ಸತೀಶ್, ವಿದುಷಿ ಪೂರ್ಣಿಮಾ, ತೇಜಸ್ ರಾನಡೆ, ವಿದುಷಿ ವೈಷ್ಣವಿ ಡಿ., ವಿದುಷಿ ದೀಪಾಲಿ ಡಿ.ಕೆ.. ಅಮೃತಾ ರಾವ್, ಶ್ರದ್ಧಾ ಎಂ., ಚಿನ್ಮಯೀ ಎಸ್. ರಾವ್. ತನ್ಮಯ್ ಸುರೇಶ್ ನೃತ್ಯ ನಮನ ಸಲ್ಲಿಸಿದರು. ಗುರು ವಿದುಷಿ ಭಾರತಿ ಸುರೇಶ್, ವಿದುಷಿ ರಜನಿ ವರುಣ್ ಗೋರೆ, ವಿದ್ವಾನ್ ಕೆ. ಬಾಲಚಂದ್ರ ಭಾಗವತ್, ವಿದ್ವಾನ್ ಪಿ. ಶ್ರೀಧರ ಅಚಾರ್ ಪಾಡಿಗಾರ್, ಮಧು ಕುಮಾರ್ ಹಿಮ್ಮೇಳ ಕಲಾವಿದರಾಗಿ ಭಾಗವಹಿಸಿದ್ದರು.