ಧಾರವಾಡ : ಪ್ರತಿಷ್ಠಿತ ಪ್ರತಿಷ್ಠಾನಗಳಲ್ಲಿ ಪ್ರಮುಖವಾದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ), ಧಾರವಾಡ ತನ್ನ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಲಲಿತಕಲಾ ಚಟುವಟಿಕೆಗಳ ಮೂಲಕ ಕಲಾ ಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಾ ಬಂದಿದೆ. ಇದೇ ದಿನಾಂಕ 09 ಏಪ್ರಿಲ್ 2025, ಬುಧವಾರದಂದು ಸಂಜೆ 5-30 ಗಂಟೆಗೆ ಧಾರವಾಡದ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ‘ನೃತ್ಯ ಸಂಭ್ರಮ’ ಎಂಬ ಭರತನಾಟ್ಯ ಪ್ರದರ್ಶನ ಹಮ್ಮಿಕೊಂಡಿದೆ.
ಈ ‘ನೃತ್ಯ ಸಂಭ್ರಮ’ ಕಾರ್ಯಕ್ರಮವನ್ನು ಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿ (ರಿ.) ಇದರ ನೃತ್ಯ ಗುರುಗಳಾದ ವಿದುಷಿ ಶೃತಿ ನಾಯಕ್ ಹಾಗೂ ವಿದುಷಿ ಅಪರ್ಣ ದೀಕ್ಷಿತ ಇವರ ಶಿಷ್ಯ ವೃಂದದವರು ಪ್ರಸ್ತುತ ಪಡಿಸಲಿದ್ದಾರೆ. ಸುಮಾರು 25 ಮಂದಿ ನೃತ್ಯ ಕಲಾವಿದೆಯರು ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲರಿಪು, ಶಬ್ದಂ, ದೇವರನಾಮ, ರಾಗ ಮಾಲಿಕೆ ಮುಂತಾದವುಗಳನ್ನು ಪ್ರಸ್ತುತಪಡಿಸಿ, ತಮ್ಮ ಕೌಶಲ್ಯ ಪೂರ್ಣವಾದ ನೃತ್ಯಗಳಿಂದ ಮನರಂಜಿಸುವ ಜೊತೆಗೆ ಅಪರೂಪದ ರಸಾನುಭೂತಿಯನ್ನುಂಟು ಮಾಡುವವರಿದ್ದಾರೆ.
ಈ ಕಾರ್ಯಕ್ರಮವನ್ನು ರತಿಕಾ ನೃತ್ಯ ನಿಕೇತನದ ನಿರ್ದೇಶಕರಾದ ವಿದುಷಿ ನಾಗರತ್ನ ನಾಗರಾಜ ಹಡಗಲಿಯವರು ಉದ್ಘಾಟಿಸಲಿದ್ದು, ಡಾ. ರಾಜನ್ ದೇಶಪಾಂಡೆ, ವಿದುಷಿ ಪ್ರಮೋದಾ ಉಪಾಧ್ಯಾಯ, ಶ್ರೀ ಕುಮಾರ್ ಬೆಕ್ಕೇರಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಕೃತಿ ನೃತ್ಯ ಅಕಾಡೆಮಿ (ರಿ), ಬೆಂಗಳೂರು ಇದರ ಅಧ್ಯಕ್ಷರಾದ ಡಾ. ವಿನಾಯಕ ನಾಯಕ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಪರೂಪದ ಕಾರ್ಯಕ್ರಮದಲ್ಲಿ ಕಲಾ ಪ್ರೇಮಿಗಳು ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ‘ನೃತ್ಯ ಸಂಭ್ರಮ’ದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟಿನ ಸಂಚಾಲಕರಾದ ಶ್ರೀ ಸಮೀರ್ ಜೋಶಿಯವರು ವಿನಂತಿಸಿದ್ದಾರೆ.