ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ತ್ರಿಂಶೋತ್ಸವದ ಸರಣಿ ಕಾರ್ಯಕ್ರಮದಲ್ಲಿ ‘ನೃತ್ಯಾಮೃತ 12’ ಭರತನಾಟ್ಯದೊಳಗಿನ ಧ್ವನಿ ಮತ್ತು ಬೆಳಕು ಎಂಬ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 18 ನವಂಬರ್ 2024ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಇವರು ಮಾತನಾಡಿ “ಮನುಷ್ಯ ದೇಹದೊಳಗೆ ಅಡಗಿರುವ ಧ್ವನಿ ಮತ್ತು ಬೆಳಕು ಅದು ದೇವ ಸೃಷ್ಟಿಯ ಜೀವ ಭಾವ. ಅಂತಹ ಜೀವ ಭಾವವೇ ಭರತನಾಟ್ಯದ ಒಳಗೆ ಅಡಗಿರುವ ಧ್ವನಿ ಮತ್ತು ಬೆಳಕು. ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಈ ಪ್ರಪಂಚದೊಳಗೆ ಇಲ್ಲ. ಅಂತಹ ಆಧ್ಯಾತ್ಮದ ಶಕ್ತಿಯೇ ನಾವು ಕಾಣುವ ಧ್ವನಿ ಮತ್ತು ಬೆಳಕು” ಎಂದು ಅಭಿಪ್ರಾಯಪಟ್ಟರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ
ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ನಿರ್ದೇಶಕರಾದ ಶ್ರೀಮತಿ ಸುಭದ್ರ ರಾವ್ ಇವರು ಮಾತನಾಡಿ “ಕಳೆದ 30 ವರ್ಷಗಳಿಂದ ಶ್ರೀಮತಿ ಸುಮಂಗಲ ರತ್ನಾಕರ್ ರಾವ್ ಇವರು ಭರತನಾಟ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ತ್ರಿಂಶೋತ್ಸವದ ಪ್ರತಿಯೊಂದು ಪ್ರಯೋಗಗಳು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ದಾಖಲೆಯಾಗುತ್ತದೆ” ಎಂದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇಲ್ಲಿಯ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ರಂಗ ಕಲಾವಿದ ರಂಗ ನಿರ್ದೇಶಕ ನೀನಾಸಂ ಪದವಿದರ ಬೆಳಕು ವಿನ್ಯಾಸದ ಕಲಾಕಾರ ಶ್ರೀ ಕ್ರಿಸ್ಟೋಫರ್ ಡಿ’ಸೋಜ ನೀನಾಸಂ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನೃತ್ಯ ಸೌರಭ ನಾಟ್ಯಾಲಯ ಉಳ್ಳಾಲ ಇಲ್ಲಿಯ ನಿರ್ದೇಶಕರಾದ ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ ಇವರು ಭಾಗವಹಿಸಿದ್ದರು. ನಾಟ್ಯಾರಾಧನಾ ಕಲಾಕೇಂದ್ರದ ಪ್ರಧಾನ ಟ್ರಸ್ಟಿಯಾಗಿರುವ ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ, ವಿದುಷಿ ಧರಿತ್ರಿ ಭಿಡೆ ಕಾರ್ಯಕ್ರಮ ನಿರ್ವಹಿಸಿದರು. ನಾಟ್ಯಾರಾಧನಾ ಕಲಾಕೇಂದ್ರದ ಟ್ರಸ್ಟಿಯಾಗಿರುವ ಶ್ರೀ ರತ್ನಾಕರ ರಾವ್ ಹಾಗೂ ತ್ರಿಂಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬೈಕಾಡಿ ಶ್ರೀನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.