ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ‘ನೃತ್ಯಾಮೃತ 11’ ಸರಣಿ ನೃತ್ಯ ಕಾರ್ಯಕ್ರಮವು ಮಂಗಳೂರು ಪುರಭವನದಲ್ಲಿ ದಿನಾಂಕ 03 ನವಂಬರ್ 2024ರಂದು ಪ್ರಸ್ತುತಗೊಂಡಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಮಂಗಳೂರಿನ ಸೌರಭ ಕಲಾ ಪರಿಷತ್ತಿನ ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರು ಮಾತನಾಡಿ “ಭರತನಾಟ್ಯ ಕಲಾವಿದೆಯಾಗಿ ಗುರುವಾಗಿ, ಜತೆಗೆ ವಿವಿಧ ಕಲಾ ಪ್ರಕಾರಗಳಲ್ಲಿನ ತಮ್ಮ ತೊಡಗಿಸಿಕೊಳ್ಳುವಿಕೆಯ ಹಿನ್ನೆಲೆಯಲ್ಲಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಕನ್ನಡ ಭಾಷೆಯಲ್ಲಿ ನೃತ್ಯಬಂಧಗಳನ್ನು ರಚಿಸಿ ನೃತ್ಯ ಸಾರಸ್ವತಕ್ಕೆ ನೀಡಿದ ಕೊಡುಗೆ ಗಮನಾರ್ಹ. ಅವುಗಳಲ್ಲಿ ಮೂರು ವಿಭಿನ್ನ ಭಾವಗಳ ಪದವರ್ಣಗಳನ್ನು (ಶೃಂಗಾರ, ಭಕ್ತಿ ಮತ್ತು ದೇಶ ಭಕ್ತಿ) ನಾಡಿನ ಹೆಸರಾಂತ ಕಲಾವಿದರ ಮೂಲಕ ‘ತ್ರಿವರ್ಣ ದೀಪ’ ಕಾರ್ಯಕ್ರಮದಲ್ಲಿ ಬೆಳಕಾಗಿಸಿದ್ದು, ಅಭಿನಂದನೀಯ” ಎಂದು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು “ನೃತ್ಯಾಮೃತದಲ್ಲಿ ಪ್ರತಿ ಬಾರಿಯೂ ಹೊಸತನದೊಂದಿಗೆ ಕಾರ್ಯಕ್ರಮ ಸಂಯೋಜಿಸುತ್ತಿರುವುದು ಶ್ಲಾಘನೀಯ” ಎಂದರು. ಸಮಾರಂಭದ ಮತ್ತೋರ್ವ ಮುಖ್ಯ ಅಭ್ಯಾಗತರಾಗಿದ್ದ ಉಡುಪಿಯ ನೃತ್ಯ ನಿಕೇತನದ ಗುರು ವಿದುಷಿ ಲಕ್ಷ್ಮೀ ಗುರುರಾಜ್ “ಮಂಗಳೂರಿನಲ್ಲಿ ನೃತ್ಯ ಶಿಕ್ಷಕರ ನಡುವೆ ಇರುವ ಸೌಹಾರ್ದ ಭಾವ ತಮ್ಮ ಸಂಸ್ಥೆಯ ಕಾರ್ಯಕ್ರಮದಲ್ಲಿ ಬೇರೆ ನೃತ್ಯ ಸಂಸ್ಥೆಗಳ ನೃತ್ಯ ಗುರುಗಳಿಗೆ, ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವುದು, ಕಲಾ ರಸಿಕರಾಗಿ ಭಾಗವಹಿಸುತ್ತಿರುವುದು ಅನುಸರಣೀಯ” ಎಂದರು.
ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ, ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ನಡೆದ ಸಮಾರಂಭವನ್ನು ಶ್ರೀಶಾ ಸೌಹಾರ್ದ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾದ ಶ್ರೀ ಎಂ.ಎಸ್. ಗುರುರಾಜ್ ಇವರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಬಾಬಾ ಅಟಾಮಿಕ್ ಸೆಂಟರ್ ತಾರಾಪುರದ ನಿವೃತ್ತ ಎ.ಜಿ.ಎಂ. ವಿಶ್ವರಾಜ್ ಐ., ಸಾಹಿತಿ ಮತ್ತು ಬೆಸೆಂಟ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ, ಮುಸ್ಲಿಂ ವಸತಿ ಶಾಲೆ ಅಸೈಗೋಳಿಯ ಶಿಕ್ಷಕರಾದ ಶ್ರೀ ಮಂಜುನಾಥ ಭಟ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ವಿದುಷಿ ಡಾ. ಚೈತ್ರಶ್ರೀ ಗುರುರಾಜ್ ಹಾಗೂ ವಿದುಷಿ ನೇಹಾ ವೈ ದೇವಾಡಿಗ, ಸಂಸ್ಥೆಯ ಟ್ರಸ್ಟಿ ಶ್ರೀ ಬಿ. ರತ್ನಾಕರ್ ರಾವ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.
ಉದ್ಘಾಟನೆ ಕಾರ್ಯಕ್ರಮದ ಬಳಿಕ ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ (ಶೃಂಗಾರ ಭಾವ), ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿಯ ನೃತ್ಯಕಲಾ ದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ (ಭಕ್ತಿ ಭಾವ) ಮತ್ತು ನಾಟ್ಯಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ವೃಂದ ರಾವ್, ಸಾಧ್ವಿ ರಾವ್, ಧರಿತ್ರಿ ಭಿಡೆ, ಹಂಸಿನಿ ಭಿಡೆ ಹಾಗೂ ತನ್ವಿ ಪಿ. ಬೋಳೂರು (ದೇಶಭಕ್ತಿ ಭಾವ) ಪದವರ್ಣ ಪ್ರಸ್ತುತ ಪಡಿಸಿ ಜನಮನ ಗೆದ್ದರು. ಕೊನೆಗೆ ನಾಟ್ಯಾರಾಧನಾ ವಿದ್ಯಾರ್ಥಿ ವೃಂದದಿಂದ “ಹಚ್ಚೇವು ಕನ್ನಡದ ದೀಪ” ನೃತ್ಯ ಪ್ತಸ್ತುತಿಗೊಂಡು ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮವನ್ನು ಉತ್ಸವದಂತೆ ಆಚರಿಸಲಾಯಿತು. ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಡಾ. ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವನೆಗೈದರು. ವಿದುಷಿ ಸುಮಂಗಲಾ ರತ್ನಾಕರ್ ರಾವ್ ಸ್ವಾಗತಿಸಿ, ಧವಳ ಪ್ರಾರ್ಥಿಸಿ, ಶ್ರೀ ಶಶಿರಾಜ್ ರಾವ್ ಕಾವೂರು ವಂದಿಸಿ, ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.