ಪುತ್ತೂರು : ಶ್ರೀ ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ 3ನೇ ವರ್ಷದ ‘ನೃತ್ಯೋತ್ಕ್ರಮಣ -2024’ ಕಾರ್ಯಕ್ರಮವು ದಿನಾಂಕ 17 ಅಕ್ಟೋಬರ್ 2024ರಂದು ಸಂಜೆ 5-30 ಗಂಟೆಗೆ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ತಿಳಿಸಿದ್ದಾರೆ.
ಸಭಾ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಲಾದೀಪ ನೃತ್ಯ ದಂಪತಿಗಳಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಇವರು ಯುಗಳ ನೃತ್ಯ ಪ್ರದರ್ಶನವನ್ನು ಹಿಮ್ಮೇಳ ಸಹಿತ ನೀಡುತ್ತಿದ್ದು, ನಟುವಾಂಗದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ವಿವೇಕ್ ಕೃಷ್ಣ ಬೆಂಗಳೂರು ಸಹಕಾರ ನೀಡಲಿದ್ದಾರೆ. ದೇವ್ ಪ್ರೋ ಸೌಂಡ್ಸ್ ಮಂಗಳೂರು ಧ್ವನಿ ಮತ್ತು ಬೆಳಕು ನೀಡಿದರೆ, ಪುತ್ತೂರು ಭಾವನಾ ಕಲಾ ಆರ್ಟ್ಸ್ ರಂಗಾಲಂಕಾರ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಗಳೂರಿನ ವಿದುಷಿ ಸುಮಂಗಲಾ ರತ್ನಾಕರ್ ಇವರು ರಚಿಸಿರುವ ಪುತ್ತೂರು ಮಹಾಲಿಂಗೇಶ್ವರನ ಪದವರ್ಣವನ್ನು ವಿಶೇಷವಾಗಿ ಪ್ರಥಮ ಬಾರಿಗೆ ಪ್ರದರ್ಶಿಸಲಾಗುತ್ತಿದೆ.