ಮಂಗಳೂರು : ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಸುರತ್ಕಲ್ ಸಂಸ್ಥೆಯ ‘ನೃತ್ಯೋತ್ಸವ 2023-24’ ಕಾರ್ಯಕ್ರಮವು ಖಂಡಿಗೆ ಚೇಳ್ಳಾರು ನಾಟ್ಯಾಂಜಲಿ ಕಲಾ ಮಂದಿರದಲ್ಲಿ ದಿನಾಂಕ 28-01-2024ರಂದು ಜರಗಿತು. ಹಿರಿಯ ನೃತ್ಯ ಗುರು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನಕುಮಾರ್ ಚಾಲನೆ ನೀಡಿದರು. ಉದ್ಯಮಿ ಕೆ. ಶ್ರೀಪತಿ ಭಟ್, ಖ್ಯಾತ ಉದ್ಯಮಿಗಳಾದ ಕೆ. ಪಾಂಡುರಂಗ ಪ್ರಭು, ಸಂಗೀತ ನೃತ್ಯ ನಿರ್ದೇಶಕರಾದ ವಿದುಷಿ ರಾಧಿಕಾ ಎಸ್. ಕಾರಂತ್ ಬೆಂಗಳೂರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದುಬೈಯ ಖ್ಯಾತ ಉದ್ಯಮಿಗಳಾದ ಪುತ್ತಿಗೆ ವಾಸುದೇವ ಭಟ್ ಮತ್ತು ವಾಣಿ ವಾಸುದೇವ ಭಟ್ ಇವರನ್ನು ಸಮ್ಮಾನಿಸಲಾಯಿತು. 2023ರಲ್ಲಿ ಭರತನಾಟ್ಯ ಪರೀಕ್ಷೆಗಳ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಅಕ್ಷತಾ ಶೆಟ್ಟಿ ಹಾಗೂ ರಾಜಶ್ರೀ ಶ್ರೀಕಾಂತ್ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ಕರ್ನಾಟಕ ಕಲಾ ವಿದ್ವಾನ್ ಕೆ. ಚಂದ್ರಶೇಖರ ನಾವಡ ಸ್ವಾಗತಿಸಿ, ವಂದಿಸಿದರು. ಬಳಿಕ ಸಂಸ್ಥೆಯ ಕಿರಿಯ ಹಾಗೂ ಹಿರಿಯ ಕಲಾವಿದರಿಂದ ‘ಭರತನಾಟ್ಯ’ ಕಾರ್ಯಕ್ರಮ ಸಂಪನ್ನಗೊಂಡಿತು.