ಸೋಮವಾರ ಪೇಟೆ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಘಟಕ, ಐಗೂರು ಗ್ರಾಮದ ಕ.ಸಾ.ಪ. ಹೋಬಳಿ ಘಟಕ ಮತ್ತು ಎಡವಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ‘ಎಸ್.ಎಸ್. ರಾಮಮೂರ್ತಿ ದತ್ತಿ ಉಪನ್ಯಾಸ’ ಕಾರ್ಯಕ್ರಮವು ಎಡವಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 07-10-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಐಗೂರು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷರಾದ ಬಾರನ ಭರತ್ ಕುಮಾರ್ ಮಾತನಾಡಿ “ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಭಾಷಾ ಬೆಳವಣಿಗೆಗೆ ತಮ್ಮ ಕೊಡುಗೆ ನೀಡಬೇಕು. ಕನ್ನಡದ ಮಣ್ಣಿನಲ್ಲಿ ಬದುಕುವ ಎಲ್ಲ ಜಾತಿ ಜನಾಂಗದವರು ಕನ್ನಡ ಭಾಷೆಯನ್ನು ಮಾತನಾಡಬೇಕು” ಎಂದರು.
ಐಗೂರುವಿನ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಚಂಗಪ್ಪ ಡಿ.ಎಸ್. ಇವರು ‘ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕನ್ನಡದ ಕವಿಗಳ ಕೊಡುಗೆ’ ಎಂಬ ವಿಚಾರ ಕುರಿತು ಉಪನ್ಯಾಸ ನೀಡಿ “ಕನ್ನಡ ಭಾಷೆಯ ಅಳಿವು ಉಳಿವು ನಮ್ಮ ಕೈಯಲ್ಲಿದ್ದು, ಹೆಚ್ಚು ಹೆಚ್ಚಾಗಿ ಭಾಷೆ ಬಳಸಿದಲ್ಲಿ ಮಾತ್ರ ಕನ್ನಡ ಉಳಿವು ಸಾಧ್ಯ. ಭಾಷಾ ಬೆಳವಣಿಗೆಯಲ್ಲಿ ಹಲವಾರು ಕವಿಗಳು ಹಾಗೂ ಸಾಹಿತಿಗಳ ಕೊಡುಗೆ ಅಪಾರ ಇದೆ. ಅವರ ಸೇವೆಯನ್ನು ನಾವು ಮರೆಯದೆ, ಅವರ ಯೋಚನೆಗಳನ್ನು ಈಡೇರಿಸಬೇಕಿದೆ” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಹೋಬಳಿ ಘಟಕದ ಅಧ್ಯಕ್ಷರಾದ ನಂಗಾರು ಕೀರ್ತಿ ಪ್ರಸಾದ್ ವಹಿಸಿದ್ದರು. ಪ್ರಸ್ತಾವಿಕ ನುಡಿಯಾಡಿದ ಸೋಮವಾರ ಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್.ಡಿ. ವಿಜೇತ್ ಇವರು ಮಾತನಾಡಿ ಯಡವಾರೆಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಮತ್ತು ಘಟಕದ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ವೈ.ಸಿ. ಕುಮಾರ್, ತಾಲೂಕು ಸಮಿತಿ ಕಾರ್ಯದರ್ಶಿ ವೀರರಾಜು, ಘಟಕದ ಕಾರ್ಯದರ್ಶಿ ವಿಶ್ವನಾಥ ರಾಜೇ ಅರಸ್, ತಾಲೂಕು ಸಮಿತಿ ಖಜಾಂಚಿ ಶ್ರೀ ಕೆ.ಪಿ. ದಿನೇಶ್, ಎಂ.ಎಲ್. ಉಮೇಶ್, ಸಿ.ಎಸ್. ನಾಗರಾಜು, ನಿವೃತ್ತ ಡಿ.ವೈ.ಎಸ್.ಪಿ. ಸೋಮಣ್ಣ, ಶಿಕ್ಷಕ ವೃಂದದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಎಲ್ಲಾ ಅತಿಥಿಗಳಿಗೆ ಕೊಡಗಿನ ಸಾಹಿತಿಗಳು ಬರೆದ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಸರಳ ಕುಮಾರಿ ಸ್ವಾಗತಿಸಿ, ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ನಿರೂಪಿಸಿ, ವಂದಿಸಿದರು.